* ಅಮೆರಿಕದಲ್ಲಿದ್ದೇನೆ, ಮದುವೆ  ಆಗುತ್ತೇನೆಂದು ನಂಬಿಸಿ ಹಣ  ಪಡೆದು ಮಹಿಳೆಗೆ ವಂಚನೆ* ಹೆಂಡತಿ, ಮಗಳ ಮೇಲೆ ಬಿಸಿ  ಅಡುಗೆ ಎಣ್ಣೆ ಎರಚಿದ ಭೂಪ* ಸಂಪ್‌ ದುರಸ್ತಿ ವೇಳೆ ವಿದ್ಯುತ್‌  ಹರಿದು ಎಲೆಕ್ಟ್ರಿಶಿಯನ್‌ ಸಾವು

ಬೆಂಗಳೂರು(ಫೆ. 02) ಬ್ಯಾಂಕ್‌ (Bank) ಮಹಿಳಾ ಉದ್ಯೋಗಿಯೊಬ್ಬರಿಗೆ ವೈವಾಹಿಕ ಜಾಲತಾಣದಲ್ಲಿ(matrimonial site) ಪರಿಚಯವಾದ ವ್ಯಕ್ತಿಯೊಬ್ಬ ಮದುವೆ (Marriage)ಆಗುವುದಾಗಿ ನಂಬಿಸಿ .7.55 ಲಕ್ಷ ಪಡೆದು ಕಿಡಿಗೇಡಿಯೊಬ್ಬ ವಂಚಿಸಿದ್ದಾನೆ.

ಸುಧಾಮನಗರದ 29 ವರ್ಷದ ಯುವತಿ ಮೋಸ ಹೋಗಿದ್ದು, ಈ ಕೃತ್ಯ ಎಸಗಿದ ರಾಜೇಶ್‌ ಕುಮಾರ್‌ ಎಂಬಾತನ ಪತ್ತೆಗೆ ಕೇಂದ್ರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

ಯುವತಿ ಕೆಲ ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್‌ನಲ್ಲಿ ಸ್ವ-ವಿವರ ಅಪ್‌ಲೋಡ್‌ ಮಾಡಿದ್ದರು. 2021ರ ಡಿಸೆಂಬರ್‌ 30ರಂದು ಯುವತಿಗೆ ಕರೆ ಮಾಡಿದ ರಾಜೇಶ್‌, ತಾನು ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಯುವಕ ಎಂದು ಪರಿಚಯಿಸಿಕೊಂಡಿದ್ದಾನೆ. ನೀವು ಒಪ್ಪಿದರೆ ಮದುವೆ ಆಗುವುದಾಗಿ ಸಹ ಹೇಳಿದ್ದಾನೆ. ತಾನು ಅಮೆರಿಕದಿಂದ ಮರಳಬೇಕಾದರೆ ಮದುವೆ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಇದಕ್ಕಾಗಿ ಬ್ಯಾಂಕ್‌ ಸಿಬಿಲ್‌ ಸ್ಕೋರ್‌ ಹೆಚ್ಚಿಸಿಕೊಳ್ಳಬೇಕಿದ್ದು, ತುರ್ತು ಹಣದ ಅವಶ್ಯಕತೆ ಇದೆ ಎಂದಿದ್ದಾನೆ. ಆರೋಪಿ ನೀಡಿದ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ .7.55 ಲಕ್ಷ ವರ್ಗಾವಣೆ ಮಾಡಿದ್ದಾಳೆ. ಇದಾದ ನಂತರ ಮತ್ತೆ ಆರೋಪಿ ಹಣಕ್ಕೆ ಬೇಡಿಕೆ ಇಟ್ಟಾಗ ಶಂಕೆಗೊಂಡ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

Matrimony Fraud: ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿ ಮಹಿಳೆಗೆ ಬ್ಲ್ಯಾಕ್‌ಮೇಲ್‌: ಆರೋಪಿ ಬಂಧನ

