ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಮಧ್ಯರಾತ್ರಿವರೆಗೂ ಪಾರ್ಟಿ ಮಾಡಿದ ಸೆಲೆಬ್ರಿಟಿಗಳು. ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಸೈಮಾ 2022 ಅವಾರ್ಡ್ (SIIMA Award 2022) ಕಾರ್ಯಕ್ರಮ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತ್ತು. 10ನೇ ಅವಾರ್ಡ್ ಕಾರ್ಯಕ್ರಮ ಆಗಿದ್ದ ಕಾರಣ ನಮ್ಮನ್ನು ಅಗಲಿರುವ ಕನ್ನಡ ಮಾಣಿಕ್ಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಅರ್ಪಣೆ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗ ಸ್ಟಾರ್‌ಗಳು ಭಾಗಿಯಾಗಿದ್ದರು. ಪ್ರತಿಯೊಬ್ಬ ಸ್ಟಾರ್ ಟೀಂಗೂ ಬೆಂಗಳೂರಿನ ಐಷಾರಾಮಿ ಹೋಟೆಲ್ ಜೆಡಬ್ಲ್ಯೂ ಮ್ಯಾರಿಯೇಟ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಇದೇ ಹೋಟೆಲ್‌ನಲ್ಲಿ ಸಕ್ಸಸ್ ಪಾರ್ಟಿ ಕೂಡ ನಡೆದಿದೆ. 

ಪಾರ್ಟಿ ಮಾಡಿದಕ್ಕೆ ಎಫ್‌ಐಆರ್:

ವಿಠಲ್ ಮಲ್ಯ (Vittal mallya road) ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್‌ ಹೋಟೆಲ್‌ನಲ್ಲಿ (JW Marriott) ಸೆಪ್ಟೆಂಬರ್ 12ರಂದು ಸೈಮಾ ಅವಾರ್ಟ್ ಪಾರ್ಟಿ ನಡೆದಿದೆ. ಒಂದು ಗಂಟೆ ನಡೆಯಬೇಕಿದ್ದ ಪಾರ್ಟಿ ಸಮಯ ಮೀರಿ ನಡೆದಿದೆ. ಕಾನೂನು ಪಾಲನೆಯ ಪರಿಶೀಲನೆಗಾಗಿ ಪೊಲೀಸರು ಹೋಟೆಲ್‌ಗೆ ರಾತ್ರಿ 12 ಗಂಟೆಗೆ ಭೇಟಿ ನೀಡಿದ್ದಾರೆ, ಒಂದು ಗಂಟೆಯಲ್ಲಿ ಪಾರ್ಟಿ ಮುಗಿಸಬೇಕು ಎಂದು ಸೂಚನೆ ಕೂಡ ನೀಡಿದ್ದಾರೆ ಆದರೆ ಪಾರ್ಟಿ ಮಧ್ಯರಾತ್ರಿ 3.30 ವರೆಗೂ ನಡೆದಿದೆ ಎನ್ನಲಾಗಿದೆ. ಹೀಗಾಗಿ ಎಫ್‌ಐಆರ್‌ ದಾಖಲಾಗಿದೆ. 

ಯಾರ್ಯಾರ ಮೇಲೆ ಎಫ್‌ಐಆರ್:

ಅವಧಿ ಮೀರಿ ಮಧ್ಯರಾತ್ರಿ ವರೆಗೂ ಪಾರ್ಟಿ ಮಾಡಿರುವುದಕ್ಕೆ ಹೋಟೆಲ್‌ ಮೇಲೆ ಎಫ್‌ಐಆರ್ ದಾಖಲಾಗಿದೆ. ಹೋಟೆಲ್‌ನ ಮ್ಯಾನೇಜರ್ ಮತ್ತು ಪಾರ್ಟಿ ಆರ್ಗನೈಸರ್‌ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಕೆಪಿ ಆಕ್ಟ್‌ ಪ್ರಕರಣ ದಾಖಲಿಸಿ ಕಬ್ಬನ್ ಪಾರ್ಟ್‌ ಪೊಲೀಸರು (Cubbon Park Police station) ತನಿಖೆ ನಡೆಸುತ್ತಿದ್ದಾರೆ. ಜೆಡಬ್ಲ್ಯೂ ಮ್ಯಾರಿಯೇಟ್​ ಮೇಲೆ ಈ ಹಿಂದೆಯೂ ಎರಡು ಸಲ ಅವಧಿ ಮೀರಿ ಪಾರ್ಟಿ ಮಾಡಿದ್ದರು ಎಂದು ದೂರು ದಾಖಲಾಗಿತ್ತು.ಕಬ್ಬನ್ ಪಾರ್ಕ್‌ ಇನ್ಸಪೆಕ್ಟರ್ ಚೈತನ್ಯಾರಿಂದ ಹೋಟೆಲ್‌ ಪರಿಶೀಲನೆ ನಡೆದಿದ್ದು ಅವರ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

ಸೆಲೆಬ್ರಿಟಿಗಳಿದ್ರಾ? 

ಸೈಮಾ ಅವಾರ್ಡ್‌ ಕಾರ್ಯಕ್ರಮಕ್ಕೆಂದು ಈ ಹೋಟೆಲ್‌ನಲ್ಲಿ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಮತ್ತು ಅವರ ತಂಡಕ್ಕೆ ಹೋಟೆಲ್‌ ರೂಮ್‌ ಬುಕ್‌ ಆಗಿತ್ತು ಎನ್ನಲಾಗಿದೆ. ಪಾರ್ಟಿ ಅಲ್ಲೇ ನಡೆದಿರುವ ಕಾರಣ ಈ ಹೋಟೆಲ್‌ನಲ್ಲಿ ವಾಸವಿದ್ದು ಸೆಲೆಬ್ರಿಟಿ ಆಂಡ್ ಟೀಂ ಭಾಗಿಯಾಗಿರಬಹುದು ಎನ್ನುವ ಅನುಮಾನವಿದೆ.