ವಾಟ್ಸಾಪ್‌ನಲ್ಲಿ ಸ್ಟೇಟಸ್‌ಗಳನ್ನು ಹಾಕುವಾಗ ಬಹಳ ಜವಾಬ್ದಾರಿಯಿಂದ ಇರಬೇಕು ಎಂದು ಬಾಂಬೆ ಹೈಕೋರ್ಟ್‌ ಸೋಮವಾರ ಎಚ್ಚರಿಸಿದೆ. 

ಮುಂಬೈ (ಜು.24): ತಮ್ಮ ವಾಟ್ಸ್‌ಅಪ್‌ ಸ್ಟೇಟಸ್‌ಗಳ ಮೂಲಕ ಇತರರಿಗೆ ಏನನ್ನಾದರೂ ತಿಳಿಸುವಾಗ ವ್ಯಕ್ತಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಸೋಮವಾರ ಹೇಳಿದೆ. ಅದರೊಂದಿಗೆ ಧಾರ್ಮಿಕ ಗುಂಪಿನ ವಿರುದ್ಧ ದ್ವೇಷವನ್ನು ಹರಡುವ ವಿಷಯವನ್ನು ವಾಟ್ಸ್‌ಆಪ್‌ನ ಸ್ಟೇಟಸ್‌ನಲ್ಲಿ ಹಾಕಿದ್ದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿದೆ. ಜುಲೈ 12 ರಂದು ತನ್ನ ಆದೇಶದಲ್ಲಿ ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್‌ಎ ಮೆನೇಜಸ್ ಅವರ ವಿಭಾಗೀಯ ಪೀಠವು ಇತ್ತೀಚಿನ ದಿನಗಳಲ್ಲಿ ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ವಾಟ್ಸ್‌ಆಪ್‌ನ ಸ್ಟೇಟಸ್ ಮೂಲಕವೇ ಸಂಪರ್ಕ ಮಾಡುವುದನ್ನು ಕಾಣುತ್ತಿದ್ದೇವೆ. ಅದರೊಂದಿಗೆ ವ್ಯಕ್ತಿಗಳೂ ಕೂಡ ತಮ್ಮ ಸಂಪರ್ಕಗಳ ವಾಟ್ಸ್‌ಆಪ್‌ ಸ್ಟೇಟಸ್‌ಅನ್ನು ಆಗಾಗ್ಗೆ ಪರಿಶೀಲಿಸುತ್ತಿರುತ್ತಾರೆ ಎಂದು ಕೋರ್ಟ್‌ ಹೇಳಿದೆ. ಧಾರ್ಮಿಕ ಭಾವನೆ ಅಥವಾ ನಂಬಿಕೆಯನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಿದ ಅಥವಾ ಭಾರತೀಯ ದಂಡ ಸಂಹಿತೆಯಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ 27 ವರ್ಷದ ಕಿಶೋರ್ ಲ್ಯಾಂಡ್ಕರ್ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ಈ ವೇಳೆ ವಜಾಗೊಳಿಸಿದೆ.

“ವಾಟ್ಸ್‌ಆಪ್‌ ಸ್ಟೇಟಸ್‌ ನೀವು ಏನು ಮಾಡುತ್ತಿದ್ದೀರಿ, ಆಲೋಚಿಸುತ್ತೀರಿ ಅಥವಾ ನೀವು ನೋಡಿದ ಯಾವುದೋ ಚಿತ್ರ ಅಥವಾ ವೀಡಿಯೊ ಆಗಿರಬಹುದು, ಅದು 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ವ್ಯಕ್ತಿಯ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಏನನ್ನಾದರೂ ತಿಳಿಸುವುದು ವಾಟ್ಸ್‌ಆಪ್‌ ಸ್ಟೇಟಸ್‌ನ ಉದ್ದೇಶವಾಗಿದೆ. ಇದು ತಿಳಿದಿರುವ ವ್ಯಕ್ತಿಗಳೊಂದಿಗೆ ಸಂವಹನದ ವಿಧಾನವಲ್ಲದೆ ಬೇರೇನೂ ಅಲ್ಲ,” ಎಂದು ಹೈಕೋರ್ಟ್ ಹೇಳಿದೆ. "ಇತರರಿಗೆ ಏನನ್ನಾದರೂ ಸಂವಹನ ಮಾಡುವಾಗ ವ್ಯಕ್ತಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು" ಎಂದು ನ್ಯಾಯಾಲಯ ಹೇಳಿದೆ.

