Asianet Suvarna News Asianet Suvarna News

ಶಾಲಾ ಬಾಲಕಿ ಮೇಲೆ ಆಸಿಡ್ ದಾಳಿ: ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಕೃತ್ಯ

ಶಾಲಾ ಬಾಲಕಿ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಆಸಿಡ್ ಎರಚಿ ಪರಾರಿಯಾಗಿರುವ ಭೀಕರ ಕೃತ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಆಸಿಡ್ ದಾಳಿಯಿಂದ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Delhi two bikers acid attack on school girl at national capital akb
Author
First Published Dec 14, 2022, 3:51 PM IST

ನವದೆಹಲಿ: ಶಾಲಾ ಬಾಲಕಿ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಆಸಿಡ್ ಎರಚಿ ಪರಾರಿಯಾಗಿರುವ ಭೀಕರ ಕೃತ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಆಸಿಡ್ ದಾಳಿಯಿಂದ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬಾಲಕಿಯ ಮುಖ ಮೇಲೆಯೇ ನೇರವಾಗಿ ದುಷ್ಕರ್ಮಿಗಳು ಆಸಿಡ್ ದಾಳಿ ಮಾಡಿರುವುದರಿಂದ ಬಾಲಕಿಯ ಕಣ್ಣುಗಳಿಗೂ ಹಾನಿಯಾಗಿದೆ. ಈ ಕೃತ್ಯವೆಸಗಿದ್ದ ಇಬ್ಬರು ಶಂಕಿತರನ್ನು ಪತ್ತೆ ಮಾಡಲಾಗಿದ್ದು, ಅವರಲ್ಲಿ ಒಬ್ಬರನ್ನು ಬಂಧಿಸಲಾಗಿದೆ. ಈ ಭೀಭತ್ಸ ಕೃತ್ಯವೂ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇಬ್ಬರು ಬಾಲಕಿಯರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬೈಕ್‌ನ್ನು ನಿಧಾನಗೊಳಿಸಿದ್ದು, ಬೈಕ್‌ನಲ್ಲಿದ್ದ ಓರ್ವ ನಡೆದು ಹೋಗುತ್ತಿದ್ದ ಬಾಲಕಿರ ಮೇಲೆ ಗ್ಲಾಸ್‌ನಿಂದ ಆಸಿಡ್ (Acid Attac) ಎರಚಿ ಪರಾರಿಯಾಗಿದ್ದಾರೆ. ಈ ವೇಳೆ ಆಸಿಡ್ ದಾಳಿಗೊಳಗಾದ 17ರ ಹರೆಯದ ಬಾಲಕಿ ಭೀಕರವಾದ ನೋವಿನೊಂದಿಗೆ ಮುಖವನ್ನು ಹಿಡಿದುಕೊಂಡು ಓಡುತ್ತಿರುವುದು ಕಾಣಿಸುತ್ತಿದೆ. ಬಳಿಕ ಹುಡುಗಿ ನೆರೆಮನೆಗೆ ಓಡಿದ್ದು, ಅಲ್ಲಿದ್ದವರು ಆಕೆಗೆ ಮುಖದಿಂದ ಕೆಮಿಕಲ್ ತೊಳೆಯಲು ಸಹಾಯ ಮಾಡಿದ್ದಾರೆ. 

ನನ್ನ 17 ಹಾಗೂ 13 ವರ್ಷದ ಹೆಣ್ಣು ಮಕ್ಕಳಿಬ್ಬರು ಇಂದು ಮುಂಜಾನೆ ಜೊತೆಯಾಗಿ ಹೊರಗೆ ಹೋಗಿದ್ದರು, ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಆಸಿಡ್ ಎಸೆದು ಪರಾರಿಯಾಗಿದ್ದಾರೆ ಎಂದು ಆಸಿಡ್ ದಾಳಿಗೊಳಗಾದ ಬಾಲಕಿಯ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಎಂದಾದರು ನಿಮ್ಮ ಮಗಳು, ಯಾರಾದರೂ ಕಿರುಕುಳ ನೀಡುತ್ತಿರುವುದರ ಬಗ್ಗೆ ನಿಮ್ಮಲ್ಲಿ ಹೇಳಿದ್ದರೆ ಎಂದು ಕೇಳಿದಾಗ ಅವರು ಇಲ್ಲ, ಒಂದು ವೇಳೆ ಆಕೆ ನಮಗೆ ಹೀಗೆ ಯಾರಾದರು ಕಿರುಕುಳ (harassment) ನೀಡುತ್ತಿದ್ದಾರೆ ಎಂದು ಹೇಳಿದ್ದರೆ ನಾವೇ ಅವಳೊಂದಿಗೆ ಎಲ್ಲೆಡೆ ಹೋಗುತ್ತಿದ್ದೆವು. ಇಬ್ಬರು ಅಕ್ಕ ತಂಗಿ ಜೊತೆಯಾಗಿಯೇ ಮೆಟ್ರೋದಲ್ಲಿ (Metro) ಶಾಲೆಗೆ ಹೋಗುತ್ತಿದ್ದರು ಎಂದು ಬಾಲಕಿಯ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. 

