Asianet Suvarna News Asianet Suvarna News

ಬಚಾವಾಗಲು ₹30 ಲಕ್ಷ ಕ್ಯಾಶ್‌ ಕೊಟ್ಟಿದ್ದ ದರ್ಶನ್‌: ಪೊಲೀಸರ ತನಿಖೆಯಲ್ಲಿ ಬಯಲು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಹೇಳದೆ ಪೊಲೀಸರಿಗೆ ಶರಣಾಗತಿಯಾಗುವ ನಾಲ್ವರು ಸಹಚರರಿಗೆ ನೀಡುವಂತೆ ಖುದ್ದು ನಟ ದರ್ಶನ್‌ ತಮ್ಮ ಮನೆಯಲ್ಲೇ 30 ಲಕ್ಷ ರು.ಗಳನ್ನು ನೀಡಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

Darshan who gave 30 lakh cash to escape Revealed in police investigation gvd
Author
First Published Jun 15, 2024, 7:39 AM IST

ಬೆಂಗಳೂರು (ಜೂ.15): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರು ಹೇಳದೆ ಪೊಲೀಸರಿಗೆ ಶರಣಾಗತಿಯಾಗುವ ನಾಲ್ವರು ಸಹಚರರಿಗೆ ನೀಡುವಂತೆ ಖುದ್ದು ನಟ ದರ್ಶನ್‌ ತಮ್ಮ ಮನೆಯಲ್ಲೇ 30 ಲಕ್ಷ ರು.ಗಳನ್ನು ನೀಡಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ತಾವು ಹಲ್ಲೆ ನಡೆಸಿ ಹೊರಬಂದ ಬಳಿಕ ರೇಣುಕಾಸ್ವಾಮಿ ಸಾವಿನ ಸಂಗತಿ ತಿಳಿದು ಆತಂಕಗೊಂಡ ದರ್ಶನ್‌, ತಮ್ಮ ಮನೆಗೆ ಆಪ್ತರಾದ ವಿನಯ್‌, ಪ್ರದೋಷ್ ಹಾಗೂ ದೀಪಕ್‌ನನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಆಗ ತನ್ನ ಹೆಸರು ಪ್ರಕರಣದಲ್ಲಿ ಬಾರದಂತೆ ನೋಡಿಕೊಳ್ಳುವಂತೆ ಹೇಳಿ ಪ್ರದೋಷ್‌ಗೆ 30 ಲಕ್ಷ ರು. ಹಣವನ್ನು ದರ್ಶನ್‌ ಕೊಟ್ಟಿದ್ದರು. ಈ ಹಣವನ್ನು ಪ್ರದೋಷ್ ಮನೆಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ರೇಣುಕಾಸ್ವಾಮಿ ಕರೆತಂದ ವಿಷಯ ಹೇಳಿದ್ದು ಪವನ್: ತನ್ನ ಪ್ರಿಯತಮೆ ಪವಿತ್ರಾಗೌಡಳಿಗೆ ಇನ್‌ಸ್ಟಾಗ್ರಾಂನಲ್ಲಿ ಮರ್ಮಾಂಗದ ಫೋಟೋ ಕಳುಹಿಸಿದ್ದ ಸಂಗತಿ ತಿಳಿದು ಕೆರಳಿದ್ದ ದರ್ಶನ್‌, ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ ಕರೆ ತರುವಂತೆ ಚಿತ್ರದುರ್ಗದ ತಮ್ಮ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಹೇಳಿದ್ದರು. ಅಂತೆಯೇ ಚಿತ್ರದುರ್ಗದಲ್ಲಿ ಶನಿವಾರ ಬೆಳಗ್ಗೆ ರೇಣುಕಾಸ್ವಾಮಿಯನ್ನು ದರ್ಶನ್ ಸಹಚರರು ಅಪಹರಿಸಿದ್ದರು. ಆನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದಿದ್ದರು. ಆ ವೇಳೆ ವಿನಯ್‌ ಒಡೆತನದ ಪಬ್‌ನಲ್ಲಿ ಮದ್ಯ ಸೇವಿಸುತ್ತಾ ಸ್ನೇಹಿತರ ಜತೆ ದರ್ಶನ್ ಊಟ ಮಾಡುತ್ತಿದ್ದರು. ಆಗ ಅವರಿಗೆ ಕರೆ ಮಾಡಿ ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತರಲಾಗಿದೆ ಎಂದು ಪವನ್ ತಿಳಿಸಿದ್ದ. ತಕ್ಷಣವೇ ಪಬ್‌ನಿಂದ ಹೊರಟ ದರ್ಶನ್‌, ತಮ್ಮ ಪ್ರಿಯತಮೆ ಪವಿತ್ರಾಗೌಡಳ ಮನೆಗೆ ತೆರಳಿ ಆಕೆಯನ್ನು ಕರೆದುಕೊಂಡು ಶೆಡ್‌ಗೆ ಹೋಗಿದ್ದಾರೆ.

