Asianet Suvarna News Asianet Suvarna News

ಬೆಂಗಳೂರು: 10 ವರ್ಷ ಪಿಕ್‌ಪಾಕೆಟ್‌ ಮಾಡಿ ಮೊದಲ ಸಲ ಸಿಕ್ಕಿಬಿದ್ದ ಗ್ಯಾಂಗ್‌..!

ಕೆಎಸ್ಸಾರ್ಟಿಸಿ, ಬಿಎಂಟಿಸಿ, ಬಸ್‌ಗಳು, ನಿಲ್ದಾಣಗಳಲ್ಲಿ ಕೈಚಳಕ ತೋರಿಸುತ್ತಿದ್ದ ಗ್ಯಾಂಗ್‌, ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದ ಐವರು. 

Five Arrested For Theft Cases in Bengaluru grg
Author
First Published Jul 26, 2023, 5:00 AM IST

ಬೆಂಗಳೂರು(ಜು.26): ನಗರದಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಬಸ್‌ಗಳು ಹಾಗೂ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ಎಗರಿಸುತ್ತಿದ್ದ ಐವರ ಗ್ಯಾಂಗ್‌ವೊಂದನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಸವನಗುಡಿಯ ಕದ್ರಿವೇಲು, ಕನ್ಯಾಕುಮಾರ್‌, ಮಹೇಶ್‌, ಸುಂದರ್‌ರಾಜ್‌ ಹಾಗೂ ಸೈಯದ್‌ ಸಲೀಂ ಬಂಧಿತರು. ಆರೋಪಿಗಳಿಂದ .1 ಲಕ್ಷ ನಗದು ಹಾಗೂ 27 ಗ್ರಾಂ ತೂಕದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗಾಗಿ .1 ಲಕ್ಷವನ್ನು ಜೇಬಿನಲ್ಲಿ ಇರಿಸಿಕೊಂಡು ಬಿಎಂಟಿಸಿ ಬಸ್‌ನಲ್ಲಿ ತೆರಳುವಾಗ ದುಷ್ಕರ್ಮಿಗಳು ಪಿಕ್‌ ಪ್ಯಾಕೇಟ್‌ ಮಾಡಿದ್ದರು.

ಬಸ್ ಹತ್ತುವ ವೇಳೆ ಮಹಿಳೆಯ ಚಿನ್ನಾಭರಣ ಕಳ್ಳತನ; ಇಬ್ಬರು ಸರಗಳ್ಳಿಯರ ಬಂಧನ

ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಗೂ ಅಧಿಕ ಸಮಯದಿಂದಲೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ನೆಲೆಸಿದ್ದ ಆರೋಪಿಗಳು ಬಳಿಕ ಒಂದೇ ಮನೆಯಲ್ಲಿ ಕುಟುಂಬದ ಸದಸ್ಯರಂತೆ ಒಟ್ಟಿಗೆ ನೆಲೆಸಿದ್ದರು. ನಗರದಲ್ಲಿ ಪ್ರಯಾಣಿಕರ ದಟ್ಟಣೆ ಇರುವ ಬಸ್‌ಗಳು, ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಜೇಬಿಗೆ ಕತ್ತರಿ ಹಾಕುತ್ತಿದ್ದರು. ಉಪ್ಪಾರಪೇಟೆ, ಮೆಜೆಸ್ಟಿಕ್‌ನ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು, ವಿಲ್ಸನ್‌ಗಾರ್ಡನ್‌, ಸದಾಶಿವನಗರ, ಸಂಪಂಗಿರಾಮನಗರ, ಕೆ.ಆರ್‌.ಮಾರ್ಕೆಟ್‌, ಕಲಾಸಿಪಾಳ್ಯ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಆರೋಪಿಗಳು ತಮ್ಮ ಕೈ ಚಳಕ ತೋರುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಒಮ್ಮೆಯೂ ಸಿಕ್ಕಿರಲಿಲ್ಲ:

ಬೆಳಗ್ಗೆ ಹಾಗೂ ಸಂಜೆ ವೇಳೆ ಆರೋಪಿಗಳು ಜೇಬುಗಳ್ಳತನಕ್ಕೆ ಇಳಿಯುತ್ತಿದ್ದರು. ಮನೆಯಿಂದ ಒಟ್ಟಿಗೆ ಹೊರಟು ಕೆ.ಆರ್‌.ಮಾರುಕಟ್ಟೆಬಳಿ ಒಂದೊಂದೇ ಮಾರ್ಗ ಆಯ್ದುಕೊಂಡು ಹೊರಡುತ್ತಿದ್ದರು. ರಾತ್ರಿ ವೇಳೆ ಎಲ್ಲರೂ ಮನೆಯಲ್ಲಿ ಒಟ್ಟಾಗಿ ತಾವು ಕಳವು ಮಾಡಿದ ಮಾಲುಗಳನ್ನು ಹಂಚಿಕೊಳ್ಳುತ್ತಿದ್ದರು. ಒಂದು ದಶಕಕ್ಕೂ ಅಧಿಕ ಸಮಯದಿಂದ ಆರೋಪಿಗಳು ಜೇಬುಗಳ್ಳತನ ಕಸುಬು ಮಾಡುತ್ತಿದ್ದರೂ ಒಮ್ಮೆಯೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಬಸ್‌ಗಳು ಹಾಗೂ ಬಸ್‌ ನಿಲ್ದಾಣಗಳಲ್ಲಿ ಪಿಕ್‌ ಪ್ಯಾಕೇಟ್‌ ಒಳಗಾದವರ ಪೈಕಿ ಹೆಚ್ಚಿನವರು ದೂರು ನೀಡುತ್ತಿರಲಿಲ್ಲ. ಇತ್ತೀಚೆಗೆ ಜೇಬುಗಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ನಿಗಾವಹಿಸಿ, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗ್ಯಾಂಗ್‌ನಲ್ಲಿ ಇನ್ನೂ ಹಲವರು ಸಕ್ರಿಯರಾಗಿದ್ದು, ತಲೆಮರೆಸಿಕೊಂಡಿರುವ ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಶಂಕಿತ ಉಗ್ರರ ಬಂಧನ ಬೆನ್ನಲ್ಲೇ ಪರಪ್ಪನ ಜೈಲಲ್ಲಿ ದಿಢೀರ್‌ ರೇಡ್‌

ಬಸ್‌ ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾ ನೀಡಿದ ಸುಳಿವು

ಇತ್ತೀಚೆಗೆ ಜೇಬುಗಳವು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ತನಿಖೆಗೆ ಇಳಿದ ಪೊಲೀಸರು ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಕೆ.ಅರ್‌.ಮಾರ್ಕೆಟ್‌, ಕಲಾಸಿಪಾಳ್ಯ ಸೇರಿದಂತೆ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಬಸ್‌ ನಿಲ್ದಾಣಗಳು ಸೇರಿದಂತೆ ಸುತ್ತಮುತ್ತಲ 150ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ವೇಳೆ ಸಿಕ್ಕ ಸುಳಿವಿನ ಆಧಾರದ ಮೇಲೆ ಕಾರಾರ‍ಯಚರಣೆ ನಡೆಸಿ ಒಬ್ಬಬ್ಬರೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ವಾಂತಿ ಮಾಡುವ ನಾಟಕ ಆಡಿ ಜನರ ಜೇಬಿಗೆ ಕತ್ತರಿ

ಜೇಬುಗಳವು ಸಂಬಂಧ ಬಹುತೇಕರು ದೂರು ನೀಡುವುದಿಲ್ಲ ಎಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದ ಆರೋಪಿಗಳು ಜೇಬುಗಳವನ್ನೇ ವೃತ್ತಿಯಾಗಿ ಸ್ವೀಕರಿಸಿದ್ದರು. ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಬಿಎಂಟಿಸಿ ಬಸ್‌ಗಳಲ್ಲೇ ಹೆಚ್ಚಿನದಾಗಿ ತಮ್ಮ ಕೈ ಚಳಕ ತೋರುತ್ತಿದ್ದರು. ಕೆಲ ಪ್ರಕರಣಗಳಲ್ಲಿ ಒಬ್ಬರೇ ಕೃತ್ಯ ಎಸಗಿದರೆ, ಕೆಲ ಪ್ರಕರಣಗಳಲ್ಲಿ ಇಬ್ಬರು, ಮೂವರು ಸೇರಿಕೊಂಡು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದರು. ಪ್ರಯಾಣಿಕರಿಂದ ಭರ್ತಿಯಾಗಿರುವ ಬಸ್‌ಗಳಲ್ಲಿ ವಾಂತಿ ಮಾಡಲು ಪ್ರಯತ್ನಿಸುವಂತೆ ಒಬ್ಬ ಪ್ರಯಾಣಿಕರ ಗಮನ ತನ್ನತ್ತ ಸೆಳೆದರೆ, ಮತೊಬ್ಬ ಜೇಬಿಗೆ ಕತ್ತರಿ ಹಾಕುತ್ತಾನೆ. ಹೀಗೆ ಆರೋಪಿಗಳು ನಾನಾ ರೀತಿಯಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಪಿಕ್‌ಪ್ಯಾಕೇಟ್‌ ಮಾಡುತ್ತಿದ್ದರು.

Follow Us:
Download App:
  • android
  • ios