Asianet Suvarna News Asianet Suvarna News

ಆಂಧ್ರ ಕಾಡಲ್ಲಿ ಗಾಂಜಾ ಬೆಳೆದು ಬೆಂಗಳೂರಿಗೆ ಸಪ್ಲೈ: ಐವರ ಬಂಧನ

ಆಂಧ್ರಪ್ರದೇಶದ ಕಾಡುಗಳಲ್ಲಿ ಗಾಂಜಾ ಬೇಸಾಯ ನಡೆಸಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಿಗೆ ಪೂರೈಸುತ್ತಿದ್ದ ಡ್ರಗ್ಸ್‌ ದಂಧೆಕೋರರ ತಂಡದ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿಯನ್ನು ಸೆರೆ ಹಿಡಿದು 7.80 ಕೋಟಿ ಮೌಲ್ಯದ ಡ್ರಗ್ಸನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

drugs worth 7 crore 80 lakh seized in bengaluru and 5 arrest gvd
Author
First Published Sep 28, 2022, 10:57 AM IST

ಬೆಂಗಳೂರು (ಸೆ.28): ಆಂಧ್ರಪ್ರದೇಶದ ಕಾಡುಗಳಲ್ಲಿ ಗಾಂಜಾ ಬೇಸಾಯ ನಡೆಸಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಿಗೆ ಪೂರೈಸುತ್ತಿದ್ದ ಡ್ರಗ್ಸ್‌ ದಂಧೆಕೋರರ ತಂಡದ ನಾಲ್ವರು ಮಹಿಳೆಯರು ಸೇರಿದಂತೆ ಐದು ಮಂದಿಯನ್ನು ಸೆರೆ ಹಿಡಿದು 7.80 ಕೋಟಿ ಮೌಲ್ಯದ ಡ್ರಗ್ಸನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಆಂಧ್ರಪ್ರದೇಶದ ಕುಖ್ಯಾತ ಗಾಂಜಾ ಪೆಡ್ಲರ್‌ ಕೋಟೇಶ್ವರ್‌ ರಾವ್‌ ಪತ್ನಿ ಪಾಂಗಿ ಪೂರ್ಣಮ್ಮ, ಕುಡೇರಿ ಪುಷ್ಪಾ, ದೇವಿ, ಗುಡಿ ವಿಜಯಾ ಹಾಗೂ ನೈಜೀರಿಯಾ ಮೂಲದ ಜಾನ್‌ ಅಲಿಯಾಸ್‌ ಡೇವಿಡ್‌ ಬಂಧಿತರಾಗಿದ್ದು, ಆರೋಪಿಗಳಿಂದ 8 ಕೇಜಿ ಹ್ಯಾಶಿಶ್‌ ಆಯಿಲ್‌ (ಗಾಂಜಾ ಎಣ್ಣೆ), 10 ಕೇಜಿ ಗಾಂಜಾ ಹಾಗೂ 1.04 ಕೇಜಿ ಎಂಡಿಎಂಎ ಕ್ರಿಸ್ಟಲ್‌ ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಕೋಟೇಶ್ವರ್‌ ರಾವ್‌ ಪತ್ತೆಗೆ ಸಿಸಿಬಿ ತನಿಖೆ ಮುಂದುವರೆಸಿದೆ.

ರಸ್ತೆ ಮಧ್ಯೆ ಕಂದಕಕ್ಕೆ ಬಿದ್ದ ಬೈಕ್; ಸವಾರರಿಬ್ಬರ ದಾರುಣ ಸಾವು!

ಕೆಲ ದಿನಗಳ ಹಿಂದೆ ವಿವೇಕ ನಗರ ಸಮೀಪ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಡಿಜೆ ಜ್ಯುಡ್‌ನನ್ನು ಸಿಸಿಬಿ ಮಾದಕ ವಸ್ತು ದ್ರವ್ಯ ನಿಗ್ರಹ ದಳದ ಎಸಿಪಿ ರಾಮಚಂದ್ರ ಹಾಗೂ ಇನ್‌ಸ್ಪೆಕ್ಟರ್‌ ಬಿ.ಎಸ್‌.ಅಶೋಕ್‌ ನೇತೃತ್ವದ ತಂಡ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಗಾಂಜಾ ಪೂರೈಸುವ ಆಂಧ್ರಪ್ರದೇಶ ದಂಧೆಕೋರರ ಬಗ್ಗೆ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರೆಸಿದ ಇನ್‌ಸ್ಪೆಕ್ಟರ್‌ ಅಶೋಕ್‌ ತಂಡವು, ಗಾಂಜಾ ಖರೀದಿಸುವ ಪೆಡ್ಲರ್‌ಗಳ ಸೋಗಿನಲ್ಲಿ ಪುಟ್ಟವರ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದೆ.

