ಬೆಂಗಳೂರು(ಜ.20): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ 74.81 ಲಕ್ಷ ಸಾಗಿಸುತ್ತಿದ್ದ ಕಸ್ಟಮ್ಸ್‌ ಅಧಿಕಾರಿ ದಂಪತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ತಮಿಳುನಾಡು ಚೆನ್ನೈ ವಿಭಾಗದ ಕಸ್ಟಮ್ಸ್‌ ಅಧಿಕಾರಿ ಮೊಹಮ್ಮದ್‌ ಇರ್ಫಾನ್‌ ಅಹ್ಮದ್‌ ಅವರು, ಉತ್ತರಪ್ರದೇಶದ ಲಖೌನ್‌ಗೆ ತಮ್ಮ ಪತ್ನಿ ಜತೆ ಮಂಗಳವಾರ ವಿಮಾನ ನಿಲ್ದಾಣದಲ್ಲಿ ತೆರಳಲು ಹೊರಟ್ಟಿದ್ದಾಗ ಸಿಐಎಸ್‌ಎಫ್‌ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಬಳಿಕ ಈ ಅಕ್ರಮ ಹಣ ಪತ್ತೆ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಗೆ ಸಿಐಎಸ್‌ಎಫ್‌ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

ಸ್ಟೀಲ್‌ ಗ್ಯಾಸ್‌ ಸ್ಟೌನಲ್ಲಿತ್ತು 79 ಲಕ್ಷ ಮೌಲ್ಯದ ಡ್ರಗ್ಸ್‌..!

ಚೆನ್ನೈನಲ್ಲಿ ಕಾರ್ಯನಿರ್ವಹಿಸುವ ಅಹ್ಮದ್‌ ಅವರು, ಲಖೌನ್‌ಗೆ ಬೆಳಗ್ಗೆ 9.30ರ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಇದಕ್ಕೂ ಮುನ್ನ ದಂಪತಿಯನ್ನು ಸಿಐಎಸ್‌ಎಫ್‌ ಸಿಬ್ಬಂದಿ ಪರಿಶೀಲಿಸಿದ್ದಾರೆ. ಆಗ ಅಧಿಕಾರಿ ಬ್ಯಾಗ್‌ನಲ್ಲಿ .2 ಸಾವಿರ ಮತ್ತು 500 ಮುಖಬೆಲೆಯ ಬಂಡಲ್‌ಗಳು ಪತ್ತೆಯಾಗಿದೆ. ಇದರೊಂದಿಗೆ 2 ಚಿನ್ನದ ಸರ, 2 ಚಿನ್ನದ ಓಲೆ, 1 ಜೊತೆ ಬಳೆ, 1 ನೆಕ್ಲೇಸ್‌ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಈ ಬೃಹತ್‌ ಪ್ರಮಾಣ ಹಣ ಕಂಡು ದಂಗಾದ ಭದ್ರತಾ ಸಿಬ್ಬಂದಿ, ಕೂಡಲೇ ಕಸ್ಟಮ್ಸ್‌ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಈ ಹಣಕ್ಕೆ ಸೂಕ್ತವಾದ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ಅಧಿಕಾರಿಯನ್ನು ಸಿಐಎಸ್‌ಎಫ್‌ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಇಡಿಗೆ ಮಾಹಿತಿ ನೀಡಲಾಗಿದೆ. ಅಕ್ರಮ ಹಣವೇ ಅಥವಾ ಅಧಿಕೃತ ಹಣವೇ ಎಂಬುದು ಇಡಿ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.