ನಾಗಮಂಗಲ ಅರಣ್ಯದಲ್ಲಿ ಕದಿದ್ದ ರಕ್ತ ಚಂದನ ತಮಿಳುನಾಡಲ್ಲಿ ಜಪ್ತಿ, ಮಹಾಲಕ್ಷ್ಮಿ ಲೇಔಟ್ ಪೊಲೀಸರ ಕಾರ್ಯಾಚರಣೆ, ಐವರ ಬಂಧನ
ಬೆಂಗಳೂರು(ಅ.14): ನಗರದಲ್ಲಿ ರಕ್ತ ಚಂದನ ಮಾರಾಟಕ್ಕೆ ಯತ್ನಿಸಿದ ಐದು ಮಂದಿಯನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು, ಆರೋಪಿಗಳಿಂದ 1.4 ಟನ್ ರಕ್ತ ಚಂದನ ಜಪ್ತಿ ಮಾಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸಿದ್ದರಾಜು, ಪ್ರಜ್ವಲ್, ವೆಂಕಟೇಶ, ದೇವರಾಜ್ ಹಾಗೂ ತಮಿಳುನಾಡಿನ ಗೋವಿಂದಸ್ವಾಮಿ ಬಂಧಿತರಾಗಿದ್ದು, ಆರೋಪಿಗಳಿಂದ 1.4 ಟನ್ ರಕ್ತ ಚಂದನ ಹಾಗೂ ಜೀಪು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಇಸ್ಕಾನ್ ದೇವಾಲಯ ಸಮೀಪ ಜ್ಯೂಸ್ ಫ್ಯಾಕ್ಟರಿ ಬಳಿ ಗೋಣಿ ಚೀಲದಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ಮಾರಲು ಆರೋಪಿಗಳು ತಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.
ನಾಗಮಂಗಲ ತಾಲೂಕಿನ ಸಿದ್ದರಾಜು, ಪ್ರಜ್ವಲ್, ವೆಂಕಟೇಶ್ ಹಾಗೂ ದೇವರಾಜ್ ಮರ ಕಡಿಯುವ ಕೆಲಸದಲ್ಲಿ ತೊಡಗಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಾಲಪುರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರಕ್ತ ಚಂದನ ಮರಗಳನ್ನು ಕಡಿದು ಮಾರಾಟಕ್ಕೆ ಯತ್ನಿಸಿದ್ದರು. ಆಗ ಅವರಿಗೆ ಮಧ್ಯವರ್ತಿ ಮೂಲಕ ತಮಿಳುನಾಡಿನ ಗೋವಿಂದಸ್ವಾಮಿ ಪರಿಚಯವಾಗಿದೆ. ನಾಗಮಂಗಲದ ಆರೋಪಿಗಳ ಬಳಿ ಕೇವಲ 180 ಗ್ರಾಂ ತೂಕದ ರಕ್ತದ ಚಂದನ ಮರದ ತುಂಡು ಮಾತ್ರ ಇತ್ತು. ಈ ತಂಡ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಗೋವಿಂದಸ್ವಾಮಿ ಮನೆ ಮೇಲೆ ದಾಳಿ ನಡೆಸಿದಾಗ 1.3 ಟನ್ ರಕ್ತ ಚಂದನ ಮರ ಪತ್ತೆಯಾಯಿತು.
ಬೆಂಗಳೂರು: ಸಂಪ್‌ನಲ್ಲಿತ್ತು 2.68 ಕೋಟಿಯ ರಕ್ತಚಂದನ, ನಾಲ್ವರು ರೈತರು ಸೇರಿ ಐವರ ಸೆರೆ
ಗೋವಿಂದಸ್ವಾಮಿ ವೃತ್ತಿಪರ ರಕ್ತಚಂದನ ಕಳ್ಳ ಸಾಗಾಣಿಕೆದಾರನಾಗಿದ್ದು, ಆತನ ಮೇಲೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆಂಧ್ರಪ್ರದೇಶದ ಕಾಡಿನಲ್ಲಿ ಕಡಿದು ರಕ್ತ ಚಂದನ ಮರದ ತುಂಡುಗಳನ್ನು ಆತ ಸಂಗ್ರಹಿಸಿದ್ದ. ಮಹಾಲಕ್ಷ್ಮಿ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ಡಿ.ಎಲ್.ರಾಜು ಹಾಗೂ ಸಬ್ ಇನ್‌ಸ್ಪೆಕ್ಟರ್ ಲೇಪಾಕ್ಷಿ ತಂಡ ಆರೋಪಿಗಳನ್ನು ಬಂಧಿಸಿದೆ.
