10 ನೇ ಕ್ಲಾಸ್ ಬಾಲಕನ ಬಳಿ 41 ಲಕ್ಷ ಸುಲಿಗೆ ಮಾಡಿದ ಸಹಪಾಠಿಗಳು!
ಬ್ ಜೀ ಹಾಗೂ ಡ್ರೀಮ್-11 ಗೇಮ್ ಆಡುವುದನ್ನು ಪೋಷಕರಿಗೆ ಹೇಳುವುದಾಗಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ₹41 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆತನ ಇಬ್ಬರು ಸಹಪಾಠಿಗಳು ಸೇರಿದಂತೆ ಆರು ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಮೇ.1): ಪಬ್ ಜೀ ಹಾಗೂ ಡ್ರೀಮ್-11 ಗೇಮ್ ಆಡುವುದನ್ನು ಪೋಷಕರಿಗೆ ಹೇಳುವುದಾಗಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ₹41 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆತನ ಇಬ್ಬರು ಸಹಪಾಠಿಗಳು ಸೇರಿದಂತೆ ಆರು ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ಸಮೀಪದ ಕೆಎಚ್‌ಪಿ ಕಾಲೋನಿ ನಿವಾಸಿ ವಿವೇಕ, ಆರ್.ಆರ್.ನಗರದ ವಿಬಿಎಚ್‌ಸಿಎಸ್ ಲೇಔಟ್‌ನ ವೆಮನ್, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸುನೀಲ್, ಕಾರ್ತಿಕ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಬಂಧಿತರಾಗಿದ್ದಾರೆ. ಆರೋಪಿಗಳಿಂದ 302 ಗ್ರಾಂ ತೂಕದ 2 ಚಿನ್ನದ ಗಟ್ಟಿಗಳು ಮತ್ತು ₹23.5 ಲಕ್ಷ ನಗದು ಜಪ್ತಿ ಮಾಡಲಾಗಿದೆ.
ತಮ್ಮ ಪುತ್ರನಿಗೆ ಬ್ಲ್ಯಾಕ್‌ಮೇಲ್ ನಡೆಸಿ ಸುಲಿಗೆ ಮಾಡಿರುವ ಬಗ್ಗೆ ಸಂತ್ರಸ್ತ ವಿದ್ಯಾರ್ಥಿ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಪಾನಿಪೂರಿ ಕೊಡಿಸ್ತೇನೆಂದು 7 ವರ್ಷದ ಮಗು ಕರೆದೊಯ್ದು ಅತ್ಯಾಚಾರ
ಆರ್.ಆರ್.ನಗರದ ಐಡಿಯಲ್ ಹೋಂನಲ್ಲಿ ದೂರುದಾರ ರಿಯಲ್ ಎಸ್ಟೇಟ್ ಉದ್ಯಮಿ ನೆಲೆಸಿದ್ದು, ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಅವರ ಪುತ್ರ ಓದುತ್ತಿದ್ದ. ವಿಪರೀತ ಆನ್‌ಲೈನ್ ಗೇಮ್ ವ್ಯಸನಿಯಾಗಿದ್ದ ಆತ, ಶಾಲಾವಧಿಯಲ್ಲಿ ಕೂಡಾ ಪಬ್‌ಜೀ, ಡ್ರೀಮ್-೧೧ ಮತ್ತು ಬಿಜಿಎಂಐ ಗೇಮ್‌ನಲ್ಲಿ ನಿರತನಾಗಿದ್ದ.
ಈ ಬಗ್ಗೆ ವಿಡಿಯೋ ಮಾಡಿಕೊಂಡಿದ್ದ ಆತನ ಸಹಪಾಠಿಗಳು, ನೀನು ಹಣ ಕೊಡದೆ ಹೋದರೆ ನಿನ್ನ ತಂದೆ-ತಾಯಿಗೆ ಹೇಳುವುದಾಗಿ ಬೆದರಿಸಿದ್ದರು. ಈ ಬ್ಲ್ಯಾಕ್‌ಮೇಲ್ ಹೆದರಿದ ಆತ, ಹೆತ್ತವರಿಗೆ ತಿಳಿಯದಂತೆ ಮನೆಯಲ್ಲಿದ್ದ ಚಿನ್ನವನ್ನು ಒಂದೊಂದಾಗಿ ಕದ್ದು ತನ್ನ ಸಹಪಾಠಿಗಳಿಗೆ ಕೊಟ್ಟಿದ್ದ. ಇದೇ ರೀತಿ ಕಳೆದ 6 ತಿಂಗಳಲ್ಲಿ ಬಾಲಕನಿಗೆ ಬೆದರಿಸಿ 700 ಗ್ರಾಂ ಚಿನ್ನಾಭರಣ ವಸೂಲಿ ಮಾಡಿದ್ದರು. ಈ ಚಿನ್ನವನ್ನು ತಮಗೆ ಪರಿಚಿತ ವೇಮನ್ ಹಾಗೂ ವಿವೇಕ್ ಮೂಲಕ ಅವರು ವಿಲೇವಾರಿ ಮಾಡಿಸಿದ್ದರು. ಈ ಚಿನ್ನಾಭರಣ ಮಾರಾಟದಲ್ಲಿ ಗಂಗಾವತಿಯ ಕಾರ್ತಿಕ್ ಹಾಗೂ ಸುನೀಲ್ ಸಾಥ್ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದನ್ನು ಕಂಡ ಆಂತಕಗೊಂಡ ಸಂತ್ರಸ್ತ ವಿದ್ಯಾರ್ಥಿ ತಾಯಿ, ಈ ಬಗ್ಗೆ ಮನೆಯಲ್ಲಿ ಮಕ್ಕಳನ್ನು ಪ್ರಶ್ನಿಸಿದಾಗ ಸುಲಿಗೆ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಸಂತ್ರಸ್ತ ವಿದ್ಯಾರ್ಥಿ ತಂದೆ ದೂರು ನೀಡಿದರು. ಅದರನ್ವಯ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕೊಪ್ಪಳ ಜಿಲ್ಲೆ ಹಾಗೂ ಕೆಂಗೇರಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಜ್ವಲ್ ಎಸ್ಕೇಪ್? ಬಂಧನ ತಪ್ಪಿಸಿಕೊಳ್ಳಲು ಜರ್ಮನಿಗೆ ಎಸ್ಕೇಪ್
₹50 ಸಾವಿರ ಬಹುಮಾನ
ಮನೆಗಳ್ಳತನ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿ ಸುಲಿಗೆ ಕೃತ್ಯಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ₹50 ಸಾವಿರ ನಗದು ಬಹುಮಾನವನ್ನು ಆಯುಕ್ತ ಬಿ.ದಯಾನಂದ್ ಪ್ರಕಟಿಸಿದರು. ತನಿಖಾ ತಂಡಕ್ಕೆ ಆಯುಕ್ತರು ಅಭಿನಂದಿಸಿದರು.ಅಪ್ರಾಪ್ತ ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ಪೋಷಕರು ಜಾಗೃತೆ ವಹಿಸಬೇಕು. ಆನ್‌ಲೈನ್ ಗೇಮ್ ವ್ಯಸನದ ಪರಿಣಾಮಗಳ ಕುರಿತು ಸೂಕ್ಷ್ಮವಾಗಿ ಮಕ್ಕಳಿಗೆ ಹೆತ್ತವರು ತಿಳಿಸಿದಾಗ ಈ ರೀತಿಯ ಕೃತ್ಯಗಳಿಗೆ ಕಡಿವಾಣ ಬೀಳಲಿದೆ.
-ಬಿ.ದಯಾನಂದ್, ಪೊಲೀಸ್ ಆಯುಕ್ತ.