ಗಾಳಕ್ಕೆ ಸಿಕ್ಕಿದ್ದು ಮೀನಲ್ಲ, ಬದಲಿಗೆ ಕಾರ್ಮಿಕನ ಶವ: ದಿಕ್ಕಪಾಲಾದ ಯುವಕರು
ಯುವಕರು ಹಾಕಿದ್ದ ಗಾಳಕ್ಕೆ ಮೀನಲ್ಲ, ಬದಲಿಗೆ ಕಾರ್ಮಿಕನ ಶವ ಬಿದ್ದಿದ್ದು, ಯುವಕರು ದಿಕ್ಕಪಾಲಾಗಿ ಓಡಿದ್ದಾರೆ.
ಉಡುಪಿ, (ಆ.21): ನಗರ ಮಠದಬೆಟ್ಟು ಗರಡಿಯ ಬಳಿ ಇಂದ್ರಾಣಿ ನದಿಯಲ್ಲಿ ಸುಮಾರು 45 ವರ್ಷ ವಯಸ್ಸಿನ ವಲಸೆ ಕಾರ್ಮಿಕನ ಶವ ಗುರುವಾರ ರಾತ್ರಿ ಪತ್ತೆಯಾಗಿದೆ.
ವಿಚಿತ್ರ ಎಂದರೇ ಈ ಶವ ಮೀನಿಗಾಗಿ ಹಾಕಿದ್ದ ಗಾಳಕ್ಕೆ ಸಿಕ್ಕಿಬಿದ್ದಿತ್ತು. ಉಡುಪಿಯ ಸರ್ವತ್ಯಾಜ್ಯ ಸೇರುವ ಈ ಇಂದ್ರಾಣಿ ನದಿಯಲ್ಲಿ ನಿತ್ಯವೂ ಸಾಕಷ್ಟು ಮಂದಿ ಗಾಳ ಹಾಕುತ್ತಾರೆ. ಗುರುವಾರ ಸಂಜೆ ನಿಟ್ಟೂರಿನ ಕೆಲವು ಯುವಕರು ಮಠದಬೆಟ್ಟು ಪರಿಸರದ ಗಾಳ ಹಾಕುತಿದ್ದರು.
ಆಗ ಗಾಳಕ್ಕೆ ಭಾರೀ ವಸ್ತುವೊಂದು ಸಿಕ್ಕಿಬಿತ್ತು. ಅವರು ದೊಡ್ಡ ಮೀನಿರಬೇಕು ಎಂದು ಖುಷಿಯಿಂದ ಗಾಳವನ್ನು ಬಲವಾಗಿ ಮೇಲೆಕ್ಕೆ ಎಳೆದಾಗ ಶವ ಮೇಲೆ ಬಂದಿದೆ. ಇದರಿಂದ ಹೆದರಿ ಕಂಗಲಾದ ಯುವಕರು ಗಾಳ ಪರಿಕರಗಳನ್ನೆಲ್ಲಾ ಅಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬಲೆಗೆ ಬಿತ್ತು ಬೃಹತ್ ಹಕ್ಕಿ ತೊರ್ಕೆ ಮೀನು..! ಇಲ್ಲಿವೆ ಫೋಟೋಸ್
ರಾತ್ರಿ ಈ ವಿಷಯ ಉಡುಪಿ ನಗರ ಠಾಣೆಗೆ ತಲುಪಿದ್ದು, 11 ಗಂಟೆಗೆ ಠಾಣಾಧಿಕಾರಿ ಸಕ್ತಿವೇಲು ಅವರು ಸ್ಥಳಕ್ಕೆ ತೆರಳಿದಾಗ ನದಿಯಲ್ಲಿ ತೇಲುತಿದ್ದ ಶವವನ್ನ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನದಿಗಿಳಿದು ಸಾಹಸದಿಂದ ಮೇಲಕ್ಕೆತ್ತಿದ್ದಾರೆ.
ಮೃತಪಟ್ಟವ ವಲಸೆ ಕಾರ್ಮಿಕನಾಗಿದ್ದು, ವಿಪರೀತ ಮದ್ಯಪಾನ ಮಾಡುತಿದ್ದರು. ಗುರುವಾರ ಸಂಜೆ ಮದ್ಯಪಾನ ಮಾಡಿ ಕಲ್ಸಂಕ ಸೇತುವೆಯಿಂದ ಕೆಳಗೆ ನೀರಿಗೆ ಬಿದ್ದು, ಮಳೆ ನೀರಿನಲ್ಲಿ ಅನತೀ ದೂರದ ಮಠದಬೆಟ್ಟುವರೆಗೆ ಕೊಚ್ಚಿಕೊಂಡು ಹೋಗಿದ್ದು, ಯುವಕರು ಹಾಕಿದ್ದ ಗಾಳ ಶವದ ಸೊಂಟಕ್ಕೆ ಸಿಕ್ಕಿಹಾಕಿಕೊಂಡು ಮೇಲಕ್ಕೆ ಬಂದಿದೆ. ಈ ಬಗ್ಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.