ಕಾಡಿನಲ್ಲೇ ಗಾಂಜಾ ಬೇಸಾಯ: ಆಂಧ್ರಪ್ರದೇಶದ ಅರಕ್ಕು ಹಾಗೂ ಸಿಂತಪಲ್ಲಿ ಅರಣ್ಯದಲ್ಲಿ ಕೋಟೇಶ್ವರ್‌ ರಾವ್‌ ತಂಡವು ಗಾಂಜಾ ಬೇಸಾಯ ಮಾಡುತ್ತದೆ. ಬಳಿಕ ತಾವೇ ಗಾಂಜಾದಿಂದ ಹ್ಯಾಶಿಶ್‌ ಆಯಿಲ್‌ ತಯಾರಿಸಿ ಪೆಡ್ಲರ್‌ಗಳಿಗೆ ಅವರು ಪೂರೈಸುತ್ತಾರೆ. ಎರಡು ತಿಂಗಳ ಹಿಂದೆ ವಿವೇಕ ನಗರ ಬಳಿಕ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಡಿಜೆ ಜ್ಯುಡ್‌ನನ್ನು ಬಂಧಿಸಲಾಗಿತ್ತು. 

ಬಳಿಕ ವಿಚಾರಣೆ ವೇಳೆ ತನಗೆ ಆಂಧ್ರಪ್ರದೇಶದ ಅರಕ್ಕು ಜಿಲ್ಲೆಯ ಶ್ರೀನಿವಾಸ ಅಲಿಯಾಸ್‌ ಸೀನ ಹಾಗೂ ಕೋಟೇಶ್ವರ್‌ ರಾವ್‌ ಅವರಿಂದ ಹ್ಯಾಶಿಶ್‌ ಆಯಿಲ್‌ ಹಾಗೂ ಎಂಡಿಎಂಎ ಡ್ರಗ್ಸ್‌ ಅನ್ನು ನೈಜೀರಿಯಾ ಜಾನ್‌ ಅಲಿಯಾಸ್‌ ಡೇವಿಡ್‌ನಿಂದ ಖರೀದಿಸಿದ್ದಾಗಿ ಜ್ಯುಡ್‌ ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ಆಂಧ್ರಪ್ರದೇಶಕ್ಕೆ ತೆರಳಿ ಪೆಡ್ಲರ್‌ ಸೋಗಿನಲ್ಲಿ ಶ್ರೀನಿವಾಸ್‌ ಅಲಿಯಾಸ್‌ ಸೀನನನ್ನು ಸಂಪರ್ಕಿಸಲಾಯಿತು. ಆಗ ಡ್ರಗ್ಸ್‌ ಪೂರೈಸಲು ಬಂದಾಗ ಸೀನ ಹಾಗೂ ಆತನ ಮೂವರು ಸಹಚರರನ್ನು ಬಂಧಿಸಲಾಯಿತು. ನಂತರ ತನಿಖೆ ಮುಂದುವರೆಸಿದಾಗ ಮತ್ತೊಬ್ಬ ಪೆಡ್ಲರ್‌ ಕೋಟೇಶ್ವರ್‌ ರಾವ್‌ ಬಗ್ಗೆ ಇನ್‌ಸ್ಪೆಕ್ಟರ್‌ ಅಶೋಕ್‌ ತಂಡಕ್ಕೆ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂತೆಯೇ ಮತ್ತೆ ಆಂಧ್ರಪ್ರದೇಶಕ್ಕೆ ತೆರಳಿದ ಸಿಸಿಬಿ ತಂಡವು, ರಾವ್‌ನನ್ನು ಗೋವಾದ ರೆಸ್ಟೋರೆಂಟ್‌ ಮಾಲಿಕರ ಸೋಗಿನಲ್ಲಿ ಸಂಪರ್ಕಿಸಿತು. ಈ ಮಾತು ನಂಬಿದ ಆತ, ಪುಟ್ಟವರ್ತಿ ಬಸ್‌ ನಿಲ್ದಾಣ ಬಳಿಕ ಗ್ರಾಹಕರಿಗೆ ಗಾಂಜಾ ಹಾಗೂ ಹ್ಯಾಶಿಶ್‌ ಆಯಿಲ್‌ ಪೂರೈಸಲು ತನ್ನ ಪತ್ನಿ ಪೂರ್ಣಮ್ಮ ಜತೆ ಮೂವರು ಮಹಿಳಾ ಸಹಚರರನ್ನು ಆತ ಕಳುಹಿಸಿದ್ದ. ಆಗ ಆ ನಾಲ್ವರು ಮಹಿಳೆಯರನ್ನು ಬಂಧಿಸಿ ಅವರ ಬಳಿ ಇದ್ದ .7 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಯಿತು. ಬಳಿಕ ಜ್ಯುಡ್‌ ಹೇಳಿಕೆ ಆಧರಿಸಿ ಸೋಲದೇವನಹಳ್ಳಿ ಬಳಿ ಮತ್ತೊಂದು ದಾಳಿ ನಡೆಸಿ ನೈಜೀರಿಯಾ ಮೂಲದ ಜಾನ್‌ ಸಿಕ್ಕಿಬಿದ್ದ. ಆತನ ಬಳಿ .80 ಲಕ್ಷ ಮೌಲ್ಯದ ಎಡಿಎಂಎ ಡ್ರಗ್ಸ್‌ ಪತ್ತೆಯಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಮುಖ ನಗರಕ್ಕೆ ಗಾಂಜಾ ಪೂರೈಕೆ: ಆಂಧ್ರ ಪ್ರದೇಶದ ಅರಣ್ಯದಲ್ಲಿ ಗಾಂಜಾ ಬೆಳೆದು ಬಳಿಕ ಅದನ್ನು ಬೆಂಗಳೂರು, ಹೈದರಾಬಾದ್‌, ಕೊಚ್ಚಿನ್‌, ಚೆನ್ನೈ ಹಾಗೂ ಮುಂಬೈ ನಗರಗಳಿಗೆ ರಾವ್‌ ತಂಡ ಪೂರೈಕೆ ಮಾಡುತ್ತಿತ್ತು. ಈ ಆರೋಪಿಗಳು ಮೊಬೈಲ್‌ ಬಳಸುವುದಿಲ್ಲ. ತಮ್ಮ ಖಾಯಂ ಗ್ರಾಹಕರಲ್ಲದೆ ಬೇರೊಬ್ಬರಿಗೆ ಅವರನ್ನು ಸಂಪರ್ಕಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ರಾವ್‌ಗೆ ಪರಿಚಯವಿದ್ದ ಪೆಡ್ಲರ್‌ ಮೂಲಕ ಆತನಿಗೆ ಗಾಳ ಹಾಕಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ರಾತ್ರೋರಾತ್ರಿ ದಿಢೀರ್‌ ಕಾರ್ಯಾಚರಣೆ: ದ.ಕ. ಜಿಲ್ಲೆಯ 14 ಪಿಎಫ್‌ಐ ಮುಖಂಡರ ಬಂಧನ

ಪೊಲೀಸರ ಕಣ್ತಪ್ಪಿಸಲು ಮಹಿಳೆಯರ ಬಳಕೆ: ಪೊಲೀಸರ ಕಣ್ತಪ್ಪಿಸುವ ಸಲುವಾಗಿ ಗಾಂಜಾ ಪೂರೈಕೆಗೆ ಮಹಿಳೆಯರನ್ನೇ ಪೆಡ್ಲರ್‌ ರಾವ್‌ ಬಳಸಿಕೊಳ್ಳುತ್ತಿದ್ದ. ಬ್ಯಾಗ್‌ನಲ್ಲಿ ತರಕಾರಿ ಅಥವಾ ಅಕ್ಕಿ ತುಂಬಿಕೊಂಡು ಅದರಡಿ ಗಾಂಜಾ ಅಡಗಿಸಿಕೊಂಡು ಬಸ್‌ಗಳಲ್ಲಿ ಮಹಿಳೆಯರು ಗಾಂಜಾ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios