ಎಫ್‌ಐಆರ್‌ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ ಪೊಲೀಸರು. 

ಬೆಂಗಳೂರು(ಜು.25):  ರಾಜ್ಯ ಹೈಕೋರ್ಟ್‌ ಸಾರ್ವಜನಿಕ ಸಂಪರ್ಕಾಧಿಕಾರಿಯ ಮೊಬೈಲ್‌ಗೆ ಅನಾಮಧೇಯ ವ್ಯಕ್ತಿಗಳು ಪಾಕಿಸ್ತಾನದ ಬ್ಯಾಂಕಿನ ಖಾತೆ ಸಂಖ್ಯೆ ಕಳುಹಿಸಿ ‘50 ಲಕ್ಷ ರು. ಜಮೆ ಮಾಡಬೇಕು, ಇಲ್ಲದಿದ್ದರೆ ಹೈಕೋರ್ಟ್‌ನ ಹಾಲಿ ಐವರು ಮತ್ತು ಓರ್ವ ನಿವೃತ್ತ ನ್ಯಾಯಮೂರ್ತಿಗಳನ್ನು ದುಬೈ ಗ್ಯಾಂಗ್‌ನಿಂದ ಕೊಲೆ ಮಾಡಿಸುತ್ತೇವೆ’ ಎಂದು ಬೆದರಿಕೆ ಹಾಕಿ ವಾಟ್ಸ್‌ಆ್ಯಪ್‌ ಸಂದೇಶ ರವಾನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತಂತೆ ಹೈಕೋರ್ಟ್‌ ಪಿಆರ್‌ಓ ಕೆ.ಮುರಳೀಧರ್‌ ಅವರು ಕೇಂದ್ರ ಸಿಇಎನ್‌ ಠಾಣಾ ಪೊಲೀಸರಿಗೆ ಜು.14ರಂದು ದೂರು ದಾಖಲಿಸಿದ್ದಾರೆ. ಆ ದೂರಿನ ಮೇರೆಗೆ ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಟ್ಸ್‌ಆಪ್‌ನಲ್ಲಿ ಬೇಕಾಬಿಟ್ಟಿ ಸ್ಟೇಟಸ್‌, ಕೇಸ್‌ ರದ್ದು ಮಾಡಲು ನಿರಾಕರಿಸಿದ ಕೋರ್ಟ್‌!

ಮುರಳೀಧರ್‌ ಅವರ ಮೊಬೈಲ್‌ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಅನಾಮಧೇಯರು ಜು.12ರಂದು ರಾತ್ರಿ ಏಳು ಗಂಟೆಗೆ +1929237​-​1677 ಸಂಖ್ಯೆಯಿಂದ ಸಂದೇಶ ಕಳುಹಿಸಿ ಎಬಿಎಲ್‌ ಅಲೈಡ್‌ ಬ್ಯಾಂಕ್‌ ಲಿಮಿಟೆಡ್‌, ಪಾಕಿಸ್ತಾನ. ಐಬಿಎಎನ್‌ ನಂ: ಪಿಕೆ52ಎಬಿಪಿಎ0010074397190010 ಸಂಖ್ಯೆಯ ಬ್ಯಾಂಕ್‌ ಖಾತೆಗೆ 50 ಲಕ್ಷ ರು. ಹಣ ಹಾಕಬೇಕು. ಹಣ ಹಾಕದಿದ್ದರೆ ನಿನ್ನನ್ನು ಮತ್ತು ನ್ಯಾಯಮೂರ್ತಿಗಳಾದ ಮಹಮ್ಮದ್‌ ನವಾಜ್‌, ಎಚ್‌.ಟಿ. ನರೇಂದ್ರ ಪ್ರಸಾದ್‌, ಅಶೋಕ ಜಿ. ನಿಜಗಣ್ಣನವರ್‌, ಎಚ್‌.ಪಿ. ಸಂದೇಶ ಮತ್ತು ಕೆ.ನಟರಾಜನ್‌, ವೀರಪ್ಪ (ನಿವೃತ್ತ ನ್ಯಾಯಮೂರ್ತಿ) ಅವರನ್ನು ದುಬೈ ಗ್ಯಾಂಗ್‌ನಿಂದ ಕೊಲೆ ಮಾಡಿಸುವುದಾಗಿ ಹಿಂದಿ, ಉರ್ದು, ಇಂಗ್ಲಿಷ್‌ ಭಾಷೆಯಲ್ಲಿ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದರು.
ಅಲ್ಲದೆ, ಪ್ರತ್ಯೇಕ ಐದು ಮೊಬೈಲ್‌ ಸಂಖ್ಯೆಗಳನ್ನು ವಾಟ್ಸ್‌ ಆ್ಯಪ್‌ನಲ್ಲಿ ಕಳುಹಿಸಿ, ‘yah indian hamare aapkeshooter hain ’ (‘ಯಹ ಇಂಡಿಯನ್‌ ಹಮಾರೆ ಆಪ್‌ಕೇ ಶೂಟರ್‌ ಹೈನ್‌’) ಎಂದು ಸಂದೇಶ ಕಳುಹಿಸಿದ್ದಾರೆ. ಈ ಸಂದೇಶ ಕಳುಹಿಸಿದವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮುರಳೀಧರ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದರ ಮೇರೆಗೆ ಎಫ್‌ಐಆರ್‌ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.