Kollur temple fake website scam :ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಆನ್‌ಲೈನ್ ರೂಮ್ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದ ರಾಜಸ್ಥಾನ ಮೂಲದ ನಾಸೀರ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ (ಡಿ.21): ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನಕಲಿ ವೆಬ್‌ಸೈಟ್ ನ್ನು ರೂಪಿಸಿ ವಂಚಿಸುತಿದ್ದ ರಾಜಸ್ಥಾನ ರಾಜ್ಯದ ತಿಜಾರಿ ಜಿಲ್ಲೆಯ ಆರೋಪಿ ನಾಸೀರ್ ಹುಸೇನ್ (21) ಎಂಬಾತನನ್ನು ಬಂಧಿಸಲಾಗಿದೆ.
ಹೇಗೆ ವಂಚನೆ ಮಾಡುತ್ತಿದ್ದ?
ಈತ ತನ್ನ ನಕಲಿ ವೆಬ್‌ಸೈಟ್ ಮೂಲಕ ದೇವಸ್ಥಾನಕ್ಕೆ ಆಗಮಿಸುವ ದೂರದ ಊರಿನ ಭಕ್ತಾದಿಗಳಿಂದ ಆನ್‌ಲೈನ್‌ನಲ್ಲಿ ಮುಂಗಡವಾಗಿ ರೂಮ್ ಬುಕ್ಕಿಂಗ್ ಮಾಡಿಸುವುದಾಗಿ ಹೇಳಿ ಹಣ ಪಡೆದು, ನಕಲಿ ರಶೀದಿ ನೀಡಿ ವಂಚಿಸುತಿದ್ದ. ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನದ ಕಾರ್‍ಯನಿರ್ವಹಣಾಧಿಕಾರಿಯವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದು ಮುಜರಾಯಿ ಇಲಾಖೆ ದೇವಸ್ಥಾನಕ್ಕೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದಾಖಲಾದ ಪ್ರಕರಣವಾಗಿದ್ದರಿಂದ, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ ಬಿ., ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ ಎ. ಕಾಯ್ಕಿಣಿ ಹಾಗೂ ಕೊಲ್ಲೂರು ಉಪನಿರೀಕ್ಷಕ ವಿನಯ ಎಂ. ಕೋರ್ಲಹಳ್ಳಿ ನೇತೃತ್ವದ ತಂಡವನ್ನು ರಚಿಸಲಾಗಿತ್ತು.
ತನಿಖೆಯಿಂದ ನಾಸೀರ್ ಹುಸೇನ್ ಆರೋಪಿ ಎಂದು ಪತ್ತೆಯಾಗಿದ್ದು, ಶುಕ್ರವಾರ ಆತನನ್ನು ರಾಜಸ್ಥಾನದ ದಾಖಾಪುರಿ ಎಂಬಲ್ಲಿಂದ ಬಂಧಿಸಿ, ಆತ ಬಳಸುತ್ತಿದ್ದ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ ಮತ್ತು ನ್ಯಾಯಾಂಗ ಬಂಧನ ವಿಧಿಸಲಾಗಿದೆ.


