ದಲಿತ ಮುಖಂಡ ಸಾವಿನ ಬಗ್ಗೆ ಅನುಮಾನ, ವಾರದ ಹಿಂದೆ ಅಂತ್ಯಕ್ರಿಯೆ ಮಾಡಿದ್ದ ಮೃತದೇಹ ಹೊರಕ್ಕೆ
ಕರಾವಳಿಯ ಹಿರಿಯ ದಲಿತ ನಾಯಕ, ಅಂಬೇಡ್ಕರ್ ವಾದಿ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆದ ಒಂದು ವಾರದ ಬಳಿಕ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು, (ಜುಲೈ.18): ಬಹುಜನ ಚಳವಳಿ ನಾಯಕ, ದಲಿತ ಮುಖಂಡರೊಬ್ಬರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನೂ ಸಹ ನೆರವೇರಿಸಲಾಗಿದೆ. ಅಂತ್ಯಕ್ರಿಯೆ ಮಾಡಿದ ವಾರದ ಬಳಿಕ ದಲಿತ ಮುಖಂಡನ ಸಾವಿನಲ್ಲಿ ಅನುಮಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಗ್ರಾಮದಲ್ಲಿ ನಡೆದಿದೆ.
ಕರಾವಳಿಯ ಹಿರಿಯ ದಲಿತ ನಾಯಕ, ಅಂಬೇಡ್ಕರ್ ವಾದಿಯಾಗಿದ್ದ ಡೀಕಯ್ಯ ಮನೆಯಲ್ಲಿ ಒಬ್ಬರೇ ಇದ್ದಾಗ ಕಳೆದ ಜುಲೈ 6 ರಂದು ಆಯತಪ್ಪಿ ಬಿದ್ದಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆಗೆ ಸ್ಪಂದಿಸದೇ ಜು. 8ರಂದು ಮೆದುಳಿನ ರಕ್ತಸ್ರಾವದಿಂದ ಡೀಕಯ್ಯ ಮೃತಪಟ್ಟಿದ್ದರು.
ವಾಮಾಚಾರ ಶಂಕೆ: 70 ವರ್ಷದ ಬುಡಕಟ್ಟು ಮಹಿಳೆ ಕೊಂದ ಗ್ರಾಮಸ್ಥ
ಆ ಬಳಿಕ ಅವರ ಅಪಾರ ಅಭಿಮಾನಿಗಳ ಮನವಿ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪದ್ಮುಂಜದಲ್ಲಿ ದಫನ ಮಾಡಲಾಗಿತ್ತು. ಆದರೆ ಆವತ್ತು ಯಾರೂ ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲವಾದರೂ ಇದೀಗ ದಫನವಾದ ವಾರದ ಬಳಿಕ ಮೃತರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.
ಈ ಬಗ್ಗೆ ಡೀಕಯ್ಯ ಅಕ್ಕನ ಗಂಡ ಪದ್ಮನಾಭ ಎಂಬವರಿಂದ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ಹೀಗಾಗಿ ಬೆಳ್ತಂಗಡಿ ತಹಶೀಲ್ದಾರ್ ಸಮ್ಮುಖದಲ್ಲಿ ಮೃತದೇಹ ಹೊರತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿನ ಸತ್ಯಾಂಶ ಬಯಲಾಗುವ ನಿರೀಕ್ಷೆ ಇದ್ದು, ಡೀಕಯ್ಯ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿಯವರ ಪತಿ ಯಾಗಿದ್ದಾರೆ.
ಡೀಕಯ್ಯ ದೇಹದಲ್ಲಿ ಗಾಯದ ಗುರುತು?
ಮನೆಯಲ್ಲಿ ಬಿದ್ದಿದ್ದ ಹಿನ್ನೆಲೆಯಲ್ಲಿ ರಕ್ತಸ್ರಾವದ ಕಾರಣಕ್ಕೆ ಡೀಕಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐಸಿಯುನಲ್ಲೇ ಇದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿದ್ದಾರೆ. ಹೀಗಾಗಿ ಮೃತದೇಹ ಮನೆಗೆ ತಂದು ಎಲ್ಲರ ಒಪ್ಪಿಗೆಯಂತೆ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಆದರೆ ಇದೀಗ ಸಿಕ್ಕ ಆಸ್ಪತ್ರೆಯ ಮೆಡಿಕಲ್ ರಿಪೋರ್ಟ್ ನಲ್ಲಿ ದೇಹದ ಮೇಲೆ ಗಾಯದ ಗುರುತುಗಳಿದ್ದು, ಮುರಿತದ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನುವುದು ಸಂಬಂಧಿಕರ ಆರೋಪ.
ಮೊದಲು ಮೆದುಳಿನ ರಕ್ತ ಸ್ರಾವದಿಂದ ಮೃತಪಟ್ಟಿದ್ದಾರೆ ಎನ್ನಲಾಗಿತ್ತು, ಆದರೆ ಇದೀಗ ಗಾಯದ ಗುರುತು ಇರೋ ಬಗ್ಗೆ ಅನುಮಾನವಿದೆ. ಹೀಗಾಗಿ ಸಾವಿನ ಬಗ್ಗೆ ಅನುಮಾನ ಇದೆ ಅಂತಿದಾರೆ. ಡೀಕಯ್ಯ ಸೊಸೆ ಆಶಾಲತಾ ಹೇಳುವಂತೆ, ಮೆಡಿಕಲ್ ರಿಪೋರ್ಟ್ ನಲ್ಲಿ ಮುರಿತದ ಬಗ್ಗೆ ಉಲ್ಲೇಖವಿರೋ ಕಾರಣಕ್ಕೆ ಮೃತದೇಹದ ಮರಣೋತ್ತರ ಪರೀಕ್ಷೆಗೆ ಮನವಿ ಮಾಡಲಾಗಿದೆ.
ಮಾಹಿತಿ ಪ್ರಕಾರ ಡೀಕಯ್ಯ ಪದ್ಮುಂಜದ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದ್ದು, ಬಿದ್ದಾಗ ತಲೆಯ ಜೊತೆಗೆ ದೇಹದ ಬೇರೆ ಭಾಗಗಳಿಗೂ ಗಾಯವಾಗಿ ಮುರಿತವಾಗಿರೋ ಅನುಮಾನವೂ ಇದೆ. ಈ ನಡುವೆ ಸಂಬಂಧಿಕರ ಮನವಿಯಂತೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಳಿಕ ಸಾವಿನ ಸತ್ಯ ಹೊರ ಬರಲಿದೆ.