ಲೋಕಾಯುಕ್ತ ಪೊಲೀಸರ ಹೆಸರಲ್ಲಿ ಕರೆ ಮಾಡಿ ಬ್ಲ್ಯಾಕ್‌ಮೇಲ್‌, ಮನೆ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ, ಹಣ ಸುಲಿಗೆ ಐವರ ಸೆರೆ, ಸುಲಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದ ಮಾಸ್ಟರ್‌ ಮೈಂಡ್‌, ಸರ್ಕಾರಿ ವೃತ್ತಿ ಬಿಟ್ಟು ವಂಚನೆಗಿಳಿದವನ ವಿರುದ್ಧ 29ಕ್ಕೂ ಹೆಚ್ಚು ಪ್ರಕರಣ. 

ಬೆಂಗಳೂರು(ಮಾ.31): ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಮನೆ ಮೇಲೆ ದಾಳಿ ನಡೆಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆಂಧ್ರ ಮೂಲದ ತಂಡವೊಂದು ಸಿದ್ದಾಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಾಗೇಶ್ವರ್‌ ರೆಡ್ಡಿ ಉಪ್ಪಲೂರ್‌, ಬುಚುಪಲ್ಲಿ ವಿನೀತ್‌ ಕುಮಾರ್‌ ರೆಡ್ಡಿ, ಶ್ರೀನಿವಾಸ್‌ ರೆಡ್ಡಿ ಹಾಗೂ ಶಿವಕುಮಾರ್‌ ರೆಡ್ಡಿ ಬಂಧಿತರಾಗಿದ್ದು, ಆರೋಪಿಗಳಿಂದ ಐದು ಮೊಬೈಲ್‌ ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ(ಕೆಐಎಡಿಬಿ) ನಗರ ಯೋಜನೆಯ ಜಂಟಿ ನಿರ್ದೇಶಕಿ ಆಶಾ ಭಟ್‌ ಅವರಿಗೆ ಲೋಕಾಯುಕ್ತ ಅಧಿಕಾರಿ ‘ಅಶೋಕ್‌ ರಾವ್‌’ ಹೆಸರಿನಲ್ಲಿ ಕರೆ ಮಾಡಿ .1 ಲಕ್ಷವನ್ನು ಆರೋಪಿಗಳು ವಸೂಲಿ ಮಾಡಿದ್ದರು. ಈ ಬಗ್ಗೆ ಆಶಾ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಸಿದ್ದಾಪುರ ಪೊಲೀಸರು, ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ವಂಚಕರ ತಂಡವನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Suicide case: ಅನುಮಾನಾಸ್ಪದವಾಗಿ ಪತ್ನಿ ಆತ್ಮಹತ್ಯೆ: ಪತಿಯಿಂದ ದೂರು

ವಂಚನೆಯಿಂದ ಹಣ ಸಂಪಾದನೆ

ಈ ಆರೋಪಿಗಳು ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಈ ತಂಡ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ವಂಚನೆ ಕೃತ್ಯಗಳನ್ನು ಎಸಗಿದೆ. ಈ ಮೋಸಗಾರರ ಬಳಗಕ್ಕೆ ನಾಗೇಶ್ವರ್‌ ರಾವ್‌ ಮಾಸ್ಟರ್‌ ಮೈಂಡ್‌ ಆಗಿದ್ದು, ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಈತ ಮೊದಲು ರೈಲ್ವೆ ಇಲಾಖೆ ನಂತರ ಯುರೇನಿಯಂ ಕಾರ್ಪೋರೇಷನ್‌ ಆಫ್‌ ಇಂಡಿಯಾದಲ್ಲಿ ಕಾರ್ಯನಿರ್ವಹಿಸಿ, ಕೊನೆಗೆ ಮೋಜಿನ ಜೀವನಕ್ಕೆ ಸರ್ಕಾರಿ ಉದ್ಯೋಗ ತೊರೆದು ಪಾತಕ ಲೋಕಕ್ಕೆ ಅಡಿಯಿಟ್ಟಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

2010ರಲ್ಲಿ ತನ್ನ ಸಹಚರ ಜತೆ ಸೇರಿ ಟ್ರಾವೆಲ್‌ ಟಿಕೆಟ್‌ಗಳನ್ನು ಬುಕ್‌ ಮಾಡಿ ಹಣ ದೋಚುತ್ತಿದ್ದ ನಾಗೇಶ್ವರ್‌ ವಿರುದ್ಧ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಓನ್‌ಟೌನ್‌ ಠಾಣೆಯಲ್ಲಿ 9 ಮೋಸದ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದು ಮತ್ತೆ ಆತ ಚಾಳಿ ಮುಂದುವರೆಸಿದ್ದ. 2013ರಲ್ಲಿ ಎಟಿಎಂಗಳಲ್ಲಿ ಗ್ರಾಹಕರು ಹಣ ಡ್ರಾ ಮಾಡುತ್ತಿದ್ದಾಗ ಅವರ ಹಿಂದೆ ನಿಂತುಕೊಂಡು ಕಾರ್ಡ್‌ ನಂಬರ್‌ ಮತ್ತು ಪಿನ್‌ ನೋಡಿಕೊಂಡು ನಂತರ ಆ ಗ್ರಾಹಕರ ಹೆಸರಿನಲ್ಲಿ ಅಕ್ರಮವಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುತ್ತಿದ್ದ. ಈ ಸೈಬರ್‌ ವಂಚನೆ ಸಂಬಂಧ ಆತನ ಮೇಲೆ ಹೈದರಾಬಾದ್‌ ಸಿಐಡಿಯಲ್ಲಿ 20 ಪ್ರಕರಣಗಳು ದಾಖಲಾಗಿದ್ದವು. ಆಗ ಮತ್ತೆ ಆತ ಜೈಲು ಪಾಲಾಗಿದ್ದ.

