ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೌಂಟರ್ ನೀಡಲು, ಕರ್ನಾಟಕ ಕಾಂಗ್ರೆಸ್ ಬೆಂಗಳೂರಿನಲ್ಲಿ ಫ್ರೀಡಮ್ ಮಾರ್ಚ್ ಹಮ್ಮಿಕೊಂಡಿತ್ತು. ಜನಸಾಗರವೇ ಹರಿದು ಬಂದ ಈ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದವರ ಮೇಲೆ ಕಾಂಗ್ರೆಸ್ ಯುವ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಾಗಿದೆ. 

ಬೆಂಗಳೂರು (ಆ.17): ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಕಾರ್ಯಕರ್ತರಿಂದ ನೃತ್ಯಗಾರರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಫ್ರೀಡಮ್ ಮಾರ್ಚ್ ವೇಳೇ ಸಂಭವಿಸಿದ ಈ ಘಟನೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾಂಗ್ರೆಸ್‌ನ ಸ್ವಾತಂತ್ರ್ಯ ನಡಿಗೆ ವೇಳೆ ನೃತ್ಯಗಾರರಿಗೆ NSUI ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಫ್ಲಾಶ್ ಮಾಬ್ ಮಾಡುತ್ತಿದ್ದ ನೃತ್ಯಗಾರರ ಮೇಲೆ NSUI ಸೆಕ್ರೆಟರಿ ದೀಪಕ್ ಗೌಡ, ಉಪಾಧ್ಯಕ್ಷ ಜಯಂದರ್ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ದಾಖಲಾಗಿದೆ. 

ವಿವಿ ಪುರಂ ಜೈನ್ ಕಾಲೇಜ್ (Jain College) ಬಳಿ ಘಟನೆ ನಡೆದಿದ್ದು, ವಿವಿ ಪುರಂ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಿದ್ದಾರೆ ನೃತ್ಯಗಾರರು. ಡ್ಯಾನ್ಸ್ ಮಾಸ್ಟರ್ ಸೇರಿ ಕೆಲವು ಯುವತಿಯರಿಗೂ NSUI ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ದೀಪಕ್ ಗೌಡ ಹಾಗೂ ಜಯಂದರ್ ಸ್ವಾತಂತ್ರ್ಯ ನಡಿಗೆ ವೇಳೆ ಫ್ಲಾಷ್ ಮಾಬ್ ಜವಬ್ದಾರಿ ಹೊತ್ತಿದ್ದರು. ಘಟನೆ ನಡೆದ ನಂತರ NSUI ಅಧ್ಯಕ್ಷ ಕೀರ್ತಿ ಗಣೇಶ್ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಸಾರ್ವಜನಿಕವಾಗಿ ಹಲ್ಲೆ ಮಾಡಿದ್ರಿಂದ ನೊಂದು ದೂರು ನೀಡಿದ್ದಾರೆ ನೃತ್ಯಗಾರರು. ಕಾಂಗ್ರೆಸ್ ಕಚೇರಿಯಲ್ಲಿ ಬಗೆ ಹರಿಯಬೇಕಿದ್ದ ಜಗಳ ಪೊಲೀಸ್ ಸ್ಟೇಷನ್ ಅಂಗಳಕ್ಕೆ ತಲುಪಿದಂತಾಗಿದೆ. 

ಸ್ವಾತಂತ್ರ್ಯ ನಡೆಗೆಯಲ್ಲಿ ಆಗಿದ್ದೇನು?
ಸ್ವಾತಂತ್ರ್ಯ ನಡಿಗೆಗೆ ಕೀರ್ತಿ ಡ್ಯಾನ್ಸ್ ಟೀಮ್ ಒಂದನ್ನು ಸಿದ್ದಪಡಿಸಿದ್ದರು. ಈ ಟೀಮ್ ಹಲವು ಕಡೆ ಫ್ಲಾಷ್ ಮಾಬ್ ಮಾಡುವ ಮೂಲಕ ಸ್ವಾತಂತ್ರ್ಯ ನಡಿಗೆಗೆ (Freedom March) ಜಾಗೃತಿ ಮೂಡಿಸುತ್ತಿತ್ತು. ಡ್ಯಾನ್ಸ್ ಟೀಮ್ ಪಾದಯಾತ್ರೆಯಲ್ಲಿ ಭಾಗಿಯಾಗಿತ್ತು. ಮೊದಲಿಂದಲೂ ಕೀರ್ತಿ ಗಣೇಶ್ ವಿರುದ್ದ ಇರುವ ದೀಪಕ್ ಗೌಡ ಹಾಗೂ ಜಯಂದರ್ ಹಗೆ ಸಾಧಿಸುತ್ತಿದ್ದರು. NSUI ಸಂಘಟನೆಯಲ್ಲಿ ಈ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ, ವೈಮನಸ್ಸು ಇದೆ. ಸ್ವಾತಂತ್ರ್ಯ ನಡಿಗೆ ವೇಳೆ ಫ್ಲಾಷ್ ಮಾಬ್ ಟೀ ಜೊತೆ ಕಿರಿಕ್ ತೆಗೆದು ಹಲ್ಲೆ ಮಾಡಿದ್ದಾರೆ ಜಯಂದರ್ ಹಾಗೂ ದೀಪಕ್ ಗೌಡ. ಈ ವೇಳೆ ಡ್ಯಾನ್ಸ್ ಮಾಸ್ಟರ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ, ಎಂದು ಆರೋಪಿಸಲಾಗುತ್ತಿದೆ. 