ಸಂಪ್‌ ದುರಸ್ತಿ ವೇಳೆ ವಿದ್ಯುತ್‌ ಹರಿದು ಎಲೆಕ್ಟ್ರಿಶಿಯನ್‌ ಸಾವು: ಅಪಾರ್ಟ್‌ಮೆಂಟ್‌ನಲ್ಲಿ ನೀರಿನ ಸಂಪ್‌ ರಿಪೇರಿ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಎಲೆಕ್ಟ್ರಿಶಿಯನ್‌ ಸಾವನ್ನಪ್ಪಿರುವ ಘಟನೆ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಕೆ.ಪಿ.ಅಗ್ರಹಾರ ನಿವಾಸಿ ಮೋಹನ್‌ ಕುಮಾರ್‌ (30) ಮೃತ ದುರ್ದೈವಿ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಮೋಹನ್‌, ತನ್ನ ತಾಯಿ ಜತೆ ಕೆ.ಪಿ.ಅಗ್ರಹಾರದಲ್ಲಿ ನೆಲೆಸಿದ್ದರು. ಮೂರು ವರ್ಷಗಳಿಂದ ಟಾರ್ಗೆಟ್‌ ಮ್ಯಾನ್‌ ಪವರ್‌ ಸಲ್ಯೂಷನ್ಸ್‌ ಏಜೆನ್ಸಿಯಲ್ಲಿ ಮೋಹನ್‌ ಕೆಲಸ ಮಾಡುತ್ತಿದ್ದರು. ಇದೇ ಏಜೆನ್ಸಿ, ಮಾಗಡಿ ರಸ್ತೆಯ ಇಟಾ ಅಪಾರ್ಟ್‌ಮೆಂಟ್‌ಗೆ ಕೆಲಸಗಾರರ ಹೊರ ಗುತ್ತಿಗೆ ಪಡೆದಿತ್ತು. ಅಪಾರ್ಟ್‌ಮೆಂಟ್‌ನ ನೀರಿನ ಸಂಪ್‌ನಲ್ಲಿ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ರಿಪೇರಿಗೆ ಮೋಹನ್‌ರನ್ನು ಏಜೆನ್ಸಿ ನಿಯೋಜಿಸಿತ್ತು. ಮೇಲ್ವಿಚಾರಕ ನಜೀಬ್‌ ಜತೆ ಮೋಹನ್‌, ನೀರಿನ ಸಂಪ್‌ನಲ್ಲಿ ರಿಪೇರಿಯಲ್ಲಿ ತೊಡಗಿದ್ದರು. ಆಗ ವಿದ್ಯುತ್‌ ಪ್ರವಹಿಸಿ ಮೋಹನ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಂಡತಿ, ಮಗಳ ಮೇಲೆ ಬಿಸಿ ಅಡುಗೆ ಎಣ್ಣೆ ಎರಚಿದ ಭೂಪ:  ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದು ತನ್ನ ಪತ್ನಿ ಮತ್ತು 13 ವರ್ಷದ ಮಗಳ ಮೇಲೆ ಬಿಸಿ ಅಡುಗೆ ಎಣ್ಣೆ ಎರಚಿ ಪತಿ ಪರಾರಿಯಾಗಿರುವ ಘಟನೆ ಕೋರಮಂಗಲ ಸಮೀಪ ನಡೆದಿದೆ.

ಕೋರಮಂಗಲ ಹತ್ತಿರದ ಎಲ್‌.ಆರ್‌.ನಗರದ ನಿವಾಸಿ ಆಂತೋನಿಯಮ್ಮ ಹಾಗೂ ಪುತ್ರಿ ನ್ಯಾನ್ಸಿ ಜೆನ್ನಿಫರ್‌ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಟೋ ಚಾಲಕ ಥಾಮಸ್‌, ತನ್ನ ಕುಟುಂಬದ ಜತೆ ಎಲ್‌.ಆರ್‌.ನಗರದಲ್ಲಿ ನೆಲೆಸಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ಮನೆಯಲ್ಲೇ ಇರುತ್ತಿದ್ದ. ಇತ್ತೀಚೆಗೆ ಪತ್ನಿ ನಡವಳಿಕೆ ಮೇಲೆ ಶಂಕೆಗೊಂಡಿದ್ದ. ಅಂತೆಯೇ ಭಾನುವಾರ ಬೆಳಗ್ಗೆ 9 ಗಂಟೆಯಲ್ಲಿ ದಂಪತಿ ಮಧ್ಯೆ ಜಗಳ ಶುರುವಾಗಿದೆ. ಆಗ ಸಿಟ್ಟುಗೊಂಡ ಆರೋಪಿ ಅಡುಗೆ ಎಣ್ಣೆ ಕಾಯಿಸಿ ಪತ್ನಿ ಮತ್ತು ಮಲಗಿದ್ದ ಮಗಳ ಮೇಲೆ ಎರಚಿ ಪರಾರಿಯಾಗಿದ್ದಾನೆ. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.