ಕಂಟ್ರಾಕ್ಟರ್ಗೆ ಹಣ ನೀಡದ ಕಾಂಗ್ರೆಸ್ ಮುಖಂಡನ ಬಂಧನ
ಐಶ್ವರ್ಯಗಿರಿ ಕನ್‌ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಮುಖಂಡ ಜಯರಾಮಯ್ಯ ಬಂಧಿತರಾಗಿದ್ದು, ಕೃತ್ಯದಲ್ಲಿ ಮತ್ತೊಬ್ಬ ಆರೋಪಿ ಆ ಕಂಪನಿಯ ನಿರ್ದೇಶಕ ಜಿ.ಶಿವಕುಮಾರ್ ಪತ್ತೆಗೆ ನಡೆದ ತನಿಖೆ.

ಬೆಂಗಳೂರು(ಜ.18): ತಾನು ಪಡೆದಿದ್ದ ಸರ್ಕಾರದ ಕಾಮಗಾರಿಯನ್ನು ಉಪಗುತ್ತಿಗೆ ನೀಡಿ ಕೆಲಸ ಮುಗಿದ ನಂತರ ಹಣ ಕೊಡದೆ ಗುತ್ತಿಗೆದಾರರೊಬ್ಬರಿಗೆ ಎರಡೂವರೆ ಕೋಟಿ ರು. ವಂಚಿಸಿದ ಆರೋಪದ ಮೇರೆಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡನೊಬ್ಬನನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಐಶ್ವರ್ಯಗಿರಿ ಕನ್‌ಸ್ಟ್ರಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಮುಖಂಡ ಜಯರಾಮಯ್ಯ ಬಂಧಿತರಾಗಿದ್ದು, ಕೃತ್ಯದಲ್ಲಿ ಮತ್ತೊಬ್ಬ ಆರೋಪಿ ಆ ಕಂಪನಿಯ ನಿರ್ದೇಶಕ ಜಿ.ಶಿವಕುಮಾರ್ ಪತ್ತೆಗೆ ತನಿಖೆ ನಡೆದಿದೆ. ಕೆಲ ವರ್ಷಗಳ ಹಿಂದೆ ಕೊಳಚೆ ನಿರ್ಮೂಲನ ಮಂಡಳಿಯ ಕಾಮಗಾರಿಗೆ ಸಂಬಂಧಿಸಿದ ಉಪ ಗುತ್ತಿಗೆ ಪಡೆದಿದ್ದ ಪೀಣ್ಯ ಎರಡನೇ ಹಂತದ ನಿವಾಸಿ ವಿ.ಎಂ.ಮಲ್ಲಿಕಾರ್ಜುನ್ ಅವರಿಗೆ ಆರೋಪಿಗಳು ವಂಚಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಜೀವನದಲ್ಲಿ ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ: ಸಚಿವ ಆರಗ ಜ್ಞಾನೇಂದ್ರ
ಹೇಗೆ ವಂಚನೆ:
ಗುತ್ತಿಗೆದಾರನಾದ ಜಯರಾಮಯ್ಯ, ಐಶ್ವರ್ಯ ಕನ್‌ಸ್ಟ್ರಕ್ಷನ್ ಹೆಸರಿನ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿದ್ದ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನಾದ ಜಯರಾಮಯ್ಯ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೋಟ್ಯಂತರ ಮೊತ್ತದ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಅದನ್ನು ಉಪಗುತ್ತಿಗೆ ಆಧಾರಡಿ ಸಣ್ಣ ಮಟ್ಟದ ಗುತ್ತಿಗೆದಾರರಿಗೆ ಹಂಚಿಕೆ ಮಾಡಿ ಕಾಮಗಾರಿ ಪೂರೈಸುತ್ತಿದ್ದ. ಅದೇ ರೀತಿ ಮಲ್ಲಿಕಾರ್ಜುನ್ ಅವರಿಗೆ ಕೂಡಾ ಕೊಳಚೆ ನಿರ್ಮೂಲನ ಮಂಡಳಿಯ ಕಾಮಗಾರಿ ಉಪಗುತ್ತಿಗೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
2015ರಲ್ಲಿ ತಮ್ಮ ಸ್ನೇಹಿತರ ಮೂಲಕ ಮಲ್ಲಿಕಾರ್ಜುನ್‌ಗೆ ಜಯರಾಮಯ್ಯ ಪರಿಚಯವಾಗಿದ್ದಾನೆ. ಈ ಸ್ನೇಹದಲ್ಲಿ ಕೊಳಚೆ ನಿರ್ಮೂಲ ಮಂಡಳಿಯ ಕಾಮಗಾರಿಯೊಂದನ್ನು ಮಲ್ಲಿಕಾರ್ಜುನ್‌ಗೆ ಆತ ನೀಡಿದ್ದ. ಆದರೆ ಕಾಮಗಾರಿ ಮುಗಿದ ಬಳಿಕ ಸ್ಲಂ ಬೋರ್ಡ್‌ನಿಂದ 2.54 ಕೋಟಿ ರು. ಹಣ ಪಡೆದ ಜಯರಾಮಯ್ಯ, ಈ ಹಣವನ್ನು ಉಪ ಗುತ್ತಿಗೆದಾರನಿಗೆ ಸಂದಾಯ ಮಾಡಲಿಲ್ಲ. ಹಣ ಕೇಳಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗುತ್ತಿಗೆದಾರನಿಗೆ ಆರೋಪಿ ಬೆದರಿಕೆ ಹಾಕುತ್ತಿದ್ದ. ಹೀಗಿರುವಾಗ ಮಲ್ಲಿಕಾರ್ಜುನ್ ಅಣ್ಣ ಬಸವರಾಜು ಅವರಿಗೆ ಸಹ ಇದೇ ರೀತಿ 1.20 ಕೋಟಿ ರು. ಮೌಲ್ಯದ ಉಪ ಗುತ್ತಿಗೆ ಹಣ ನೀಡದೆ ಜಯರಾಮಯ್ಯ ವಂಚಿಸಿದ್ದ. ಇದರಿಂದ ಮನನೊಂದು ಜಯರಾಮಯ್ಯನ ಹೆಸರನ್ನು ಡೆತ್ ನೋಟ್ ಬರೆದಿಟ್ಟು ಎರಡು ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಬಸವರಾಜು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಬಾಳೇಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ ಗುತ್ತಿಗೆ ನೆಪದಲ್ಲಿ ನಂಬಿಸಿ ಜನರಿಗೆ ವಂಚಿಸುತ್ತಿರುವ ಐಶ್ವರ್ಯಗಿರಿ ಕನ್‌ಸ್ಟ್ರಕ್ಷನ್ ಕಂಪನಿಯ ಎಂಡಿ ಜಯರಾಮಯ್ಯ ಹಾಗೂ ನಿರ್ದೇಶಕ ಜಿ.ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜಗೋಪಾಲ ನಗರ ಠಾಣೆಗೆ ಮಲ್ಲಿಕಾರ್ಜುನ್ ದೂರು ನೀಡಿದ್ದರು. ಅದರನ್ವಯ ತನಿಖೆ ನಡೆಸಿದ ಜಯರಾಮಯ್ಯನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.