ಕಾಂಗ್ರೆಸ್ ನಡಿಗಿಗೆ ಸಾವಿರಾರು ಮಂದಿ ನೋಂದಣಿ

ಆಗಸ್ಟ್ 15ರಂದು ಹಮ್ಮಿ ಕೊಂಡಿದ್ದ ಈ ಫ್ರೀಡಂ ಮಾರ್ಚ್‌ಗೂ ಎರಡು ದಿನ ಮೊದಲೇ ಶುರುವಾಗಿತ್ತು NSUI ಹುಡುಗರ ಕಿರಿಕ್. ದೊಡ್ಡ ನಾಯಕರಂತೆಯೇ ಫ್ಲೆಕ್ಸ್ ಬ್ಯಾನರ್ ವಿಚಾರದಲ್ಲಿ ಶುರುವಾಗಿದ್ದ NSUI ವಿದ್ಯಾರ್ಥಿ ಮುಖಂಡರ ಕಿರಿಕ್. ನಲಪಾಡ್ ನೇತೃತ್ವದ ಫ್ಲ್ಯಾಗ್ ಮಾರ್ಚ್ ನಲ್ಲಿ ಫ್ಲೆಕ್ಸ್ ವೆಹಿಕಲ್ ಸಿದ್ದಪಡಿಸಿದ್ದ ಜಯೇಂದರ್ ಹಾಗೂ ದೀಪಕ್. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಫೋಟೋವನ್ನೇ ಹಾಕದೇ ಫ್ಲೆಕ್ಸ್ ಬ್ಯಾನರ್ ಅಳವಡಿಸಿದ್ದ ಕಾರ್ಯದರ್ಶಿ ದೀಪಕ್ ಹಾಗೂ ಉಪಾಧ್ಯಕ್ಷ ಜಯೇಂದರ್. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಫೋಟೋ ಹಾಕದಿರುವುದಕ್ಕೆ ಬುದ್ದಿವಾದ ಹೇಳಿದ್ದ ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಬಿವಿ ಶ್ರೀನಿವಾಸ್. ಶ್ರೀನಿವಾಸ್ ಮಾತಿಗೂ ಕ್ಯಾರೇ ಎನ್ನದೇ ಕೀರ್ತಿ ಗಣೇಶ್‌ರನ್ನು ಕಡೆಗಣಿಸಿದ್ದ ಇಬ್ಬರು ಮುಖಂಡರು. ಇಲ್ಲಿಂದ ಶುರುವಾದ ಕಿರಿಕ್, ಫ್ರೀಡಂ ಮಾರ್ಚ್‌ನಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಕೀರ್ತಿ ಗಣೇಶ್ ಕರೆತಂದಿದ್ದ ಫ್ಲ್ಯಾಶ್ ಮಾಬ್ ತಂಡದ ಮೇಲೆ ಹಲ್ಲೆ ಮಾಡಿತ್ತು ದೀಪಕ್ ಗೌಡ ಹಾಗೂ ಜಯೇಂದರ್ ತಂಡ. 

ಆ.15 ರಂದು ಹಮ್ಮಿಕೊಂಡಿದ್ದ ಈ ಸ್ವಾತಂತ್ರ್ಯ ನಡಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ, ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದವರೆಗೆ ನಡೆದಿತ್ತು. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಕನ್ನಪಡರ ಸಂಘಟನೆಗಳು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರೂ ಇದ್ದರು. ಪಾಲ್ಗೊಂಡವರಿಗೆ ಉಚಿತವಾಗಿ ರಾಷ್ಟ್ರಧ್ವಜ, ಟಿ-ಶರ್ಟ್‌, ಟೋಪಿ ನೀಡಲಾಗಿತ್ತು.

ಮಹಾ ಸ್ವಾತಂತ್ರ್ಯ ನಡಿಗೆಯಲ್ಲಿ ಸಾವಿರಾರು ಮಂದಿ