* ಬೆಂಗಳೂರಿನಲ್ಲಿ ಭಗವಂತನಿಗೆ ಬೀಗ!*  ದೇವಸ್ಥಾನದ ಅರ್ಚಕ ಮತ್ತು ಟ್ರಸ್ಟಿ ನಡುವಿನ ಕಿತ್ತಾಟದಿಂದ ಭಕ್ತರು ಹೈರಾಣ*  ಅರ್ಚಕರ ಬದಲಾವಣೆಗೆ ಹುನ್ನಾರ ನಡೆದಿತ್ತು ಎನ್ನುವ ಆರೋಪ*  ಬೀದಿಗೆ ಬಂದ ವೈಯಾಲಿಕಾವಲ್ ನ ವೆಂಕಟೇಶ್ವರ ದೇವಸ್ಥಾನದ ಗಲಾಟೆ

ಬೆಂಗಳೂರು(ಡಿ.15) ಇದೊಂದು ವಿಚಿತ್ರ ಪ್ರಕರಣ. ಅರ್ಚಕ ಮತ್ತು ದೇವಾಲಯದ (Temple) ಟ್ರಸ್ಟಿಗಳ ಗಲಾಟೆ ಕಾರಣಕ್ಕೆ ಬೆಂಗಳೂರಿನಲ್ಲಿ (Bengaluru) ಭಗವಂತನಿಗೆ ಬೀಗ ಬಿದ್ದಿದೆ.

ದೇವಸ್ಥಾನದ ಅರ್ಚಕ ಮತ್ತು ಟ್ರಸ್ಟಿ ನಡುವಿನ ಕಿತ್ತಾಟದಿಂದ ಭಕ್ತರು ಹೈರಾಣವಾಗಿದ್ದಾರೆ. ಅರ್ಚಕರ ಬದಲಾಯಿಸಲು ಟ್ರಸ್ಟಿಗಳು ಹುನ್ನಾರ ನಡೆಸಿದ ಆರೋಪ ಕೇಳಿ ಬಂದಿದೆ.

ವೈಯಾಲಿಕಾವಲ್ ನ ವೆಂಕಟೇಶ್ವರ ದೇವಸ್ಥಾನದ ಗಲಾಟೆ ಬೀದಿಗೆ ಬಂದಿದೆ. ದೇವಸ್ಥಾನದ ಅರ್ಚಕ ರಾಮಚಂದ್ರ ಭಟ್ ಗೆ ಸ್ಥಳಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ 5 ದಿನದ ಹಿಂದೆ ದೇವಸ್ಥಾನಕ್ಕೆ ಟ್ರಸ್ಟಿ ಜಯಸೂರಿ ಬೀಗ ಹಾಕಿದ್ದಾರೆ.

ತಂದೆಯ ಕಾಲದಿಂದಲೂ ದೇವಸ್ಥಾನದ ಅರ್ಚಕನಾಗಿರುವ ರಾಮಚಂದ್ರ ಭಟ್ ಟ್ರಸ್ಟಿ ಮೇಲೆ ಆರೋಪ ಮಾಡಿದ್ದಾರೆ. ರಾಮಚಂದ್ರ ಭಟ್ ಸರಿಯಿಲ್ಲವೆಂದು ಬದಲಾವಣೆಗೆ ನ್ಯಾಯಾಲಯದ ಮೊರೆಯನ್ನು ಜಯಸೂರಿ ಹೋಗಿದ್ದರು. ಅಂತಿಮ ತೀರ್ಪಿನವರೆಗೂ ಅರ್ಚಕರನ್ನು ಬದಲಿಸದಂತೆ ನ್ಯಾಯಾಲಯ ಆದೇಶ ನೀಡಿತ್ತು.

ಈ ನಡುವೆ ಕಳೆದ 5 ದಿನದಿಂದ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಜಯಸೂರಿ ಸ್ವಯಂ ಘೋಷಿತ ಟ್ರಸ್ಟಿ, ಆತನ ಮೇಲೆ ನಂಬಿಕೆಯಿಲ್ಲ. ದೇವಸ್ಥಾನದ ಬಾಗಿಲು ತೆಗೆಯಬೇಕು ಎಂದು ಸ್ಥಳೀಯರು ಪ್ರತಿಭಟನೆ ಮಾಡಿದ್ದರು.

ದೇವಾಲಯ ಧ್ವಂಸ ಪ್ರಕರಣದ ಸಂಪೂರ್ಣ ಕತೆ

ಇದಾದ ಮೇಲೆ ಸ್ಥಳಕ್ಕೆ ಪೊಲೀಸರು ಬಂದಿದ್ದು ದೇವಾಲಯದ ಬೀಗ ತೆಗೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ನ್ಯಾಯಾಲಯದ ಆದೇಶ ಪಾಲಿಸುವಂತೆ ಎರಡೂ ಕಡೆಯವರಿಗೆ ಸೂಚನೆ‌ ನೀಡಲಾಗಿದೆ.

ಸದ್ದು ಮಾಡಿದ್ದ ದೇವಾಲಯ ಧ್ವಂಸ ಪ್ರಕರಣ: ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದಲ್ಲಿ ನೀಡಿದ್ದ ಆದೇಶದ ಅನ್ವಯ ನಂಜನಗೂಡಿನಲ್ಲಿ ಪುರಾತನ ದೇವಾಲಯ ತೆರವು ಮಾಡಲಾಗಿತ್ತು. 

ಪುರಾತನ ದೇವಾಲಯ ಧ್ವಂಸಕ್ಕೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಧಿಕಾರಿಗಳು ಮನಸಿಗೆ ಬಂದಂತೆ ವರ್ತಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ ನಡೆಸಿತ್ತು.

ಹಿಂದೂ ದೇವಾಲಯಗಳ ತೆರವು ದುರಾದೃಷ್ಟಕರ ಎಂದು ಯುವ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು. ತೆರವು ಸಂಬಂಧ ಸುಪ್ರಿಂಕೋರ್ಟ್ ಹೇಳಿದ 2009ರ ನಂತರದ ಆದೇಶ ಪಾಲಿಸಬೇಕು. ಅಭಿವೃದ್ಧಿಯೂ ಆಗಬೇಕು ಎಂದು ತಿಳಿಸಿದ್ದರು ರಸ್ತೆ ನಿರ್ಮಾಣವಾಗಬೇಕು. ಡ್ಯಾಂ ನಿರ್ಮಾಣವಾಗಬೇಕು. ಆದರೆ ಈ ರೀತಿ ರಾತ್ರೋ ರಾತ್ರಿ ಒಡೆಯುವುದು ತಪ್ಪು. ಇದು ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದಿದ್ದರು. 

ಮೈಸೂರು ರಸ್ತೆ ದೇವಾಲಯ ತೆರವು: ಬೆಂಗಳೂರು-ಮೈಸೂರು ರಸ್ತೆಯಲ್ಲಿ ಮೆಟ್ರೋ ಡಿಪೋ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು ಮುಂಭಾಗದ ಕಾಳಿ ದೇವಸ್ಥಾನವನ್ನು ಪೊಲೀಸರ ಭದ್ರತೆಯಲ್ಲಿ ತೆರವು ಮಾಡಲಾಗಿತ್ತು.

ದೇವಸ್ಥಾನದ ತೆರವಿಗೆ ಭಕ್ತರು ಅಡ್ಡಿಪಡಿಸಬಹುದು ಎಂಬ ಕಾರಣಕ್ಕೆ ಮುಂಜಾನೆ 5ರ ಸುಮಾರಿಗೆ ಜೆಸಿಬಿಗಳನ್ನು ತಂದು ದೇವಸ್ಥಾನ ಧ್ವಂಸ ಮಾಡಲಾಗಿತ್ತು. ಅನಧಿಕೃತ ದೇವಾಲಯಗಳನ್ನು ಸಾಧ್ಯವಾದರೆ ಸ್ಥಳಾಂತರ ಮಾಡಿ ಅಸಾಧ್ಯ ಎಂದು ಅನಿಸಿದರೆ ಮಾತ್ರ ತೆರವು ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ರಾಜ್ಯ ಸರ್ಕಾರ ಸುಪ್ರೀಂ ಆದೇಶ ಪಾಳಿಸಲು ಗೊಂದಲ ಮಾಡಿಕೊಂಡಿದ್ದು ಜನಾಕ್ರೋಶಕ್ಕೆ ಗುರಿಯಾಗಿತ್ತು. 

ಸಿಗಂಧೂರು: ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿಯೂ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ವಿವಾದ ಎದ್ದಿದ್ದು. ಅನೇಕ ನಾಯಕರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.