ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರುವ ಕನ್ನಡಿಗ ಕ್ರಿಕೆಟಿಗರ ಭಿತ್ತಿಚಿತ್ರಗಳು ಎಲ್ಲರ ಗಮನ ಸೆಳೆಯುತ್ತವೆ. ಈ ಸುಂದರ ಕಲಾಕೃತಿಗಳನ್ನು ರಚಿಸಿದ್ದು ಬೇರಾರೂ ಅಲ್ಲ, ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಾಯಿ, ಲಲಿತ ಕಲೆಯಲ್ಲಿ ಪಿಎಚ್‌ಡಿ ಪಡೆದ ಡಾ. ಪುಷ್ಪಾ ದ್ರಾವಿಡ್. 2008ರಲ್ಲಿ ರಚಿಸಲಾದ ಈ ಚಿತ್ರಗಳು ಇಂದಿಗೂ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿವೆ.

ಬೆಂಗಳೂರಿನಲ್ಲಿ ಇರುವ ಅಂತರಾಷ್ಟ್ರೀಯ ಕ್ರಿಕೆಟ್‌ ಮೈದಾನ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ಕೊಟ್ಟರೆ ಅಲ್ಲಿ ಸುಂದರವಾದ ಭಿತ್ತಿ ಚಿತ್ರಗಳು ಅರ್ಥಾತ್​ Mural Paintings ಎಲ್ಲರ ಗಮನ ಸೆಳೆಯುತ್ತದೆ. ಅನಿಲ್​ ಕುಂಬ್ಳೆ, ಶ್ರೀನಾಥ್ ಜಾವಗಲ್, ರಾಹುಲ್ ದ್ರಾವಿಡ್, ದೊಡ್ಡ ಗಣೇಶ್ ಸೇರಿದಂತೆ ಹಲವರನ್ನು ಇಲ್ಲಿ ನೋಡಬಹುದು. ಆದರೆ, ಅದನ್ನು ನೋಡಿ ವ್ಹಾವ್​ ಅನ್ನುವವರಿಗೆ ಅದನ್ನು ಅಲ್ಲಿ ಮೂಡಿಸಿರುವವರು ಯಾರು ಎಂದು ಕೇಳಿದರೆ ಅಚ್ಚರಿ ಆಗಬಹುದು. ಅಷ್ಟಕ್ಕೂ ಇಂಥ ಪೇಂಟಿಂಗ್​ ಅಥವಾ ಯಾವುದೇ ಕಲೆಗಳನ್ನು ನೋಡಿದಾಗ, ಅದರ ಹಿಂದಿರುವ ರಚನಾಕಾರರ ಬಗ್ಗೆ ಅಷ್ಟಾಗಿ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅದರ ಅಂದ ನೋಡಿ ಮುಂದೆ ಹೋಗುತ್ತಾರಷ್ಟೇ. ಆದರೆ ಈ ಮ್ಯೂರಲ್​ ಪೇಂಟಿಂಗ್​ ಹಿಂದಿರುವ ಶಕ್ತಿ ಯಾರು ಎಂದು ತಿಳಿದರೆ ಮಾತ್ರ ಕುತೂಹಲವಾದೀತು.

