ಉಂಗುರ ಆಧರಿಸಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು
- ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ
- ಮೃತಳ ಪತಿ ಸೇರಿದಂತೆ ಇಬ್ಬರ ಬಂಧನ
- ಸುಳಿವು ಬೆನ್ನತ್ತಿದಾಗ ಕೃತ್ಯ ಎಸಗಿ ಯಾದಗಿರಿಗೆ ಪರಾರಿಯಾಗಿದ್ದ ಮೊಹಮ್ಮದ್
ಬೆಂಗಳೂರು (ಜು.13): ಇತ್ತೀಚಿಗೆ ಕೆಂಗೇರಿ ಬಳಿಯ ರಾಮಸಂದ್ರದಲ್ಲಿ ಸುಟ್ಟು ಕರಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆ ಕೊಲೆ ಪ್ರಕರಣ ಬೇಧಿಸಿದ ಕೆಂಗೇರಿ ಠಾಣೆ ಪೊಲೀಸರು, ಈ ಸಂಬಂಧ ಮೃತಳ ಪತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಕೆಂಗೇರಿ ಉಪ ನಗರದ ಸನ್ ಸಿಟಿ ನಿವಾಸಿ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ ಅಲಿಯಾಸ್ ಮೊಹಮದ್ ರಫೀಕ್ ಹಾಗೂ ದೊಡ್ಡಬಳ್ಳಾಪುರ ತಾಲೂಕು ಸೊಣ್ಣೇನಹಳ್ಳಿ ಗ್ರಾಮದ ಎಚ್.ಪ್ರಜ್ವಲ್ ಬಂಧಿತರಾಗಿದ್ದು, ಇತ್ತೀಚಿಗೆ ರಾಮಸಂದ್ರ ಸಮೀಪ ಅನೈತಿಕ ಸಂಬಂಧ ಶಂಕೆ ಮೇರೆಗೆ ತನ್ನ ಪತ್ನಿ ನಗೀನಾ ಖಾನಂನನ್ನು (32) ಗೆಳೆಯನ ಜತೆ ಸೇರಿ ಕೊಂದು ಬೆಂಕಿ ಹಚ್ಚಿ ಸುಟ್ಟು ಮೊಹಮ್ಮದ್ ಪರಾರಿಯಾಗಿದ್ದ.
ಪ್ರೀತಿಸಿ ವಿವಾಹವಾಗಿ ವಂಚನೆ: ತನ್ನ ಮೊದಲ ಪತಿಯಿಂದ ಪ್ರತ್ಯೇಕವಾಗಿ ಮೃತ ನಗೀನಾ, ಆರು ವರ್ಷಗಳ ಹಿಂದೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮೊಹಮ್ಮದ್ ಜತೆ ಎರಡನೇ ವಿವಾಹವಾಗಿದ್ದಳು. ಮದುವೆ ಬಳಿಕ ಕೆಂಗೇರಿ ಉಪನಗರದ ಸನ್ ಸಿಟಿ ಬಳಿ ದಂಪತಿ ನೆಲೆಸಿದ್ದರು. ಮೊದಲ ಗಂಡನಿಂದ ಪಡೆದಿದ್ದ ಇಬ್ಬರು ಮಕ್ಕಳ ಪೈಕಿ ಒಬ್ಬಾತ ನಗೀನಾ ವಶದಲ್ಲಿದ್ದರೆ, ಮತ್ತೊಂದು ಮಗು ಪತಿ ಸುಪರ್ದಿಯಲ್ಲಿತ್ತು.
ಖಾಸಗಿ ಕಂಪನಿಯಲ್ಲಿ ನಗೀನಾ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಮೊಹಮ್ಮದ್ ಜೆಸಿಬಿ ಚಾಲಕನಾಗಿದ್ದ. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ನಗೀನಾ ಮತ್ತು ಮೊಹಮ್ಮದ್ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿ ನಡವಳಿಕೆ ಮೇಲೆ ಶಂಕೆಗೊಂಡ ಆತ, ಇದೇ ವಿಚಾರವಾಗಿ ಪ್ರತಿ ದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕೊನೆಗೆ ತನ್ನ ಪತ್ನಿ ಹತ್ಯೆಗೈಯುವ ನಿರ್ಧಾರಕ್ಕೆ ಬಂದ ಮೊಹಮ್ಮದ್‌ಗೆ ಆತನ ಸ್ನೇಹಿತ ಮತ್ತೊಬ್ಬ ಜೆಸಿಬಿ ಚಾಲಕ ಪ್ರಜ್ವಲ್ ಸಾಥ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಉಂಗುರ ನೀಡಿದ ಸುಳಿವು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ ಅಪರಿಚಿತ ಮಹಿಳೆ ಗುರುತು ತನಿಖೆ ಕೈಗೆತ್ತಿಕೊಂಡ ಕೆಂಗೇರಿ ಪೊಲೀಸರು, ಮಹಿಳಾ ಪಿಜಿಗಳು, ಕಾಲೇಜು, ಹಾಸ್ಟೆಲ್ ಹಾಗೂ ಖಾಸಗಿ ಕಂಪನಿಗಳಲ್ಲಿ ಹುಡುಕಾಟ ನಡೆಸಿದ್ದರು. ಆಗ ನಗೀನಾ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು, ಮೃತದೇಹದ ಭಾವಚಿತ್ರ ನೋಡಿ ಕೈಯಲ್ಲಿದ್ದ ಉಂಗುರದ ಮೂಲಕ ಗುರುತು ಪತ್ತೆ ಹಚ್ಚಿದ್ದರು. ಈ ಮಾಹಿತಿ ಮೇರೆಗೆ ತನಿಖೆ ನಡೆಸಿದಾಗ ಮೃತಳ ಪೋಷಕರು ಸಿಕ್ಕಿದರು. ಅನಂತರ ಸುಳಿವು ಬೆನ್ನತ್ತಿದಾಗ ಕೃತ್ಯ ಎಸಗಿ ಯಾದಗಿರಿಗೆ ಪರಾರಿಯಾಗಿದ್ದ ಮೊಹಮ್ಮದ್, ಸೋಮವಾರ ರಾತ್ರಿ ನಗರಕ್ಕೆ ಬಂದು ಮೈಸೂರಿಗೆ ತೆರಳಲು ಸಿದ್ದನಾಗಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ, ವಸ್ತುಗಳ ಕಳವು
ಪಾಂಡವಪುರ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ತಾಲೂಕಿನ ತಾಲೂಕಿನ ಅಂಕೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಹಮ್ಮದ್ ಅಬ್ದುಲ… ತಮ್ಮ ಮಗಳ ಹೊಟ್ಟೆನೋವಿಗೆ ಚಿಕಿತ್ಸೆ ಕೊಡಿಸಲು ಹೊರ ಹೋಗಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿದ್ದು, ಮನೆಯಲ್ಲಿದ್ದ 11 ಗ್ರಾಂ ಚಿನ್ನದ ಉಂಗುರ, ಬೆಳ್ಳಿಯ ಬಳೆಗಳು, ಗ್ಯಾಸ್ ಸಿಲಿಂಡರ್, 2 ಮಿಕ್ಸಿ, ಗ್ಯಾಸ್ ಸ್ಟೌವ್, ಹೋಂ ಥಿಯೇಟೆರ್, ಎರಡು ಮೂಟೆ ಅಕ್ಕಿ, ಒಂದು ರಾಗಿ ಮೂಟ್ಟೆಹಾಗೂ ರೇಷ್ಮೇ ಸೀರೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರೀಶೀಲನೆ ನಡೆಸಿದ್ದು, ಕಳ್ಳರನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.