ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುವಾಗ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹೆಬ್ಬಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಮಾ.6) : ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುವಾಗ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹೆಬ್ಬಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆಬ್ಬಾಳ(Hebbal)ದ ಗುಡ್ಡದಹಳ್ಳಿ(Guddadahalli) ನಿವಾಸಿ ಮಲ್ಲಪ್ಪ ಮತ್ತು ಸರಸ್ವತಿ ದಂಪತಿ ಪುತ್ರ ಮಹೇಶ್‌(11) ಮೃತ ದುರ್ದೈವಿ. ದೇವರಾಜ್‌ ಎಂಬುವವರಿಗೆ ಸೇರಿದ ಮಳಿಗೆಯಲ್ಲಿ ಲಿಯಾಖತ್‌ ಎಂಬಾತ ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌(illegal gas refilling) ಮಾಡುತ್ತಿದ್ದ. ಭಾನುವಾರ ಬೆಳಗ್ಗೆ 11ರ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಚೂರಿನಲ್ಲಿ ಅಕ್ರಮ ಗ್ಯಾಸ್‌ ಅಂಗಡಿ ಮೇಲೆ ಪೊಲೀಸ್‌ ದಾಳಿ..!

ಯಾದಗಿರಿ(yadgiri) ಮೂಲದ ರಾಮಸಮುದ್ರ(Ramasamudra) ಮೂಲದ ಮಲ್ಲಪ್ಪ ದಂಪತಿ ಕೂಲಿ ಕಾರ್ಮಿಕರಾಗಿದ್ದು, ಕಳೆದ ಎಂಟು ವರ್ಷಗಳಿಂದ ಗುಡ್ಡದಹಳ್ಳಿಯಲ್ಲಿ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಎರಡನೇ ಪುತ್ರ ಮಹೇಶ್‌ ಚೋಳನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಹೇಶ್‌ನ ಮನೆಯ ಪಕ್ಕದ ಮಳಿಗೆಯಲ್ಲೇ ಲಿಯಾಖತ್‌ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುತ್ತಾನೆ.

ಭಾನುವಾರ ಬೆಳಗ್ಗೆ ಲಿಯಾಖತ್‌ ದೊಡ್ಡ ಸಿಲಿಂಡರ್‌ನಿಂದ ಎರಡು ಕೆ.ಜಿ. ಸಾಮರ್ಥ್ಯದ ಸಿಲಿಂಡರ್‌ಗೆ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುವಾಗ ಏಕಾಏಕಿ ಸಿಲಿಂಡರ್‌ ಸ್ಫೋಟಗೊಂಡಿದೆ. ಈ ವೇಳೆ ಮನೆ ಎದುರು ಆಟವಾಡುತ್ತಿದ್ದ ಮಹೇಶ್‌ ಗಂಭೀರವಾಗಿ ಗಾಯಗೊಂಡಿದ್ದ. ತಲೆಗೆ ತೀವ್ರ ಪೆಟ್ಟುಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಹೇಶ್‌ನನ್ನು ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾಸ್ ಫಿಲ್ಲಿಂಗ್ ಅಕ್ರಮ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ!

ಸ್ಫೋಟದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಳಿಗೆಯಲ್ಲಿ ಆರು ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಹಾಗೂ ಗ್ಯಾಸ್‌ ರೀಫಿಲ್ಲಿಂಗ್‌ ಯಂತ್ರ ಪತ್ತೆಯಾಗಿದೆ. ಘಟನೆಯಲ್ಲಿ ಎರಡು ಕೆ.ಜಿ. ಸಾಮರ್ಥ್ಯದ ಸಣ್ಣ ಸಿಲಿಂಡರ್‌ ಸ್ಫೋಟಗೊಂಡಿದೆ. ದೊಡ್ಡ ಸಿಲಿಂಡರ್‌ ಸ್ಫೋಟಗೊಂಡಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಅವಘಡದ ಬಳಿಕ ಲಿಯಾಖತ್‌ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಹೆಬ್ಬಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.