Asianet Suvarna News Asianet Suvarna News

Bengaluru: 1 ವರ್ಷದಿಂದ ಪುಕ್ಕಟೆ ಬಜ್ಜಿ ತಿಂದ ‘ನಕಲಿ ಪೊಲೀಸ್‌ ಲೇಡಿ’ ಬಂಧನ

* ಬಜ್ಜಿ, ಬೇಕರಿ, ಬಿರಿಯಾನಿ ತಿಂದು ತೇಗಿದಳು
* ಹೊಟ್ಟೆ ತುಂಬಾ ತಿಂದು ಮನೆಗೂ ಪಾರ್ಸೆಲ್‌
*ಆದರೂ ಬಿಟ್ಟಿಸೋಕಿ ಮಾಡುತ್ತಿದ್ದ ಮಹಿಳೆ

complaint against woman who cheating road side vendor in bengaluru gvd
Author
First Published Jan 10, 2023, 2:40 AM IST

ಬೆಂಗಳೂರು (ಜ.10): ಪೊಲೀಸ್‌ ಎಂದು ಹೇಳಿಕೊಂಡು ಕಳೆದ ಒಂದು ವರ್ಷದಿಂದ ವ್ಯಾಪಾರಿಗಳನ್ನು ಬೆದರಿಸಿ ಪುಕ್ಕಟೆಯಾಗಿ ಬಜ್ಜಿ-ಬೋಂಡಾ, ತರಕಾರಿ, ಬಿರಿಯಾನಿ ತಿಂದು ತೇಗಿದ್ದ ಖತರ್ನಾಕ್‌ ಮಹಿಳೆಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿ ನಿವಾಸಿ ಲೀಲಾವತಿ (50) ಎಂಬಾಕೆಯನ್ನು ಬಂಧಿಸಲಾಗಿದೆ. 

ಬ್ಯಾಟರಾಯನಪುರ, ಕೊಡಿಗೇಹಳ್ಳಿಯ ಹಲವು ವ್ಯಾಪಾರಿಗಳು ಈಕೆಯ ಕಾಟದಿಂದ ಬೇಸತ್ತಿದ್ದರು. ಕಳೆದ ಶುಕ್ರವಾರ ಬ್ಯಾಟರಾಯನಪುರದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಪುಕ್ಕಟೆಯಾಗಿ ಬಜ್ಜಿ ಪಾರ್ಸೆಲ್‌ ಕಟ್ಟಿಸಿಕೊಳ್ಳಲು ಬಂದಿದ್ದಾಗ ವ್ಯಾಪಾರಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆರೋಪಿ ಲೀಲಾವತಿ ಶುಕ್ರವಾರ ಶೇಕ್‌ ಸಲಾಂ ಅವರ ಬಜ್ಜಿ ಅಂಗಡಿಗೆ ಬಂದಿದ್ದು, ‘ಬಜ್ಜಿ ಪಾರ್ಸೆಲ್‌ ಕಟ್ಟುವಂತೆ’ ಹೇಳಿದ್ದಾಳೆ. ಬಂದಾಗಲೆಲ್ಲಾ ಪುಕ್ಕಟೆಯಾಗಿ ಬಜ್ಜಿ ಕೊಟ್ಟು ರೋಸಿ ಹೋಗಿದ್ದ ಶೇಕ್‌ ಸಲಾಂ, ‘1​​00 ಕೊಟ್ಟರಷ್ಟೇ ಬಜ್ಜಿ ಕೊಡುವುದಾಗಿ’ ಹೇಳಿದ್ದಾರೆ. ಆಗ ಆಕೆ ‘ಪೊಲೀಸ್‌ ಬಳಿಯೇ ಹಣ ಕೇಳುತ್ತೀಯಾ’ ಎಂದು ದಬಾಯಿಸಿದ್ದಾಳೆ. 

ಶಾಲಾ‌ ಮಕ್ಕಳಿದ್ದ‌ ಗೂಡ್ಸ್ ವಾಹನ ಪಲ್ಟಿ: 22 ಮಕ್ಕಳಿಗೆ ಗಾಯ

ಈಕೆಯ ವರ್ತನೆ ಸಹಿಸಲಾಗದೆ ಶೇಕ್‌ ಸಲಾಂ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಈಕೆಯ ವಿಚಾರ ತಿಳಿಸಿದ್ದಾರೆ. ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದ ತಕ್ಷಣ ಲೀಲಾವತಿ ಜಾಗ ಖಾಲಿ ಮಾಡಲು ಮುಂದಾಗಿದ್ದಾಳೆ. ಅಷ್ಟರಲ್ಲಿ 112 ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನಕಲಿ ಪೊಲೀಸ್‌ ಎಂಬುದು ಗೊತ್ತಾಗಿದೆ. ಕೊಡಿಗೇಹಳ್ಳಿ, ಬ್ಯಾಟರಾಯನಪುರದ ಹಲವೆಡೆ ಈಕೆ ನಾನು ಪೊಲೀಸ್‌ ಎಂದು ಹೇಳಿಕೊಂಡು ಕಳೆದ ಒಂದು ವರ್ಷದಿಂದ ಬೇಕರಿ-ತಿನಿಸು ಅಂಗಡಿ-ಮುಂಗಟ್ಟುಗಳ ವ್ಯಾಪಾರಿಗಳ ಬಳಿ ತಿಂದು ತೇಗಿರುವ ವಿಚಾರ ಬಯಲಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಾಯಿತು ಕಳ್ಳರ‌ ಕಾಟ: ಬೀಗ ಹಾಕಿದ ಮನೆಗಳೇ ಟಾರ್ಗೆಟ್

ಗಂಡ ಎಂಜಿನಿಯರ್‌, ಮಗಳು ವೈದ್ಯೆ: ಆರೋಪಿ ಲೀಲಾವತಿ ವಿದ್ಯಾವಂತೆಯಾಗಿದ್ದು, ಕುಟುಂಬದ ಹಿನ್ನೆಲೆ ಉತ್ತಮವಾಗಿದೆ. ಈಕೆಯ ಪತಿ ಎಂಜಿನಿಯರ್‌, ಮಗಳು ವೈದ್ಯೆ, ಮಗ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಆದರೂ ಲೀಲಾವತಿ ಕೋಡಿಗೇಹಳ್ಳಿ, ಬ್ಯಾಟರಾಯನಪುರದ ಬಜ್ಜಿ, ಬೋಂಡಾ, ಗೋಬಿ, ಪಾನಿಪೂರಿ, ಬಿರಿಯಾನಿ, ಬೇಕರಿ ಸೇರಿದಂತೆ ವಿವಿಧ ತಿನಿಸು ಮಾರಾಟ ಮಾಡುವ ವ್ಯಾಪಾರಿಗಳ ಬಳಿ ತೆರಳಿ ಪೊಲೀಸ್‌ ಎಂದು ಪರಿಚಯಿಸಿಕೊಂಡು ಬೆದರಿಸುತ್ತಿದ್ದಳು. ಪುಕ್ಕಟೆಯಾಗಿ ಹೊಟ್ಟೆ ತುಂಬಾ ತಿಂದು, ಮನೆಗೂ ಪಾರ್ಸೆಲ್‌ ಕಟ್ಟಿಸಿಕೊಂಡು ಹೋಗುತ್ತಿದ್ದಳು. ಕಳೆದ ಒಂದು ವರ್ಷದಿಂದ ಇದೇ ರೀತಿ ವ್ಯಾಪಾರಿಗಳ ಬಳಿ ಸುಲಿಗೆ ಮಾಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios