ಕಲಬುರಗಿ: ನಕಲಿ ದಾಖಲೆ ಸೃಷ್ಟಿ, 40 ಲಕ್ಷ ಲೋನ್ ಪಡೆದು ರೈತನಿಗೆ ಮೋಸ
ಬ್ಯಾಂಕ್ ಮ್ಯಾನೇಜರ್ ಇದಕ್ಕೆ ಸಮರ್ಪಕವಾದ ಉತ್ತರ ನೀಡದೇ ಇರುವುದರಿಂದ ಅಳಿಯನ ಸಲಹೆಯಂತೆ 1 ವರ್ಷದ ಬ್ಯಾಂಕ್ ಸ್ಟೇಟ್‍ಮೆಂಟ್ ಪಡೆದು ಪರಿಶೀಲನೆ ಮಾಡಿದ್ದಾರೆ. ಆಗ ಇವರ ಹೆಸರಿನಲ್ಲಿ ಬೇರೊಬ್ಬರು 40 ಲಕ್ಷ ರು.ಲೋನ್ ಪಡೆದಿರುವುದು ಬೆಳಕಿಗೆ ಬಂದಿದೆ.
ಕಲಬುರಗಿ(ಅ.25): ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಒಂದರಲ್ಲಿ 40 ಲಕ್ಷ ಲೋನ್ ಪಡೆದು ರೈತರೊಬ್ಬರಿಗೆ ಮೋಸ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೇವರ್ಗಿ ತಾಲೂಕಿನ ಬೇಲೂರು ಗ್ರಾಮದ ಪೀರಣ್ಣ ಎಂಬ ರೈತನಿಗೆ ಮೋಸ ಮಾಡಲಾಗಿದೆ. ಪೀರಣ್ಣ ಅವರು 7-8 ವರ್ಷಗಳ ಹಿಂದೆ ತಮ್ಮ ಹೊಲದಲ್ಲಿ ಬೆಳೆದ ಮೆಣಸಿನಕಾಯಿಯನ್ನು ಮಾರಾಟ ಮಾಡಲೆಂದು ಕಲಬುರಗಿ ನಗರದ ಮಿರ್ಚಿ ಗೋಡಾನ್‍ಗೆ ತಂದಿದ್ದಾರೆ.
ದಲ್ಲಾಳಿಗಳಾದ ರಫಿಕ್ ಮತ್ತು ಮೌಲಾಲಿ ಎಂಬುವವರ ಸಹಾಯದಿಂದ ಮೆಣಸಿನಕಾಯಿ ಮಾರಾಟ ಮಾಡಿ ನಗದು ರೂಪದಲ್ಲಿ ಹಣ ಪಡೆದಿದ್ದಾರೆ. ಈ ವೇಳೆ ಗೋಡಾನ್ ಮ್ಯಾನೇಜರ್ ಪೀರಣ್ಣ ಅವರ ಆಧಾರ್ ಕಾರ್ಡ್, ಫೋಟೋ ಪಡೆದು ಕೆಲವು ಹಾಳೆಗಳ ಮೇಲೆ ಹೆಬ್ಬೆಟ್ಟಿನ ಸಹಿ ಪಡೆದಿದ್ದಾನೆ ಎನ್ನಲಾಗಿದೆ.
ಹಬ್ಬಕ್ಕೆ ಊರಿಗೆ ಬಂದವನು ಮಟಾಷ್..! ಭೀಮಾ ತೀರದಲ್ಲಿ ಮತ್ತೆ ಚಿಮ್ಮಿತು ಹಸಿ ಹಸಿ ರಕ್ತ..!
ಇದೆಲ್ಲ ಏಕೆ ಎಂದು ಪೀರಣ್ಣ ಪ್ರಶ್ನಿಸಿದಾಗ ರಫಿಕ್ ಮತ್ತು ಮೌಲಾಲಿ ಏನೂ ಆಗುವುದಿಲ್ಲ ನೀನು ಮೆಣಸಿನಕಾಯಿ ಮಾರಾಟ ಮಾಡಲು ಬಂದರೆ ಹಣ ನಿನ್ನ ಅಕೌಂಟ್‍ಗೆ ಜಮಾ ಆಗುತ್ತದೆ ಎಂದು ನಂಬಿಸಿದ್ದಾರೆ. 2022ನೇ ಸಾಲಿನ ಜನೆವರಿ ತಿಂಗಳಲ್ಲಿ ರೈತ ಪೀರಣ್ಣ ಅವರು ಪಿಎಂ ಕಿಸಾನ್ ಯೋಜನೆಯ ಹಣದ ಸಲುವಾಗಿ ಜೇರಟಗಿಯ ನ್ಯಾಷನಲ್ ಬ್ಯಾಂಕ್‍ನಲ್ಲಿ ಖಾತೆ ತೆರೆಯಲು ಹೋಗಿದ್ದಾರೆ. ಈ ವೇಳೆ ಬ್ಯಾಂಕಿನ ಸಿಬ್ಬಂದಿ ಈಗಾಗಲೆ ನಿಮ್ಮ ಹೆಸರಿನಲ್ಲಿ ಕಲಬುರಗಿಯ ಹುಸೇನಿ ಗಾರ್ಡ್‍ನನಲ್ಲಿರುವ ಎಸ್‍ಬಿಐ ಬ್ಯಾಂಕ್‍ನಲ್ಲಿ ಖಾತೆ ಇದೆ ಎಂದು ತಿಳಿಸಿದ್ದಾರೆ. ಆಗ ಪೀರಣ್ಣ ಅವರು ಕಲಬುರಗಿಗೆ ಬಂದು ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಆಗ ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಯಲ್ಲಿ 31,435 ರು. ಜಮೆ ಇವೆ ಎಂದು ತಿಳಿಸಿದ್ದಾರೆ.