ನನಗೆ ಯಾರೋ ಕಿರುಕುಳ ನೀಡುತ್ತಿದ್ದಾರೆ ಎಂಬ ಬಗ್ಗೆ ನಮ್ಮ ಮಗಳು ಎಂದಿಗೂ ದೂರಿರಲಿಲ್ಲ ಎಂದು ಬಾಲಕಿಯ ತಾಯಿಯೂ ಹೇಳಿದ್ದಾರೆ. ಬಾಲಕಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ (Safdarjung Hospital) ದಾಖಲಿಸಲಾಗಿದ್ದು, ಆಕೆಯ ದೇಹದ ಶೇಕಡಾ 8ರಷ್ಟು ಭಾಗ ಸುಟ್ಟು ಹೋಗಿದೆ. ಎಷ್ಟು ಆಳವಾಗಿ ಸುಟ್ಟಿದೆ ಎಂಬುದನ್ನು ತಿಳಿಯಲು 48ರಿಂದ 72  ಗಂಟೆಗಳವರೆಗೆ ಕಾಯಬೇಕು. ಪ್ರಸ್ತುತ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ಬಿಎಲ್ ಶೇರ್ವಾಲ್ (BL Sherwal) ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಮತ್ತೊರ್ವನಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳ ಪತ್ತೆಗೆ ಮತ್ತಷ್ಟು ತಂಡವನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ. ಹರ್ಷವರ್ಧನ್ ಹೇಳಿದ್ದಾರೆ. 

ಘಟನೆ ಬಗ್ಗೆ ದೆಹಲಿ ಮಹಿಳಾ ಆಯೋಗದ (Delhi women's panel) ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ಬೇಸರ ವ್ಯಕ್ತಪಡಿಸಿದ್ದು, ಇಂತಹ ಹೀನ ಕೃತ್ಯಕ್ಕೆ ಕಾರಣವಾಗುವ ಆಸಿಡ್‌ಗೆ ಯಾಕೆ ಇನ್ನು ನಿಷೇಧ ಹೇರಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ರಾಷ್ಟ್ರ ರಾಜಧಾನಿಯಲ್ಲಿ ಹಾಡಹಗಲೇ ಶಾಲಾ ಬಾಲಕಿ ಮೇಲೆ ಆಸಿಡ್ ಎರಚಿದ್ದಾರೆ. ಯಾರಿಗಾದರೂ ಕಾನೂನಿನ ಭಯವಿದೆಯೇ? ಯಾಕೆ ಆಸಿಡ್ ಮಾರಾಟ ನಿಷೇಧ ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಆಸಿಡ್ ತರಕಾರಿ (vegetables) ಸಿಕ್ಕಿದಷ್ಟು ಸುಲಭವಾಗಿ ಸಿಗುತ್ತಿದೆ. ಆಸಿಡ್‌ನ ಚಿಲ್ಲರೆ ಮಾರಾಟವನ್ನು ಯಾಕೆ ಸರ್ಕಾರ ನಿಷೇಧಿಸಿಲ್ಲ. ಆಸಿಡ್ ಬ್ಯಾನ್ (acid Ban) ಮಾಡುವಂತೆ ದೆಹಲಿ ಮಹಿಳಾ ಆಯೋಗ ಹಲವು ವರ್ಷಗಳೀಂದ ಆಗ್ರಹಿಸುತ್ತಾ ಬಂದಿದೆ. ಸರ್ಕಾರ ಯಾವಾಗ ಎಚ್ಚೆತ್ತುಕೊಳ್ಳುತ್ತದೆ ಎಂದು ಸ್ವಾತಿ ಮಲಿವಾಲ್ ಪ್ರಶ್ನಿಸಿದ್ದಾರೆ. 


ಫೇಸ್‌ಬುಕ್‌ ಫ್ರೆಂಡ್‌ನಿಂದ ಮೆಟ್ರೋ ಸ್ಟೇಷನ್ ಬಳಿ ಯುವತಿ ಮೇಲೆ ಗ್ಲಾಸ್‌ ಬಾಟಲ್‌ನಿಂದ ಹಲ್ಲೆ

ಪತ್ನಿಗೆ 15 ಬಾರಿ ಇರಿದು ಕೊಲೆಗೆ ಯತ್ನಿಸಿದ ಪತಿ, ಕೃತ್ಯ ತಡೆಯುವ ಬದಲು ವಿಡಿಯೋ ಚಿತ್ರೀಕರಿಸಿದ ಸ್ಥಳೀಯರು!

Belagavi Crime: ಗಂಡನ ಮನೆಗೆ ಬರಲು ಒಲ್ಲೆ ಎಂದ ಪತ್ನಿ ಮೇಲೆ ಫೈರಿಂಗ್‌..!

Follow Us:
Download App:
  • android
  • ios