* ಎಲ್ಲ ಜಿಲ್ಲೆಗಳಲ್ಲೂ 75 ಕಿ.ಮೀ. ನಡಿಗೆ* ಆ.15ರ ಬಳಿಕ ರಾಜ್ಯ ಪ್ರವಾಸ?* 1 ಲಕ್ಷ ಜನ ಸೇರಿಸುವ ಗುರಿ- ಡಿಕೆಶಿ
ಬೆಂಗಳೂರು(ಜು.08): ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಗಸ್ಟ್ 15ರಂದು ಮಧ್ಯಾಹ್ನ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿವರೆಗೂ ರಾಷ್ಟ್ರಧ್ವಜ ಹಿಡಿದು ಬೃಹತ್ ‘ಸ್ವಾತಂತ್ರ್ಯ ನಡಿಗೆ’ (ಫ್ರೀಡಂ ಮಾರ್ಚ್) ನಡೆಸಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ.
ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು ಪಕ್ಷಾತೀತ ಕಾರ್ಯಕ್ರಮವನ್ನಾಗಿ ಆಯೋಜಿಸಿ ಕನಿಷ್ಠ 1 ಲಕ್ಷ ಜನರನ್ನು ಸೇರಿಸಬೇಕು ಎಂದು ನಿರ್ಧರಿಸಲಾಯಿತು.
ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಪಿಎಸ್‌ಐ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಗೆ ‘ಕೈ’ ಹೋರಾಟ
ಇದೇ ವೇಳೆ ಪ್ರತಿ ಜಿಲ್ಲಾ ಮಟ್ಟದಲ್ಲಿ 75 ಕಿ.ಮೀ. ಉದ್ದದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ನಡೆಸಬೇಕು. ಆ. 1ರಿಂದ ಆ.10ರ ನಡುವೆ ಅಥವಾ ಅದಕ್ಕಿಂತಲೂ ಮುಂಚಿತವಾಗಿ ಪಾದಯಾತ್ರೆ ನಡೆಸಿ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
1 ಲಕ್ಷ ಜನ ಸೇರಿಸುವ ಗುರಿ- ಡಿಕೆಶಿ:
ಈ ಬಗ್ಗೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಸುಮಾರು 75 ಸಾವಿರದಿಂದ 1 ಲಕ್ಷದವರೆಗೂ ಜನ ಸೇರಲಿದ್ದಾರೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಜನರು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದು, ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದರು.
ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಕ್ರೀಡಾಪಟುಗಳು, ಕಲಾವಿದರು ಸೇರಿದಂತೆ ಎಲ್ಲರೂ ಭಾಗವಹಿಸಬಹುದು ಎಂದು ಕರೆ ನೀಡಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ರಾಜ್ಯದಲ್ಲಿ ಪಾದಯಾತ್ರೆ ಮೂಲಕ ಆಚರಿಸಲು ಸೂಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ಮಾಡಲಾಗುವುದು. ಈ ನಡಿಗೆಯನ್ನು ಒಂದು ಜಿಲ್ಲೆಯ ಎಷ್ಟುತಾಲೂಕುಗಳಲ್ಲಿ ಮಾಡಬೇಕು ಎಂಬುದನ್ನು ಆಯಾ ಜಿಲ್ಲಾ ಕಾಂಗ್ರೆಸ್ ನಾಯಕರ ಇಚ್ಛೆಗೆ ಬಿಟ್ಟಿದ್ದೇವೆ ಎಂದರು.
ಆ.1 ರಿಂದ ಆ.10ರವರೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಬೇಕಾದರೂ ಈ ಪಾದಯಾತ್ರೆ ಮಾಡಬಹುದು. ಕೆಲವು ನಾಯಕರು ತಮ್ಮ ಕ್ಷೇತ್ರಗಳಲ್ಲೇ 75 ಕಿ.ಮೀ ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದು, ಅದಕ್ಕೂ ಅನುಮತಿ ನೀಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ ಸಾಕಷ್ಟಿದೆ. ಈ ದೇಶಕ್ಕೆ ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆಯನ್ನು ಕೊಡುಗೆಯಾಗಿ ನೀಡಿದ್ದು ಕಾಂಗ್ರೆಸ್. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಸಿದ್ದರಾಮೋತ್ಸವಕ್ಕೆ ಬೇಕಿದ್ರೆ ಸಹಕಾರ ನೀಡುತ್ತೇವೆ: ನಳೀನ್ ಕುಮಾರ್ ಕಟೀಲ್
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು ಇದ್ದರೆ ಅವರನ್ನು ಅಥವಾ ಅವರ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಆಯಾ ತಾಲೂಕಿನ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪದಾಧಿಕಾರಿಗಳ ಸಭೆ:
ಇದೇ ವೇಳೆ ಪಕ್ಷದ ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳ ಸಭೆಯನ್ನು ನಡೆಸಿದ್ದು, ಪಕ್ಷದ ಸಂಘಟನೆ ಜವಾಬ್ದಾರಿಯನ್ನು ಯಾವ ರೀತಿ ನಿರ್ವಹಿಸಬೇಕು ಎಂದು ತಿಳಿಸಿದ್ದೇವೆ. ಮುಂದಿನ 10 ತಿಂಗಳು ಪ್ರತಿಯೊಬ್ಬರೂ ತಮಗೆ ವಹಿಸಿರುವ ಜಿಲ್ಲೆ ಹಾಗೂ ಕ್ಷೇತ್ರಗಳಲ್ಲಿ ತಿಂಗಳಿಗೆ ಕನಿಷ್ಠ 20 ದಿನಗಳ ಕಾಲ ಕೆಲಸ ಮಾಡಬೇಕು ಎಂದು ಸೂಚಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
2023ರ ಕುರುಕ್ಷೇತ್ರದಲ್ಲಿ ಸಿದ್ದು ಅಖಾಡ ಯಾವುದು..? ಏನಿದು ಲೆಕ್ಕರಾಮಯ್ಯನ ಅಸಲಿ ಲೆಕ್ಕಾಚಾರ?
ಬೂತ್ ಮಟ್ಟದಿಂದ ಪಂಚಾಯ್ತಿವರೆಗೂ ಎಲ್ಲ ವಿಭಾಗಗಳಲ್ಲೂ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪಕ್ಷದ ಸಂಘಟನೆ ಮಾಡಬೇಕು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು 50 ವರ್ಷದೊಳಗಿನವರೇ ಆಗಿರುವಂತೆ ನೋಡಿಕೊಳ್ಳಬೇಕು. ಐದು ವರ್ಷ ಅಥವಾ ಎರಡು ಮೂರು ಅವಧಿಗೆ ಅಧ್ಯಕ್ಷರಾಗಿದ್ದವರಿಗೆ ಬಡ್ತಿ ನೀಡಿ ಆ ಸ್ಥಾನವನ್ನು ಹೊಸಬರಿಗೆ ನೀಡಬೇಕು. ಪ್ರತಿ ಪಂಚಾಯ್ತಿಗೂ ಪ್ರಧಾನ ಕಾರ್ಯದರ್ಶಿಗಳು ಪ್ರವಾಸ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆ.15ರ ಬಳಿಕ ರಾಜ್ಯ ಪ್ರವಾಸ?
ಆ.15ರ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಬಳಿಕ ಕಾಂಗ್ರೆಸ್ ನಾಯಕರಿಂದ ರಾಜ್ಯ ಪ್ರವಾಸ ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ. ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಪ್ರವಾಸ ನಡೆಸಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನರ ಗಮನ ಸೆಳೆಯುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