ಏನೋ ಆಗಿಹೋಯ್ತು ಸಾರ್‌... ತನಿಖೆ ವೇಳೆ ಪೊಲೀಸರೆದುರು ದರ್ಶನ್‌ ಕಣ್ಣೀರು: ನಖರಾ ಬಿಡದ ಪವಿತ್ರಾಗೌಡ

ಆಗ ಅಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಅವರು, ಅಲ್ಲಿಂದ ಹೊರಟು ಸೀದಾ ಐಡಿಯಲ್‌ ಹೋಮ್ಸ್‌ನಲ್ಲಿರುವ ಮನೆಗೆ ಮರಳಿದ್ದಾರೆ. ಸಂಜೆ ಹೊತ್ತಿಗೆ ಹಲ್ಲೆಯಿಂದ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೃತಪಟ್ಟ ಸಂಗತಿಯನ್ನು ದರ್ಶನ್‌ಗೆ ಅವರ ಸಹಚರರು ಕರೆ ಮಾಡಿ ತಿಳಿಸಿದ್ದಾರೆ. ಈ ಸಂಗತಿ ತಿಳಿದ ಕೂಡಲೇ ದರ್ಶನ್ ಆತಂಕಗೊಂಡಿದ್ದಾರೆ. ಕೂಡಲೇ ತಮ್ಮ ಆಪ್ತರಾದ ಪಟ್ಟಣಗೆರೆ ವಿನಯ್‌, ಹೋಟೆಲ್ ಉದ್ಯಮಿ ಪ್ರದೋಷ್‌ ಹಾಗೂ ದೀಪಕ್‌ರನ್ನು ಕರೆಸಿಕೊಂಡು ದರ್ಶನ್ ಮಾತುಕತೆ ನಡೆಸಿದ್ದಾರೆ. ಆಗ ಕೃತ್ಯದಲ್ಲಿ ತಮ್ಮ ಹೆಸರು ಬಾರದಂತೆ ಡೀಲ್ ನಡೆಸುವಂತೆ ಹೇಳಿ ಪ್ರದೋಷ್‌ಗೆ 30 ಲಕ್ಷ ರು. ಹಣವನ್ನು ದರ್ಶನ್ ಕೊಟ್ಟಿದ್ದರು.

