ಬಂಧಿತ ಆರೋಪಿಗಳಿಂದ ಚಿರತೆ ಚರ್ಮ, 6 ಉಗುರು, ಕೋರೆ ಹಲ್ಲು ಹಾಗೂ ಕೃಷ್ಣ ಮೃಗದ ಕೊಂಬು ಜಪ್ತಿ
ಬೆಂಗಳೂರು(ಅ.14): ನಗರದಲ್ಲಿ ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿದ ಖಾಸಗಿ ಶಾಲೆ ಶಿಕ್ಷಕಿ ಸೇರಿದಂತೆ ಐದು ಮಂದಿಯನ್ನು ಸಿಐಡಿ ಅರಣ್ಯ ಘಟಕದ ಸಂಚಾರ ದಳ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಫ್‌ನ ಜಾನ್ ವಿಕ್ಟರ್, ಸುರೇಶ್ ಕುಮಾರ್, ಮೈಸೂರು ರಸ್ತೆಯ ಬಾಪೂಜಿ ನಗರದ ಸಂತೋಷ್ ಕುಮಾರ್, ಸ್ವಾತಿ, ಆಕೆಯ ಪ್ರಿಯಕರ ಭಾರತಿ ನಗರದ ಬಾಲು ಬಂಧಿತರಾಗಿದ್ದು, ಆರೋಪಿಗಳಿಂದ ಚಿರತೆ ಚರ್ಮ, 6 ಉಗುರು, ಕೋರೆ ಹಲ್ಲು ಹಾಗೂ ಕೃಷ್ಣ ಮೃಗದ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಾಗರಬಾವಿ ಸಮೀಪದ ಮಲೆ ಮಾದೇಶ್ವರ ದೇವಾಲಯ ಬಳಿ ಚಿರತೆ ಚರ್ಮ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಡಿವೈಎಸ್ಪಿ ಶ್ರೀನಿವಾಸ್ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ.
ಬೆಂಗ್ಳೂರಲ್ಲಿ ಮಾರಾಟಕ್ಕೆ ಯತ್ನ: 4 ಟನ್ ರಕ್ತ ಚಂದನ ತಮಿಳುನಾಡಲ್ಲಿ ಜಪ್ತಿ
ಕೆಜಿಎಫ್‌ನ ಜಾನ್ ವಿಕ್ಟರ್ ತಂದೆ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಅವರು ಮೃತಪಟ್ಟಬಳಿಕ ಹಣಕ್ಕಾಗಿ ಮನೆಯಲ್ಲಿದ್ದ ಚಿರತೆ ಚರ್ಮ, ಉಂಗುರು ಹಾಗೂ ಕೃಷ್ಣ ಮೃಗದ ಕೊಂಬುಗಳನ್ನು ಮಾರಾಟಕ್ಕೆ ಆತ ಯೋಜಿಸಿದ್ದ. ಆಗ ತನ್ನ ಸ್ನೇಹಿತ ಸಂತೋಷನ ಮೂಲಕ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಸ್ವಾತಿ ಪರಿಚಯವಾಗಿದೆ. ಹಣದಾಸೆಗೆ ಈ ಕೃತ್ಯ ಸಹಕರಿಸಲು ಒಪ್ಪಿದ ಸ್ವಾತಿ, ಇದಕ್ಕೆ ತನ್ನ ಪ್ರಿಯಕರ ಬಾಲುನನ್ನು ಸಹ ಆಕೆ ಬಳಸಿ ಕೊಂಡಿದ್ದಳು. ನಾಗರಬಾವಿ ಸಮೀಪ ಗ್ರಾಹಕರಿಗೆ ಚಿರತೆ ಚರ್ಮ ಮಾರಾಟ ಮಾಡಲು ಆರೋಪಿಗಳು ಬರುವ ಬಗ್ಗೆ ಬಾತ್ಮೀದಾರರ ಮೂಲಕ ಮಾಹಿತಿ ಸಿಕ್ಕಿತು. ಅಂತೆಯೇ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ.
ಹಲವು ವರ್ಷಗಳಿಂದ ಜಾನ್ ಮನೆಯಲ್ಲಿ ಚಿರತೆ ಚರ್ಮ, ಉಂಗುರು ಹಾಗೂ ಕೃಷ್ಣಮೃಗದ ಕೊಂಬುಗಳಿದ್ದವು. ತನ್ನ ತಂದೆ-ತಾಯಿ ಮೃತಪಟ್ಟಬಳಿಕ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಚಿರತೆ ಚರ್ಮ ಮಾರಾಟಕ್ಕೆ ಮುಂದಾಗಿದ್ದ ಸಂಗತಿ ವಿಚಾರಣೆ ವೇಳೆ ಬಾಯ್ಬಿಟ್ಟಎಂದು ಅಧಿಕಾರಿಗಳು ತಿಳಿಸಿದ್ದಾರೆ.