ದೂರುದಾರರ ಪ್ರಕಾರ, 2023ರ ಮಾರ್ಚ್‌ನಲ್ಲಿ ಆರೋಪಿಯು ತನ್ನ ವಾಟ್ಸಾಪ್ ಸ್ಟೇಟಸ್‌ಅನ್ನು ಅಪ್‌ಲೋಡ್‌ ಮಾಡಿದ್ದ. ಅದರಲ್ಲಿ ಆತ ಒಂದು ಪ್ರಶ್ನೆಯನ್ನು ಬರೆದಿದ್ದು, ಈ ಪ್ರಶ್ನೆಗೆ ಶಾಕಿಂಗ್‌ ಆದ ಉತ್ತರ ಬೇಕಾದಲ್ಲಿ ಇದನ್ನು ಗೂಗಲ್‌ನಲ್ಲಿ ಹುಡುಕಿ ಎಂದು ಸ್ಟೇಟಸ್‌ ಹಾಕಿಕೊಂಡಿದ್ದರು. ದೂರುದಾರರು ಗೂಗಲ್‌ನಲ್ಲಿ ಅದೇ ಪ್ರಶ್ನೆಯ ಅನುಸಾರ ಹುಡುಕಿದಾಗ, ಅವರು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಆಕ್ಷೇಪಾರ್ಹ ವಿಷಯವನ್ನು ಗಮನಿಸಿದರು. ಯಾವುದೇ ಧಾರ್ಮಿಕ ಗುಂಪಿನ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಅಥವಾ ಉದ್ದೇಶಪೂರ್ವಕವಾಗಿ ಸ್ಟೇಟಸ್ ಅನ್ನು ಪ್ರದರ್ಶಿಸಿಲ್ಲ ಎಂದು ಆರೋಪಿ ಹೇಳಿಕೊಂಡಿದ್ದಾನೆ ಮತ್ತು ವ್ಯಕ್ತಿಯು ನನ್ನ ನಂಬರ್‌ಅನ್ನು ಸೇವ್‌ ಮಾಡಿಕೊಂಡಿದ್ದಲ್ಲಿ ಮಾತ್ರವೇ ನನ್ನ ವಾಟ್ಸ್‌ಆಪ್‌ ಸ್ಟೇಟಸ್‌ ನೋಡಬಹುದು. ದ್ವೇಷವನ್ನು ಹರಡುವ ಉದ್ದೇಶ ತನಗೆ ಇರಲಿಲ್ಲ ಎಂದಿದ್ದಾನೆ.

AI ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಸ್ಕಾಮ್, ವ್ಯಾಟ್ಸ್ಆ್ಯಪ್ ಮೂಲಕ 40 ಸಾವಿರ ಕಳೆದುಕೊಂಡ ಯುವಕ!

ಇದನ್ನು ಗಮನಿಸಿದ ಕೋರ್ಟ್‌ ಆರೋಪಿಯು ಅಪ್‌ಲೋಡ್‌ ಮಾಡಿದ ವಾಟ್ಸ್‌ಆಪ್‌ ಸ್ಟೇಟಸ್‌ನಿಂದಾಗಿ ದೂರುದಾರ ವ್ಯಕ್ತಿಯು ಈ ಬಗ್ಗೆ ಗೂಗಲ್‌ನಲ್ಲಿ ಸರ್ವ್‌ ಮಾಡುವಂತೆ ಪ್ರೇರೇಪಣೆ ನೀಡಿದ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಒಂದು ನಿರ್ದಿಷ್ಟ ಗುಂಪಿನ ಭಾವನೆಯನ್ನು ಅವಮಾನಿಸುವ ಆರೋಪಿಯ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಉದ್ದೇಶವನ್ನು ಎಫ್‌ಐಆರ್ ಪ್ರಾಥಮಿಕವಾಗಿ ಬಹಿರಂಗಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ ಮತ್ತು ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ.

ವಾಟ್ಸ​ಪ್‌​ನಲ್ಲಿ ಮತ್ತೊಂದು ನಗ್ನ​ಚಿತ್ರ ವೈರ​ಲ್‌: ಯುವತಿ ಮೋಸದ ಬಲೆಗೆ ಬಿದ್ದ ಯುವಕ!

“ವಾಟ್ಸಾಪ್ ಸ್ಟೇಟಸ್‌ಅನ್ನು ಸೀಮಿತ ಪ್ರಸರಣ ಎಂದು ಹೇಳುವ ಮೂಲಕ ಅರ್ಜಿದಾರರು ತಮ್ಮ ಜವಾಬ್ದಾರಿಯಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅರ್ಜಿದಾರರು ಅಂತಹ ಸ್ಟೇಟಸ್‌ಅನ್ನು ಹಾಕಿದ್ದಕ್ಕೆ ಯಾವುದೇ ಸಮರ್ಥನೆ ಇಲ್ಲ, ”ಎಂದು ಹೈಕೋರ್ಟ್ ಹೇಳಿದೆ.