ಶಿವಮೊಗ್ಗ: ಪೊಲೀಸರ ಎದೆಗೆ ಇರಿದ ಆರೋಪಿಗೆ ಗುಂಡೇಟು..!
* ರಾಬರಿ ಪ್ರಕರಣ ಆರೋಪಿ ಶಾಹಿದ್ ಖುರೇಶಿ ಬಲಗಾಲಿಗೆ ಗುಂಡು
* ಬಂಧಿಸಲು ತೆರಳಿದ್ದ ದೊಡ್ಡಪೇಟೆ ಠಾಣೆ ಸಿಬ್ಬಂದಿ ಗುರುನಾಯಕ್, ರಮೇಶ್ ಮೇಲೆ ಹಲ್ಲೆ
* ಘಟನೆ ನಡೆದ ಕೆಲವೇ ಗಂಟೆಯಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಆರೋಪಿ ಪತ್ತೆ
ಶಿವಮೊಗ್ಗ(ಜೂ.22): ಬಂಧನ ವೇಳೆ ಪೊಲೀಸ್ ಸಿಬ್ಬಂದಿಯ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ರಾಬರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಹಿದ್ ಖುರೇಶಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಲಗಾಲಿನ ಮಂಡಿಯ ಕೆಳಗೆ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಬರಿ ಪ್ರಕರಣದಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಆರೋಪಿ ಶಾಹಿದ್‌ನನ್ನು ಮಂಗಳವಾರ ಕೆ.ಆರ್.ಪುರಂ ಬಳಿ ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ಅವರು ಬಂಧಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಶಾಹಿದ್ ಸಿಬ್ಬಂದಿ ರಮೇಶ್ ಅವರ ಎಡಗೈಗೆ ಇರಿದಿದ್ದಾನೆ. ಆಗ ಗುರುನಾಯಕ್ ಈತನನ್ನು ಹಿಡಿಯಲು ಮುಂದಾದಾಗ ಅವರ ಎದೆಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಈ ಘಟನೆ ನಡೆದ ಕೆಲವೇ ಗಂಟೆಯಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಶಾಹಿದ್‌ನನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಮತ್ತೆ ಚಾಕುವಿನಿಂದ ದಾಳಿಗೆ ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಪೊಲಿಸರು ಗುಂಡು ಹಾರಿಸಿದ್ದಾರೆ.
ಕೆಲವು ಮುಸ್ಲಿಂ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾ ರಾಜ್ಯ ಮಾಡಲು ಹೊರಟ್ಟಿದ್ದಾರೆ: ಈಶ್ವರಪ್ಪ
ಬಂಧನ ವೇಳೆದ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗುರು ನಾಯಕ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೇಪ್ರಸಾದ್ ತಿಳಿಸಿದ್ದಾರೆ.