2016ರಲ್ಲಿ ಬೆಂಗಳೂರಿನ ಆಕ್ಸಿಸ್‌ ಬ್ಯಾಂಕ್‌ ಸಿಬ್ಬಂದಿ ಗೋಪಿ ಕೃಷ್ಣ ಎಂಬಾತನಿಗೆ ಹಣದಾಸೆ ತೋರಿಸಿ ನಾಗೇಶ್ವರ್‌, ಆತನಿಂದ ಆ ಬ್ಯಾಂಕ್‌ನ ಖಾತೆದಾರರ ವಿವರಗಳನ್ನು ಪಡೆದುಕೊಂಡು ಆನ್‌ಲೈನ್‌ ಶಾಪಿಂಗ್‌ ಮಾಡುತ್ತಿದ್ದ. ಈ ಕೃತ್ಯ ಬಯಲಾಗಿ ನಾಗೇಶ್ವರ್‌ ಹಾಗೂ ಆಕ್ಸಿಸ್‌ ಬ್ಯಾಂಕ್‌ ಸಿಬ್ಬಂದಿ ರಮಣ, ಕೃಷ್ಣ, ರಮೇಶ್‌ ಬಂಧಿತರಾಗಿದ್ದರು.

ಆನ್‌ಲೈನ್‌ನಲ್ಲಿ ಮೊಬೈಲ್‌ ನಂಬರ್‌ ಸಂಗ್ರಹಿಸಿ ಕೃತ್ಯ

ಇತ್ತೀಚೆಗೆ ಕೆಐಎಡಿಬಿಯ ಜಂಟಿ ನಿರ್ದೇಶಕಿ ಆಶಾ ಭಟ್‌ ಅವರಿಗೆ ನಾಗೇಶ್ವರ್‌ ರಾವ್‌ ಕರೆ ಮಾಡಿ, ತಾನು ಅಶೋಕ್‌ರಾವ್‌ ಲೋಕಾಯುಕ್ತದಿಂದ ಕರೆ ಮಾಡುತ್ತಿದ್ದು, ನಿಮ್ಮ ಮನೆ ಮೇಲೆ ದಾಳಿ ಮಾಡುತ್ತಿದ್ದೇವೆ. ನೀವು ಹಣವನ್ನು ನೀಡದಿದ್ದರೆ ನಿಮ್ಮ ವಿರುದ್ಧ ಎಡಿಜಿಪಿಗೆ ವರದಿ ನೀಡುತ್ತೇನೆ’ ಎಂದು ಬೆದರಿಸಿದ್ದ. ಈ ಮಾತಿಗೆ ಹೆದರಿದ ಆಶಾ ಅವರು, ಆರೋಪಿ ಬ್ಯಾಂಕ್‌ ಖಾತೆಗೆ .1 ಲಕ್ಷ ವರ್ಗಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

82 ವರ್ಷದ ತಂದೆ​ಯನ್ನೇ ಮನೆ​ಯಿಂದ ಹೊರ ಹಾಕಿದ ಮಗ - ಸೊಸೆ!

ಈ ಕರೆ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಆಶಾ ತಂದಿದ್ದಾರೆ. ಆಗ ಲೋಕಾಯುಕ್ತದ ಬೆಂಗಳೂರು ನಗರ ಜಿಲ್ಲೆ ಎಸ್ಪಿ ಅಶೋಕ್‌ ಹೆಸರಿನಲ್ಲಿ ಕಿಡಿಗೇಡಿಗಳಿಂದ ವಂಚನೆ ನಡೆದಿರುವುದು ಗೊತ್ತಾಗಿದೆ. ಕೂಡಲೇ ಸಿದ್ದಾಪುರ ಠಾಣೆಗೆ ಆಶಾ ದೂರು ನೀಡಿದರು. ಆಶಾ ಅವರಿಗೆ ಆರೋಪಿಗಳಿಂದ ಬಂದಿದ್ದ ಮೊಬೈಲ್‌ ಕರೆ ಆಧರಿಸಿ ತನಿಖೆ ನಡೆಸಿ ವಂಚಕರನ್ನು ಸೆರೆ ಹಿಡಿದಿದ್ದಾರೆ.

ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗಳನ್ನು ಈ ತಂಡ ಸಂಗ್ರಹಿಸುತ್ತಿತ್ತು. ಕೆಲವು ಬಾರಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಅವರು ಗಾಳ ಹಾಕಿದ್ದರು. ಕೆಐಎಡಿಬಿ ವೆಬ್‌ಸೈಟ್‌ನಲ್ಲಿ ಆಶಾ ಅವರ ಮೊಬೈಲ್‌ ಸಂಖ್ಯೆ ಪಡೆದು ಹಣ ಸುಲಿಗೆ ಮಾಡಿತ್ತು. ಇದೇ ರೀತಿ ತೆಲಂಗಾಣ ಹಾಗೂ ಆಂಧ್ರಪ್ರದೇಶ ಅಧಿಕಾರಿಗಳಿಗೂ ಅಲ್ಲಿನ ವಿಚಕ್ಷಣಾ ದಳದ ಹೆಸರಿನಲ್ಲಿ ಕರೆ ಮಾಡಿ ಆರೋಪಿಗಳು ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.