ಈ ಹಣ ಪಡೆದು ದರ್ಶನ್‌ ಮನೆಯಿಂದ ಅವರ ಆಪ್ತರು ಹೊರಟರು. ಆನಂತರ ಪವನ್ ಮೂಲಕ ರಾಘವೇಂದ್ರ, ಗಿರಿನಗರ ಸಮೀಪದ ಚಾಮುಂಡಿ ನಗರದ ಕಾರ್ತಿಕ್ ಅಲಿಯಾಸ್ ಕಪ್ಪೆ, ಹೀರಣ್ಣನ ಗುಡ್ಡದ ಕೇಶವಮೂರ್ತಿ ಹಾಗೂ ಬನ್ನೇರುಘಟ್ಟ ರಸ್ತೆಯ ಕೆಂಬತ್ತನಹಳ್ಳಿಯ ನಿಖಿಲ್‌ ನಾಯಕ್‌ರನ್ನು ಪೊಲೀಸರಿಗೆ ಶರಣಾಗುವಂತೆ ಒಪ್ಪಿಸಿದ್ದರು. ಈ ನಾಲ್ವರ ಜತೆ ಪವಿತ್ರಾಗೌಡ ಸಹ ಮಾತುಕತೆ ನಡೆಸಿದ್ದಳು. ಯಾವುದೇ ಕಾರಣಕ್ಕೂ ದರ್ಶನ್ ಹೆಸರು ಹೇಳದಂತೆ ಪವಿತ್ರಾ ಸಹ ಸೂಚಿಸಿದ್ದಳು. ಕೊನೆಗೆ ಪಟ್ಟಣಗೆರೆ ವಿನಯ್‌ ಮೂಲಕ ಅವರ ಪರಿಚಿತ ಪಿಎಸ್‌ಐ ಜತೆ ಮಾತನಾಡಿ ನಾಲ್ವರನ್ನು ಶರಣಾಗತಿ ಮಾಡಿಸಿದ್ದರು.

ಮೃತದೇಹ ಸಾಗಿಸಿದ ಬಳಿಕ ಮೈಸೂರಿಗೆ ದರ್ಶನ್‌: ಪಟ್ಟಣಗೆರೆ ಶೆಡ್‌ನಿಂದ ಭಾನುವಾರ ನಸುಕಿನಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಿಸಿದ ಬಳಿಕ ಮೈಸೂರಿಗೆ ದರ್ಶನ್ ತೆರಳಿದ್ದರು. ಮೃತದೇಹ ಸಾಗಿಸುವ ವೇಳೆ ತಮ್ಮ ಮನೆಯಲ್ಲೇ ದರ್ಶನ್ ಇದ್ದರು. ತನ್ನ ಸಹಚರರ ಜತೆ ನಿರಂತರವಾಗಿ ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದ ಅವರು, ಯಾರಿಗೂ ತಿಳಿಯದಂತೆ ಮೃತದೇಹ ಸಾಗಿಸುವುದು ಖಾತ್ರಿಯಾದ ನಂತರ ಮೈಸೂರಿಗೆ ಹೊರಟರು. ಮೈಸೂರಿನಲ್ಲಿ ಸ್ನೇಹಿತರ ಮನೆಯಲ್ಲಿ ನಡೆದ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ‘ಡೆವಿಲ್’ ಚಲನಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಎಸ್‌ವೈ ಕುಟುಂಬ ನಾಶಕ್ಕೆ ಕಾಂಗ್ರೆಸ್‌ ಕುತಂತ್ರ: ಎಚ್‌.ಡಿ.ಕುಮಾರಸ್ವಾಮಿ

ದರ್ಶನ್‌ಗೆ ಸೇರಿದ ಹಣದ ಕುರಿತು ತನಿಖೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶರಣಾಗತಿ ಡೀಲ್‌ಗೆ ದರ್ಶನ್ ನೀಡಿರುವ ಹಣದ ಕುರಿತು ತನಿಖೆ ನಡೆಸಲಾಗುತ್ತಿದೆ. ನಗದು ರೂಪದಲ್ಲೇ ಅವರು ಹಣ ಸಂದಾಯ ಮಾಡಿದ್ದಾರೆ. ಹೀಗಾಗಿ ಹಣ ಎಲ್ಲಿಂದ ಬಂದಿದೆ ಎಂಬುದರ ಕುರಿತು ದರ್ಶನ್ ಅವರಿಂದ ವಿವರಣೆ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios