ಉದ್ಯಮದ ಆಳಗಲ ಅರಿಯಲಷ್ಟೇ ತೆರಿಗೆ ಹೇರಿಕೆ: ಸಿಬಿಡಿಟಿ ಸ್ಪಷ್ಟನೆ ಆದಾಯವನ್ನು ತೋರಿಸುತ್ತಿದ್ದಾರೆಯೇ? ಪರಿಶೀಲಿಸುವುದಷ್ಟೇ ನಮ್ಮ ಕೆಲಸ ಕ್ರಿಪ್ಟೋಕರೆನ್ಸಿ ಮತ್ತು ಎನ್‌ಎಫ್‌ಟಿ ಆದಾಯದ ಮೇಲೆ ಶೇ.30ರಷ್ಟುತೆರಿಗೆ

ನವದೆಹಲಿ(ಫೆ.03): ಕಾನೂನು ಮಾನ್ಯತೆ ಹೊಂದಿಲ್ಲದ ಕ್ರಿಪ್ಟೊಕರೆನ್ಸಿ(cryptocurrency) ಆದಾಯದ ಮೇಲೆ ತೆರಿಗೆ(Income Tax) ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವು, ಕ್ರಿಪ್ಟೋಕರೆನ್ಸಿಗೆ ಪರೋಕ್ಷವಾಗಿ ಕಾನೂನಿನ ಮಾನ್ಯತೆ ನೀಡಿದಂತೆ ಅಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸ್ಪಷ್ಟಪಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಬಿಡಿಟಿ ಅಧ್ಯಕ್ಷ ಜೆ.ಪಿ.ಮಹಾಪಾತ್ರ ‘ಕ್ರಿಪ್ಟೋಕರೆನ್ಸಿ ಆದಾಯಕ್ಕೆ ತೆರಿಗೆ ಮತ್ತು ವಹಿವಾಟಿಗೆ ಟಿಡಿಎಸ್‌(TDS) ವಿಧಿಸುವ ನಿರ್ಧಾರವು, ದೇಶದಲ್ಲಿನ ಕ್ರಿಪ್ಟೋ ಉದ್ಯಮದ ಆಳಗಲವನ್ನು ಪರಿಶೀಲಿಸುವ ಉದ್ದೇಶ ಹೊಂದಿದೆಯೇ ಹೊರತೂ ಅವುಗಳಿಗೆ ಕಾನೂನು(legalise) ಮಾನ್ಯತೆ ನೀಡುವ ಉದ್ದೇಶದ್ದಲ್ಲ. ಯಾರು ಹೂಡಿಕೆ(Invest) ಮಾಡುತ್ತಿದ್ದಾರೆ? ಅವರ ಹೂಡಿಕೆಯ ಮೊತ್ತ ಎಷ್ಟು? ಅದರ ಮೂಲ ಏನು? ಹೂಡಿಕೆಯಿಂದ ಬಂದ ಆದಾಯವನ್ನು ಅವರು ತೋರಿಸುತ್ತಿದ್ದಾರೆಯೇ? ಎಂಬುದನ್ನು ಪರಿಶೀಲಿಸುವುದಷ್ಟೇ ನಮ್ಮ ಕೆಲಸ’ ಎಂದು ಸ್ಪಷ್ಟಪಡಿಸಿದ್ದಾರೆ.

Cryptocurrency Tax ಘೋಷಣೆ ಬಳಿಕ ಎಷ್ಟಾಗಿದೆ ಬಿಟ್‌ಕಾಯಿನ್ ಮೌಲ್ಯ?

ನಾವು ಯಾವುದೇ ವಹಿವಾಟಿನ ಕಾನೂನಿನ ಮಾನ್ಯತೆಯ ಗೋಜಿಗೆ ಹೋಗುವುದಿಲ್ಲ. ನಮ್ಮ ಇಲಾಖೆ ಮತ್ತು ನಮ್ಮ ತೆರಿಗೆ ಕಾಯ್ದೆಗಳು, ಯಾವುದೇ ವ್ಯಕ್ತಿ ನಡೆಸಿದ ವ್ಯವಹಾರದಿಂದ ಆತನಿಗೆ ಆದಾಯ ಬಂದಿದೆಯೇ ಎಂಬುದನ್ನಷ್ಟೇ ಪರಿಶೀಲಿಸುತ್ತದೆ. ನಾವು ಆದಾಯದ ಕಾನೂನಿನ ಮಾನ್ಯತೆ ಪರಿಶೀಲಿಸುವುದಿಲ್ಲ, ಬದಲಾಗಿ ಅದರ ಮೇಲೆ ತೆರಿಗೆ ವಿಧಿಸುವುದನ್ನು ಪರಿಶೀಲಿಸುತ್ತೇವೆ. ಈ ಕಾರಣಕ್ಕಾಗಿಯೇ ಈಗಲೂ ನಾವು ಕ್ರಿಪ್ಟೋ ಕರೆನ್ಸಿಗೆ ತೆರಿಗೆ ವಿಧಿಸುವುದು ಅದಕ್ಕೆ ಕಾನೂನಿನ ಮಾನ್ಯತೆ ನೀಡಿದಂತೆ ಆಗುವುದಿಲ್ಲ ಎಂದು ಹೇಳುತ್ತಿರುವುದು ಎಂದು ಮಹಾಪಾತ್ರ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌(Nirmala Sitharaman) ಅವರು ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ(Union Budget 2022) ಕ್ರಿಪ್ಟೋಕರೆನ್ಸಿ ಮತ್ತು ಎನ್‌ಎಫ್‌ಟಿ ಆದಾಯದ ಮೇಲೆ ಶೇ.30ರಷ್ಟುತೆರಿಗೆ ಮತ್ತು ವಾರ್ಷಿಕ 10000 ರು.ಗಿಂತ ಹೆಚ್ಚಿನ ವಹಿವಾಟಿಗೆ ಶೇ.1ರಷ್ಟುಟಿಡಿಎಸ್‌ ವಿಧಿಸುವ ನಿರ್ಧಾರ ಪ್ರಕಟಿಸಿದ್ದರು. ಇದು ಕೇಂದ್ರ ಸರ್ಕಾರ ಪರೋಕ್ಷವಾಗಿ ಕ್ರಿಪ್ಟೋಗೆ ಕಾನೂನು ಮಾನ್ಯತೆ ನೀಡಿದಂತೆ ಎಂದು ವಿಶ್ಲೇಷಣೆ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮಹಾಪಾತ್ರ ಈ ಸ್ಪಷ್ಟನೆ ನೀಡಿದ್ದಾರೆ.

Digital Assets Tax: ದೇಶಕ್ಕೆ ಕ್ರಿಪ್ಟೋಕರೆನ್ಸಿ ‘ಹಿಂಬಾಗಿಲ ಪ್ರವೇಶ’: ಕೇಂದ್ರದ ಮಹತ್ವದ ಘೋಷಣೆ

ಭಾರತದಲ್ಲಿ ಹಾಲಿ ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ ಹಾಲಿ ಮಾನ್ಯತೆಯೂ ಇಲ್ಲ, ನಿಷೇಧವೂ ಇಲ್ಲ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ 10 ಕೋಟಿ ಜನರು ಅಂದಾಜು 1 ಲಕ್ಷ ಕೋಟಿ ರು.ಗಳನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಲೆಕ್ಕಾಚಾರವಿದೆ.

 ಹೊಸ ಐಟಿಆರ್‌ ಫಾಮ್‌ರ್‍ನಲ್ಲಿ ಕ್ರಿಪ್ಟೋ ಮಾಹಿತಿ ಭರ್ತಿಗೆ ವಿಭಾಗ
ಮುಂದಿನ ವರ್ಷ ಬಿಡುಗಡೆಯಾಗಲಿರುವ ಹೊಸ ಆದಾಯ ತೆರಿಗೆ ರಿಟನ್ಸ್‌ರ್‍ (ಐಟಿಆರ್‌) ಫಾಮ್‌ರ್‍, ಕ್ರಿಪ್ಟೋ ಕರೆನ್ಸಿ ಆದಾಯ ಮತ್ತು ಅದಕ್ಕೆ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸುವ ಹೊಸ ಕಾಲಂ ಒಳಗೊಂಡಿರಲಿದೆ ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್‌ ಬಜಾಜ್‌ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ, ಎಲ್ಲಾ ಕ್ರಿಪ್ಟೋ ಆದಾಯಕ್ಕೆ ಶೇ.30ರಷ್ಟುತೆರಿಗೆ ಮತ್ತು ವಹಿವಾಟಿನ ಮೇಲೆ ಶೇ.1ರಷ್ಟುಟಿಡಿಎಸ್‌ ವಿಧಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅವರು ಈ ಮಾಹಿತಿ ನೀಡಿದ್ದಾರೆ. ಜೊತೆಗೆ, ಕ್ರಿಪ್ಟೋಕರೆನ್ಸಿಯಿಂದ ಪಡೆದ ಆದಾಯಕ್ಕೆ ಹಿಂದೆಯೂ ತೆರಿಗೆ ಇತ್ತು. ಈ ಕುರಿತು ಬಜೆಟ್‌ನಲ್ಲಿ ಸ್ಪಷ್ಟನೆ ನೀಡಲಾಗಿದೆ ಅಷ್ಟೆ. ಇದೇನು ಹೊಸ ತೆರಿಗೆಯಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದ ನಿರ್ಧಾರದ ಅನ್ವಯ ಕ್ರಿಪ್ಟೋಕರೆನ್ಸಿಯಿಂದ ಬಂದ ಆದಾಯಕ್ಕೆ ಶೇ.30ರಷ್ಟುತೆರಿಗೆ ಮತ್ತು ಮೇಲ್ತೆರಿಗೆ ಪಾವತಿಸಬೇಕು, 50 ಲಕ್ಷ ರು.ಗಿಂತ ಹೆಚ್ಚಿನ ಆದಾಯಕ್ಕೆ ಶೇ.15ರಷ್ಟುಮೇಲ್ತೆರಿಗೆ ಪಾವತಿಸಬೇಕು ಎಂದು ತರುಣ್‌ ಬಜಾಜ್‌ ಮಾಹಿತಿ ನೀಡಿದ್ದಾರೆ.