ನನಗೆ ಓದಲು, ಬರೆಯಲು ಬರುವುದಿಲ್ಲ ಅರ್ಜೆಂಟಾಗಿ ಹಣದ ಅಗತ್ಯವಿದೆ ಎಂದು ತಿಳಿಸಿ ಬ್ಯಾಂಕ್ ಸಿಬ್ಬಂದಿ ಸಹಾಯದಿಂದ 13.2.2022 ರಂದು 30 ಸಾವಿರ ರು.ಡ್ರಾ ಮಾಡಿಕೊಂಡಿದ್ದಾರೆ. ಆಗ ಬ್ಯಾಂಕ್ ಮ್ಯಾನೇಜರ್ ರೈತ ಪೀರಣ್ಣ ಅವರ ಒಂದು ಫೋಟೋ ಪಡೆದು ಪಾಸ್‍ಬುಕ್ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಅವರು 24.1.2022 ರಂದು ಬ್ಯಾಂಕಿಗೆ ಬಂದು ಪಾಸ್‍ಬುಕ್ ಪಡೆದುಕೊಂಡು ಹೋಗಿದ್ದಾರೆ.
ನಂತರ ಪೀರಣ್ಣ ಅವರು ಹಿರಿಯ ಮಗ ಮಲ್ಲಿಕಾರ್ಜುನ ಜೊತೆಗೆ 21-10-2023 ಬ್ಯಾಂಕಿಗೆ ಹೋಗಿ 10 ಸಾವಿರ ರು.ಡ್ರಾ ಮಾಡಿಕೊಂಡಿದ್ದಾರೆ. ತದನಂತರ ಈ ಖಾತೆಯನ್ನು ತನ್ನ ಊರಿಗೆ ಸಮೀಪದಲ್ಲಿರುವ ಎಸ್‍ಬಿಐ ಬ್ಯಾಂಕಿಗೆ ವರ್ಗಾವಣೆ ಮಾಡಿ ಎಂದು ಬ್ಯಾಂಕ್ ಮ್ಯಾನೇಜರ್ ಅವರನ್ನು ಕೋರಿದ್ದಾರೆ. ಆಗ ಅವರು ನಿಮ್ಮ ಹೆಸರಿನಲ್ಲಿ 10 ¯ಕ್ಷ ರು.ಲೋನ್ ಇದೆ ವರ್ಗಾವಣೆ ಮಾಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ಪೀರಣ್ಣ ಗಾಬರಿಯಾಗಿ ನಾನು ಯಾವ ಲೋನ್ ಪಡೆದುಕೊಂಡಿಲ್ಲ ಎಂದಿದ್ದಾರೆ. ಆಗ ಬ್ಯಾಂಕ್ ಮ್ಯಾನೇಜರ್ ಈ ಹಿಂದೆ 3 ಬಾರಿ 10 ಲಕ್ಷದಂತೆ 30 ಲಕ್ಷ ಲೋನ್ ಮಾಡಿಕೊಂಡಿದ್ದೀರಿ ಎಂದು ತಿಳಿಸಿದ್ದಾರೆ. ಆಗ ರೈತ ಪೀರಣ್ಣ ಹಾಗಾದರೆ ಲೋನ್ ಹಣ ಎಲ್ಲಿದೆ ? ನನ್ನ ಖಾತೆಯಲ್ಲಿ ಇಲ್ಲವಲ್ಲ ಎಂದು ಕೇಳಿದ್ದಾರೆ.
ಕಲಬುರಗಿ: ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ಮಂಗಮಾಯ..!
ಬ್ಯಾಂಕ್ ಮ್ಯಾನೇಜರ್ ಇದಕ್ಕೆ ಸಮರ್ಪಕವಾದ ಉತ್ತರ ನೀಡದೇ ಇರುವುದರಿಂದ ಅಳಿಯನ ಸಲಹೆಯಂತೆ 1 ವರ್ಷದ ಬ್ಯಾಂಕ್ ಸ್ಟೇಟ್‍ಮೆಂಟ್ ಪಡೆದು ಪರಿಶೀಲನೆ ಮಾಡಿದ್ದಾರೆ. ಆಗ ಇವರ ಹೆಸರಿನಲ್ಲಿ ಬೇರೊಬ್ಬರು 40 ಲಕ್ಷ ರು.ಲೋನ್ ಪಡೆದಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ರೈತ ಪೀರಣ್ಣ ಅವರು ಗೋಡಾನ್ ಮಾಲೀಕ, ಮ್ಯಾನೇಜರ್, ದಲ್ಲಾಳಿಗಳಾದ ರಫೀಕ್, ಮೌಲಾಲಿ, ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.