ಡಾ. ಪುಷ್ಪಾ ದ್ರಾವಿಡ್

ಇಲ್ಲಿ ಭಿತ್ತಿಚಿತ್ರ ಮೂಡಿಸಿರುವುದು, ಇನ್ನಾರೋ ಅಲ್ಲ, ಬದಲಿಗೆ ಡಾ. ಪುಷ್ಪಾ ದ್ರಾವಿಡ್. ಇವರ ಹೆಸರು ಕೇಳಿರಲಿಕ್ಕಿಲ್ಲ ಅಲ್ಲವೇ, ಇವರೇ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್, ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಾಯಿ. ಈ ಸುಂದರ ಕಲೆಯ ಹಿಂದೆ ಇರುವುದು ಇವರೇ. ಡಾ.ಪುಷ್ಪಾ ದ್ರಾವಿಡ್ ಅವರು ಅಂದು ರಚಿಸಿದ ಈ 45x20 ಅಡಿಯ ಈ ಭಿತ್ತಿಚಿತ್ರ ಇಂದಿಗೂ ಕ್ರಿಕೆಟ್ ಪ್ರಿಯರ ಅಚ್ಚುಮೆಚ್ಚು. ಕ್ರಿಕೆಟ್ ಕಲಿಯಲು ಸ್ಟೇಡಿಯಂಗೆ ಬರುವ ಯುವ ಕ್ರಿಕೆಟರಿಗೆ ಇದು ಸ್ಫೂರ್ತಿಯಾಗಿದೆ.

ಯಾಕೀ ಭಿತ್ತಿ ಚಿತ್ರಗಳು?

ಈ ಚಿನ್ನಸ್ವಾಮಿ ಸ್ಟೇಡಿಯಂನ ಪ್ರಮುಖ ದ್ವಾರದ ಗೋಡೆ ಮೇಲೆ ಅನಿಲ್​ ಕುಂಬ್ಳೆ, ಶ್ರೀನಾಥ್ ಜಾವಗಲ್, ರಾಹುಲ್ ದ್ರಾವಿಡ್, ದೊಡ್ಡ ಗಣೇಶ್ ಸೇರಿದಂತೆ ಕನ್ನಡಿಗ ಕ್ರಿಕೆಟರ್‌ಗಳ ಭಿತ್ತಿಚಿತ್ರಗಳನ್ನ ಬಿಡಿಸಲಾಗಿದೆ. ಕ್ರಿಕೆಟ್‌ನಲ್ಲಿ ಕನ್ನಡಿಗರೇ ಮಿಂಚುತ್ತಿದ್ದ ಸಂದರ್ಭದಲ್ಲಿ, ಅವರ ನೆನಪಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಿತ್ತಿಚಿತ್ರ ಬಿಡಿಸೋಕೆ 2008ರಲ್ಲಿ ಯೋಜನೆ ರೂಪಿಸಿತ್ತು. ಅದರಂತೆ ಸುಮಾರು ಒಂಬತ್ತು ತಿಂಗಳುಗಳ ಕಾಲ ಶ್ರಮವಹಿಸಿ ಡಾ. ಪುಷ್ಪಾ ದ್ರಾವಿಡ್ ಎನ್ನುವವರು ಈ ಭಿತ್ತಿಚಿತ್ರ ಬಿಡಿಸಿದ್ದರು.

ಪುಷ್ಪಾ ಅವರ ಹಿನ್ನೆಲೆ

ಅಷ್ಟಕ್ಕೂ ಪುಷ್ಪಾ ಅವರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿ ಹಂಚಿಕೊಳ್ಳಲೇಬೇಕು.. ಲಲಿತ ಕಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಎಚ್​ಡಿ ಮಾಡಿದ್ದಾರೆ ಇವರು. ಇದರಲ್ಲಿ ಪಿಎಚ್​ಡಿ ಮಾಡಿರುವವರಲ್ಲಿ ಇವರೇ ಮೊದಲಿಗರಾಗಿದ್ದಾರೆ. ಪುಷ್ಪಾ ಅವರು, ಆರ್ಕಿಟೆಕ್ಚರ್ ಡಿಪಾರ್ಟ್ಮೆಂಟ್‌ನ ಪ್ರಾಧ್ಯಾಪಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಡ್ರಾಯಿಂಗ್- ಪೇಂಟಿಂಗ್- ಮ್ಯೂರಲ್ ಹೀಗೆ ಹಲವು ವಿಧದ ಕಲಾಪ್ರಕಾರಗಳನ್ನ ಕರಗತ ಮಾಡ್ಕೊಂಡಿರೋ ಇವರು ಅಸಂಖ್ಯ ಚಿತ್ರಗಳನ್ನು ರಚಿಸಿದ್ದಾರೆ.