ಬೆಂಗಳೂರಲ್ಲಿ ಮಾಜಿ ಕಾರ್ಪೊರೇಟರ್ ಗಂಡನ ಮೇಲೆ ಕುಟುಂಬದವರಿಂದಲೇ ಮಾರಣಾಂತಿಕ ಹಲ್ಲೆ
Ex Corporator's husband attacked in Bengaluru: ಬೆಂಗಳೂರು ಮಾಜಿ ಕಾರ್ಪೊರೇಟರ್ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಮರಾಜ ಪೇಟೆಯಲ್ಲಿ ಆಯುಬ್ ಖಾನ್ ಮೇಲೆ ಸ್ವಂತ ಕುಟುಂಬಸ್ಥರೇ ಹಲ್ಲೆ ಮಾಡಿರುವ ಘಟನೆ ನಡೆದಿದೆ
ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಮಾಜಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಗಂಡನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಾರ್ಡ್ ನಂಬರ್ 139ರ ಮಾಜಿ ಕಾರ್ಪೊರೇಟರ್ ನಜೀಮಾ ಅವರ ಗಂಡ ಆಯುಬ್ ಖಾನ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಮೂಲಗಳ ಪ್ರಕಾರ ಆಯುಬ್ ಖಾನ್ ಅವರ ಕುಟುಂಬದವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆಯುಬ್ ಖಾನ್ ಅವರ ಅಣ್ಣನ ಮಕ್ಕಳೇ ಖಾನ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉಂಗುರ ಆಧರಿಸಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು
ಚಾಕುವಿನಿಂದ ಇರಿದು ಆಯುಬ್ ಮೇಲೆ ಕೊಲೆ ಯತ್ನಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಯುಬ್‌ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನ ಮಗನೊಂದಿಗೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ವಿಚಾರಕ್ಕಾಗಿ ಪದೇ ಪದೇ ಇಬ್ಬರ ನಡುವೆಯೂ ಜಗಳಗಳಾಗುತ್ತಿತ್ತು, ಇಂದು ಸಂಜೆ ಮನೆಗೆ ಹೋಗಿದ್ದ ಅಯೂಬ್ ಅಣ್ಣನ ಮಗನಿಂದ ಜಗಳವಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿಯಲಾಗಿದೆ.
ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಸಿದ್ದು ಆಪ್ತನಿಗೆ ಗೊತ್ತಿತ್ತಾ ಕೊಲೆ ರಹಸ್ಯ?
ಏಷ್ಯನ್ ಆಸ್ಪತ್ರೆಯಲ್ಲಿ ಅಯೂಬ್ ಖಾನ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಏಷ್ಯನ್ ಆಸ್ಪತ್ರೆಯಿಂದ ಖಾನ್‌ರನ್ನು ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಈ ಬಗ್ಗೆ ಚಾರಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.