*  ಅಧಿಕ ಲಾಭ ಗಳಿಸಬಹುದೆಂದು ಆಸೆ ತೋರಿಸಿ ಸಾರ್ವಜನಿಕರಿಗೆ ಮೋಸ*  ನಾಲ್ವರು ವಂಚಕರ ಸೆರೆ*  ಆರೋಪಿಗಳಿಂದ 1 ಕೇಜಿ ಚಿನ್ನ, 78 ಲಕ್ಷ ನಗದು, 44 ಬ್ಯಾಂಕ್‌ ಖಾತೆಗಳಲ್ಲಿದ್ದ 15 ಕೋಟಿ ವಶ 

ಬೆಂಗಳೂರು(ಏ.19):  ಕ್ರಿಪ್ಟೋ ಕರೆನ್ಸಿ ಮೈನಿಂಗ್‌(ಹೂಡಿಕೆ ನಿರ್ವಹಣೆಯ ಸಾಧನ(ಡಿವೈಸ್‌) ಕೊಡುವುದಾಗಿ ಹಾಗೂ ಅಧಿಕ ಆದಾಯದ ಆಸೆ ತೋರಿಸಿ ಸಾರ್ವಜನಿಕರಿಗೆ ಕೋಟ್ಯಂತರ ರು. ಸಂಗ್ರಹಿಸಿ ಟೋಪಿ ಹಾಕಿದ್ದ ನಾಲ್ವರು ಸೈಬರ್‌ ವಂಚಕರನ್ನು ಸೆರೆ ಹಿಡಿದ ಸಿಸಿಬಿ(CCB), ಬಂಧಿತರಿಂದ ಒಂದು ಕೆ.ಜಿ. ಚಿನ್ನ ಮತ್ತು 15 ಕೋಟಿ ರು. ಜಪ್ತಿ ಮಾಡಿದೆ.

ಆಸ್ಟಿನ್‌ ಟೌನ್‌ನ ಜಬ್ಬೀವುಲ್ಲಾ ಖಾನ್‌, ರೆಹಮಾತ್‌ವುಲ್ಲಾ ಖಾನ್‌, ಇಮ್ರಾನ್‌ ರಿಯಾಜ್‌ ಹಾಗೂ ಶೀತಲ್‌ ಬಸ್ತವಾಡ್‌ ಬಂಧಿತರು. ಈ ಜಾಲದ ಕಿಂಗ್‌ಪಿನ್‌ಗಳಾದ ಬ್ರಿಟನ್‌ ಮೂಲದ ಜಿಮ್ಮಿ ಹಾಗೂ ಸ್ಟೇಸಿ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ 1.6 ಕೆ.ಜಿ. ಚಿನ್ನ, .78 ಲಕ್ಷ ನಗದು, 44 ಡಿಎಸ್‌ಸಿ(ಡಿಜಿಟಲ್‌ ಸಿಗ್ನೆಚರ್‌ ಸರ್ಟಿಫಿಕೇಟ್‌) ಗಳಿರುವ ಟೋಕನ್‌ಗಳು ಹಾಗೂ 44 ಬ್ಯಾಂಕ್‌ ಖಾತೆಗಳಲ್ಲಿದ್ದ 15 ಕೋಟಿ ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ತಿಳಿಸಿದ್ದಾರೆ.

Cryptocurrency Disclaimers: ಇದು ಅಪಾಯಕಾರಿ: ಕ್ರಿಪ್ಟೋ ಜಾಹೀರಾತರಲ್ಲಿ ಎಚ್ಚರಿಕೆ ಸಂದೇಶ ಮುದ್ರಣ ಕಡ್ಡಾಯ!

ಕೆಲ ದಿನಗಳ ಹಿಂದೆ ಸೈಬರ್‌ ಕ್ರೈಂ ಪೊಲೀಸ್‌(Cyber Crime Police) ಠಾಣೆಗೆ ಈ ಬ್ಲೇಡ್‌ ಕಂಪನಿಗಳಿಗೆ ಹಣ ಹೂಡಿಕೆ ಮಾಡಿ .78 ಲಕ್ಷ ಹಣ ಕಳೆದುಕೊಂಡಿದ್ದ ಸಂತ್ರಸ್ತರು ನೀಡಿದ ದೂರು ಬಗ್ಗೆ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ ಬಿ.ಎಸ್‌.ಅಶೋಕ್‌ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಆಯುಕ್ತರು ಹೇಳಿದ್ದಾರೆ.

ಶೇರ್‌ ಹ್ಯಾಶ್‌ ಆ್ಯಪ್‌ ರೂಪಿಸಿ ಖೆಡ್ಡಾ:

2021ರ ಲಾಕ್‌ಡೌನ್‌ ಸಮಯದಲ್ಲಿ ಶೇರ್‌ ಹ್ಯಾಶ್‌ ಹೆಸರಿನ ಅಪ್ಲಿಕೇಶನ್‌ ರೂಪಿಸಿದ ಸೈಬರ್‌ ವಂಚಕರು, ಈ ಆ್ಯಪ್‌ ಬಗ್ಗೆ ಸಾರ್ವಜನಿಕರಿಗೆ ಎಸ್‌ಎಂಎಸ್‌ ಹಾಗೂ ವಾಟ್ಸಾಪ್‌ ಮೂಲಕ ಸಂದೇಶ ಕಳುಹಿಸಿದ್ದರು. ಎನ್‌ಎನ್‌ಟಿ(ಹೀಲಿಯಂ ಕ್ರಿಪ್ಟೋ ಟೋಕನ್‌) ಕ್ರಿಪ್ಟೋ ಕರೆನ್ಸಿಗೆ(Cryptocurrency) ಸಂಬಂಧಿಸಿದ ಮೈನಿಂಗ್‌ ನಡೆಸುವ ಶೇರ್‌ ಹ್ಯಾಶ್‌ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಖಾತೆ ತೆರೆಯಬೇಕು. ನಿಮಗೆ .45 ಸಾವಿರ ಮೌಲ್ಯದ ಕ್ರಿಪ್ಟೋ ಕರೆನ್ಸಿಯ ಮೈನಿಂಗ್‌ ಡಿವೈಸ್‌ ಅನ್ನು ಕೊಡುತ್ತೇವೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿದ ಬಳಿಕ ಗ್ರಾಹಕರು, ಆನ್‌ಲೈನ್‌ ಮೂಲಕವೇ ಕೊಟಾಟಾ ಟೆಕ್ನಾಲಜಿ, ಸೈರಲೇನ್‌ ಟೆಕೋ ಸಲ್ಯೂಷನ್ಸ್‌, ನಿಲೀನ್‌ ಇಸ್ಫೋಟೆಕ್‌, ಮೊಲ್ಟಾರೆಸ್‌ ಎಕ್ಸಿಮ್‌ ಹಾಗೂ ಕ್ರಾಂಪಿಗ್ನಟನ್‌ ಟೆಕ್ನಾಲಜಿಸ್‌ ಕಂಪನಿಗಳಿಗೆ ಹಣ ಹೂಡಿದರೆ ಶೇ.30 ರಷ್ಟುಬಡ್ಡಿ ನೀಡುತ್ತೇವೆ ಎಂದು ಪ್ರಚುರಪಡಿಸಿದ್ದರು.

ಬೆಂಗಳೂರು ಹಾಗೂ ಹೊರ ರಾಜ್ಯಗಳಲ್ಲಿ ನಕಲಿ ದಾಖಲೆ ಬಳಸಿಕೊಂಡು ನಕಲಿ ಕಂಪನಿಗಳನ್ನು ಆರೋಪಿಗಳು ಸ್ಥಾಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಪ್‌ಡೇಟೆಡ್‌ ಆ್ಯಪ್‌ ಬರುತ್ತದೆ ಕಾಯಿರಿ ಎಂದು ವಂಚನೆ!

ಆರೋಪಿಗಳ ನಂಬಿದ ಜನರು, ಬ್ಲೇಡ್‌ ಕಂಪನಿಗಳಿಗೆ ಕೋಟಿಗಟ್ಟಲೇ ಹಣ ಹೂಡಿಕೆದ್ದರು. ಇದೇ ವರ್ಷದ ಜ.11ರಂದು ಶೇರ್‌ ಹ್ಯಾಶ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಈ ಸಮಸ್ಯೆ ಸರಿಪಡಿಸಿ ಹೊಸ ವೈಶಿಷ್ಟ್ಯಗಳೊಂದಿಗೆ ಆ್ಯಪ್‌ ಆಪ್‌ಗ್ರೇಡ್‌ ಮಾಡುವುದಾಗಿ ಪ್ರಕಟಿಸಿದ್ದರು. ಅಲ್ಲದೆ ಗ್ರಾಹಕರ ರಿಟನ್ಸ್‌ರ್‍ಗಳನ್ನು ಇನ್‌ ಆಪ್‌ ವ್ಯಾಲೆಟ್‌ಗೆ ಜಮೆ ಮಾಡಲಾಗುತ್ತದೆ. ಈ ಹೊಸ ಆ್ಯಪ್‌ ಶೇರ್‌ ಹ್ಯಾಶ್‌ 2.0 ಅನ್ನು ಜ.18 ಅಥವಾ 19 ರೊಳಗೆ ಬಿಡುಗಡೆಗೊಳಿಸಿದ ಬಳಿಕ ಗ್ರಾಹಕರಿಗೆ ಹಣ ಮರಳಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಜ.19ರ ಬಳಿಕ ಆ್ಯಪ್‌ಗೆ ಲಾಗಿನ್‌ ಆಗಲು ಹೂಡಿಕೆದಾರರಿಗೆ ಸಾಧ್ಯವಾಗಿರುವುದಿಲ್ಲ. ಅಲ್ಲದೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಸಹ ಶೇರ್‌ ಹ್ಯಾಶ್‌ ನಾಪತ್ತೆಯಾಗಿತ್ತು. ಈ ವಂಚನೆ ಬಗ್ಗೆ ಸೈಬರ್‌ ಕ್ರೈಂ ಠಾಣೆಗೆ 76 ಲಕ್ಷ ರು. ಕಳೆದುಕೊಂಡಿದ್ದ ರಾಜೀವ್‌, ಸಂಜೀವ, ಆದರ್ಶ, ಸುಧೀರ್‌, ವೆಂಕಟೇಶ್‌ ದೇವರಾಜ್‌, ಹರ್ಷ, ಬಿ.ಎಂ.ಮನೋಜ್‌ ಹಾಗೂ ಕೆ.ಹರೀಶ್‌ ಕುಮಾರ್‌ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಅಶೋಕ್‌ ತಂಡವು, ಬ್ಯಾಂಕ್‌ ಖಾತೆಗಳ ಮಾಹಿತಿ ಆಧರಿಸಿ ವಂಚನೆ ಜಾಲವನ್ನು ಪತ್ತೆ ಹಚ್ಚಿದೆ.

Digital Currency ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ, CBDT ಸ್ಪಷ್ಟನೆ!

5 ತಿಂಗಳಲ್ಲೇ .50 ಕೋಟಿ ದೋಚಿದ ಸಿಎ ವಿದ್ಯಾರ್ಥಿ, ಗುಜರಿ ವ್ಯಾಪಾರಿಗಳು

ಆರೋಪಿಗಳ ಪೈಕಿ ಶೀತಲ್‌ ಬಸ್ತವಾದ್‌ ಬಿಕಾಂ ಮುಗಿಸಿ ಸಿಎ ಓದುತ್ತಿದ್ದಾನೆ. ಇನ್ನುಳಿದ ಆರೋಪಿಗಳು ಪಿಯುಸಿಗೆ ಓದಿಗೆ ಟಾಟಾ ಹೇಳಿ ಗುಜರಿ ವ್ಯಾಪಾರದಲ್ಲಿ ತೊಡಗಿದ್ದರು. ಆನ್‌ಲೈನ್‌ ಮೂಲಕ ಈ ನಾಲ್ವರಿಗೆ ವಿದೇಶಿ ವಂಚಕರಾದ ಜಿಮ್ಮಿ ಹಾಗೂ ಸ್ಟೇಸಿ ಗಾಳ ಹಾಕಿದ್ದರು. ನಾವು ಹೇಳಿದಂತೆ ಕೇಳಿದರೆ ನಿಮಗೆ 100 ರು.ಗೆ 15 ರು. ಲಾಭವನ್ನು ಪ್ರತಿ ದಿನ ನೀಡುತ್ತೇವೆ ಎಂದು ಹಣದಾಸೆ ತೋರಿಸಿ ತಮ್ಮ ವಂಚನೆ ಜಾಲಕ್ಕೆ ಸೆಳೆದ ವಿದೇಶಿ ಪ್ರಜೆಗಳು, ಬಳಿಕ ಈ ನಾಲ್ವರನ್ನು ಹೆಸರಿನಲ್ಲಿ ಬೋಗಸ್‌ ಕಂಪನಿಗಳನ್ನು ಸ್ಥಾಪಿಸಿ ಜನರಿಗೆ ಮೋಸ ಮಾಡಿದ್ದಾರೆ. ಕೇವಲ ಐದಾರು ತಿಂಗಳಲ್ಲಿ 40-50 ಕೋಟಿ ರು. ವಂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮುನ್ನ ಸಾರ್ವಜನಿಕರು ಜಾಗರೂಕರಾಗಬೇಕು. ಕ್ರಿಪ್ಟೋ ಕರೆನ್ಸಿ ಹೆಸರಿನ ವಂಚನೆ ಜಾಲದಲ್ಲಿ ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಸಿಸಿಬಿ ತನಿಖಾ ತಂಡಕ್ಕೆ .75 ಸಾವಿರ ನಗದು ಬಹುಮಾನ ನೀಡಲಾಗುತ್ತದೆ ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