ಕಲಬುರಗಿ: ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ. ಮಂಗಮಾಯ..!

ಖಾಜಾ ಪಟೇಲ್ ಅವರು ಬೆನ್ನಿಗೆ ಹತ್ತಿದ ಹೊಲಸನ್ನು ತೊಳೆದುಕೊಳ್ಳಲೆಂದು ಹತ್ತಿರದಲ್ಲಿರುವ ನಳಕ್ಕೆ ಹೋಗಿ ಕೈಯಲ್ಲಿದ್ದ ಕ್ಯಾರಿಬ್ಯಾಗ್‍ನ್ನು ಕುರ್ಚಿ ಮೇಲಿಟ್ಟು ಬಾಟಲಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಹಣವಿದ್ದ ಕ್ಯಾರಿಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ. 

2.50 lakhs Theft in Kalaburagi grg

ಕಲಬುರಗಿ(ಅ.24): ಬೆನ್ನಿನ ಹಿಂದೆ ಹೊಲಸು ಹತ್ತಿದೆ ನೋಡಿ ಎಂದು ಹೇಳಿ ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಅವರ ಬಳಿ ಇದ್ದ ₹2.50 ಲಕ್ಷ ನಗದು ಹಣವಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತೆಗೆದುಕೊಂಡು ಹೋದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ನಾಗರಳ್ಳಿಯ ಖಾಜಾ ಪಟೇಲ್ ಕಾನಗೌಡ ಎಂಬುವವರೆ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಖಾಜಾ ಪಟೇಲ್ ಅವರು ನಾಗರಳ್ಳಿ ಗ್ರಾಮದಲ್ಲಿರುವ ಎರಡನೇ ಅಣ್ಣತಮಕಿಯವರಾದ ಮಹಮದ್ ತಮಜೀದ್ ಅವರ ಹೊಲವನ್ನು ನೋಡಿಕೊಂಡು ಹೋಗುತ್ತಿದ್ದು, ಮಹಮದ್ ತಮಜೀದ್ ಅವರ ಹೊಲದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲಾಗಿದೆ. ಅದರ ಲಾಗೋಡಿ ಸಲುವಾಗಿ ಹಣ ಬೇಕಾಗಿದ್ದರಿಂದ ಕಲಬುರಗಿಯಲ್ಲಿರುವ ಮಹಮದ್ ತಮಜೀದ್ ಅವರನ್ನು ಭೇಟಿಯಾಗಲು ಬಂದು ಇಬ್ಬರು ಸೇರಿ ಕೇಂದ್ರ ಬಸ್ ನಿಲ್ದಾಣ ಸಮೀಪದ ಹೋಟೆಲ್‍ನಲ್ಲಿ ಚಹಾ ಕುಡಿದಿದ್ದಾರೆ. ನಂತರ ತಮಜೀದ್ ಅವರು ಹಣ ತರಲು ಮನೆಗೆ ಹೋಗಿ ಇದರಲ್ಲಿ 2,50,000 ಇವೆ ಎಂದು ಹೇಳಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‍ನ್ನು ಖಾಜಾ ಪಟೇಲ್ ಅವರ ಕೈಗೆ ಕೊಟ್ಟಿದ್ದಾರೆ. ಆಗ ಖಾಜಾ ಪಟೇಲ್ ಅವರು ಹಣದ ಕ್ಯಾರಿಬ್ಯಾಗ್ ತೆಗೆದುಕೊಂಡು ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಏ ತಮ್ಮಾ ಹಿಂದೆ ಬೆನ್ನಿಗೆ ಹೊಲಸು ಹತ್ಯಾದ ನೋಡು ಎಂದಿದ್ದಾನೆ.

ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ; ಮಹಾನವಮಿಗೆ ಊರಿಗೆ ಬಂದವನ ರುಂಡ ಚೆಂಡಾಡಿದ ಹಂತಕರು!

ಆಗ ಖಾಜಾ ಪಟೇಲ್ ಅವರು ಬಲಗೈ ಬೆನ್ನ ಹಿಂದೆ ಹಾಕಿ ನೋಡಿಕೊಂಡಾಗ ಕೈಗೆ ಹೊಲಸು ಹತ್ತಿದ್ದು ಗಮನಕ್ಕೆ ಬಂದಿದೆ. ಆದರೂ ಅವರು ಹಾಗೆ ನಡೆದುಕೊಂಡು ಬಸ್ ಹತ್ತಬೇಕು ಅಂದುಕೊಂಡಿದ್ದಾಗ ಅಲ್ಲಿದ್ದ ಹೆಣ್ಣು ಮಕ್ಕಳು ಹೊಲಸು ಹತ್ತಿದೆ ವಾಸನೆ ಬರುತ್ತಿದೆ ಎಂದಿದ್ದಾರೆ.

ಇದರಿಂದ ಖಾಜಾ ಪಟೇಲ್ ಅವರು ಬೆನ್ನಿಗೆ ಹತ್ತಿದ ಹೊಲಸನ್ನು ತೊಳೆದುಕೊಳ್ಳಲೆಂದು ಹತ್ತಿರದಲ್ಲಿರುವ ನಳಕ್ಕೆ ಹೋಗಿ ಕೈಯಲ್ಲಿದ್ದ ಕ್ಯಾರಿಬ್ಯಾಗ್‍ನ್ನು ಕುರ್ಚಿ ಮೇಲಿಟ್ಟು ಬಾಟಲಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಹಣವಿದ್ದ ಕ್ಯಾರಿಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಖಾಜಾ ಪಟೇಲ್ ಅವರು ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios