ಮುಧೋಳ: ತಂದೆಯ ಕೊಂದು 30 ತುಂಡು ಕತ್ತರಿಸಿ ಬೋರ್ವೆಲ್‌ಗೆ ಎಸೆದ..!

ದೆಹಲಿಯಲ್ಲಿ ಶ್ರದ್ಧಾ ವಾಕರ್‌ ಎಂಬ ಯುವತಿಯನ್ನು ಆಕೆಯ ಪ್ರಿಯಕರ ಅಫ್ತಾಬ್‌ ಎಂಬಾತ ಕೊಂದು 35 ತುಂಡುಗಳಾಗಿ ಕತ್ತರಿಸಿ ಎಸೆದ ಘಟನೆ ಕಳೆದ ತಿಂಗಳು ದೇಶದಲ್ಲಿ ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಮುಧೋಳದಲ್ಲೂ ಶವವನ್ನು ತುಂಡು ಮಾಡಿದ ಘಟನೆ ನಡೆದಿದೆ.

Father Killed and Cut into 30 Pieces and Thrown into the Borewell at Mudhol in Bagalkot grg

ಬಾಗಲಕೋಟೆ(ಡಿ.14): ಮದ್ಯಪಾನ ಮಾಡಿ ತಾಯಿ ಹಾಗೂ ತನಗೆ ಕಿರುಕುಳ ನೀಡುತ್ತಾನೆ ಎಂದು ಕೋಪಗೊಂಡ ಪುತ್ರನೊಬ್ಬ ರಾಡ್‌ನಿಂದ ಹೊಡೆದು ತನ್ನ ತಂದೆಯನ್ನೇ ಕೊಂದು 30ಕ್ಕೂ ಹೆಚ್ಚು ತುಂಡು ಮಾಡಿ ಪಾಳು ಬಿದ್ದ ಬೋರ್‌ವೆಲ್‌ಗೆ ಹಾಕಿರುವ ಹೇಯ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.

ದೆಹಲಿಯಲ್ಲಿ ಶ್ರದ್ಧಾ ವಾಕರ್‌ ಎಂಬ ಯುವತಿಯನ್ನು ಆಕೆಯ ಪ್ರಿಯಕರ ಅಫ್ತಾಬ್‌ ಎಂಬಾತ ಕೊಂದು 35 ತುಂಡುಗಳಾಗಿ ಕತ್ತರಿಸಿ ಎಸೆದ ಘಟನೆ ಕಳೆದ ತಿಂಗಳು ದೇಶದಲ್ಲಿ ಸಂಚಲನ ಮೂಡಿಸಿತ್ತು. ಅದರ ಬೆನ್ನಲ್ಲೇ ಮುಧೋಳದಲ್ಲೂ ಶವವನ್ನು ತುಂಡು ಮಾಡಿದ ಘಟನೆ ನಡೆದಿದೆ.

Shraddha Murder Case: ಮೃತದೇಹ ಪೀಸ್‌ ಮಾಡಿದ ಬಳಿಕ ಆಕೆಯ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟು ಶ್ರದ್ಧಾ ಮುಖ ನೋಡ್ತಿದ್ದ ಪಾತಕಿ..!

ಮುಧೋಳ ಹೊರವಲಯದ ಬುದ್ನಿ ಪಿ.ಎಂ. ಗ್ರಾಮದ ನಿವಾಸಿ ಪರಶುರಾಮ ಕುಳಲಿ (54) ಎಂಬಾತನೇ ಹತ್ಯೆಗೀಡಾದವ. ಪ್ರಕರಣ ಸಂಬಂಧ ಆತನ ಪುತ್ರ ವಿಠ್ಠಲ ಪರಶುರಾಮ ಕುಳಲಿ (21)ಯನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ವಿಠ್ಠಲನಿಗೆ ಗೆಳೆಯನೊಬ್ಬ ಸಹಕಾರ ನೀಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ಈ ಮಧ್ಯೆ ಕೊಳವೆ ಬಾವಿಯಿಂದ ಶವದ ತುಂಡುಗಳನ್ನು ಜೆಸಿಬಿ ಬಳಸಿ ಹೊರತೆಗೆಯಲಾಗಿದೆ.

ತೋಟದಲ್ಲೇ ಮರ್ಡರ್‌:

ಹತ್ಯೆಯಾದ ಪರಶುರಾಮ ಮದ್ಯಪಾನ ಮಾಡುತ್ತಿದ್ದ. ಆತ ಜಗಳಗಂಟ ಸ್ವಭಾವದವನಾಗಿದ್ದ ಎನ್ನಲಾಗಿದೆ. ನಿತ್ಯ ಪತ್ನಿ, ಪುತ್ರನೊಂದಿಗೆ ಜಗಳ ತೆಗೆಯುತ್ತಿದ್ದ, ಇದರಿಂದ ವಿಠ್ಠಲ ಬೇಸತ್ತಿದ್ದ ಎಂದು ಹೇಳಲಾಗಿದೆ. ಮುಧೋಳ ಹೊರವಲಯದ ಮಂಟೂರ ರಸ್ತೆಯಲ್ಲಿ ಪರಶುರಾಮ ಕುಳಲಿಗೆ ಸೇರಿದ 6 ಎಕರೆ ತೋಟವಿದೆ. ಡಿ.6ರಂದು ವಿಠ್ಠಲ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ, ಅಲ್ಲಿಗೆ ಬಂದ ತಂದೆ, ಯಾವುದೋ ವಿಚಾರವಾಗಿ ಜಗಳ ತೆಗೆದ. ಈ ವೇಳೆ, ಮಾತಿಗೆ ಮಾತು ಬೆಳೆದು ಕೋಪದ ಭರದಲ್ಲಿ ಅಲ್ಲಿದ್ದ ರಾಡ್‌ನಿಂದ ತಂದೆಯ ತಲೆಗೆ ವಿಠ್ಠಲ ಹೊಡೆದಿದ್ದಾನೆ. ಆ ಏಟಿಗೆ ಅಲ್ಲಿಯೇ ಕುಸಿದು ಬಿದ್ದು, ಪರಶುರಾಮ ಕೊನೆಯುಸಿರೆಳೆದಿದ್ದಾನೆ. ಆಗ ಏನು ಮಾಡಬೇಕೆಂದು ತೋಚದೆ, ಅದೇ ತೋಟದಲ್ಲಿರುವ ಪಾಳು ಬಿದ್ದ ಕೊಳವೆ ಬಾವಿಯಲ್ಲಿ ತಂದೆಯ ಇಡೀ ಶವವನ್ನು ಹಾಕಲು ವಿಠ್ಠಲ ಪ್ರಯತ್ನಿಸಿದ್ದಾನೆ. ಆದರೆ, ಸಾಧ್ಯವಾಗಲಿಲ್ಲ. ಬಳಿಕ ಕೊಡಲಿಯಿಂದ ಕೈ, ಕಾಲು, ದೇಹದ ಇತರ ಭಾಗಗಳನ್ನು 30ಕ್ಕೂ ಅಧಿಕ ಭಾಗಗಳಾಗಿ ತುಂಡರಿಸಿ, ಒಂದೊಂದೇ ಭಾಗವನ್ನು ಕೊಳವೆ ಬಾವಿಯಲ್ಲಿ ಹಾಕಿ, ಮಣ್ಣು ಮುಚ್ಚಿದ್ದಾನೆ.

ಮನೆಗೆ ಬಂದಾಗ, ಅಪ್ಪ ಎಲ್ಲಿ ಹೋಗಿದ್ದಾರೆ ಎಂದು ತಾಯಿ ಕೇಳಿದಾಗ ಗೊತ್ತಿಲ್ಲ ಎಂದು ಹೇಳಿದ್ದಾನೆ. ನಾಲ್ಕು ದಿನವಾದರೂ ಪತಿ ಮನೆಗೆ ಬರದಿದ್ದಾಗ, ಡಿ.10ರಂದು ಪರಶುರಾಮನ ಹೆಂಡತಿ ಸರಸ್ವತಿ, ಮುಧೋಳ ಪೊಲೀಸರಿಗೆ ಗಂಡ ಕಾಣೆಯಾದ ಕುರಿತು ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಮುಧೋಳದ ಸಿಪಿಐ ಅಯ್ಯನಗೌಡ ಪಾಟೀಲ, ಮೊದಲು ಮಗ ವಿಠ್ಠಲನ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಮನೆಯಲ್ಲಿ ತಾಯಿ ಸೇರಿದಂತೆ ಎಲ್ಲರಿಗೂ ನಿತ್ಯ ಕಿರುಕುಳ ನೀಡುತ್ತಿದ್ದ. ನಾನು ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಿ ಗಳಿಸಿದ .50 ಸಾವಿರ ಮುಂಗಡ ಹಣವನ್ನೂ ನೀಡುವಂತೆ ಪೀಡಿಸುತ್ತಿದ್ದ. ಆತನ ಕಿರುಕುಳ ಸಹಿಸಲಾಗದೆ ತಾನೇ ಕೊಲೆ ಮಾಡಿ, ಶವವನ್ನು ತುಂಡುಗಳಾಗಿ ಕತ್ತರಿಸಿ, ಕೊಳವೆಬಾವಿಯಲ್ಲಿ ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈ ಕೃತ್ಯಕ್ಕೆ ಸ್ನೇಹಿತನ ಸಹಾಯ ಪಡೆದಿದ್ದಾಗಿ ತಿಳಿಸಿದ್ದಾನೆ. ಎಫ್‌ಎಸ್‌ಎಲ್‌ ತಂಡದ ಸೂಚನೆಯಂತೆ ಶವದ ತುಂಡುಗಳನ್ನು ಕಾಯ್ದಿಟ್ಟು, ಡಿಎನ್‌ಎ ಪರೀಕ್ಷೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios