ಕನಕಪುರದ ಚುಂಚಿ ಫಾಲ್ಸ್‌ನಲ್ಲಿ ಪ್ರವಾಸಿಗರಿಂದ ಅಕ್ರಮ ಹಣ ವಸೂಲಿ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಪ್ರವಾಸೋದ್ಯಮ ಇಲಾಖೆ ದೂರು ದಾಖಲಿಸಿದೆ. ವೈರಲ್ ವಿಡಿಯೋದಲ್ಲಿ ಕಿಡಿಗೇಡಿಗಳ ದೌರ್ಜನ್ಯ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು (ಆ.30): ಕನಕಪುರ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿರುವ ಚುಂಚಿಫಾಲ್ಸ್, ಪ್ರಕೃತಿಯ ಮಡಿಲಿನಲ್ಲಿ ವಿಶ್ರಾಂತಿಗಾಗಿ ಬರುವ ಪ್ರವಾಸಿಗರಿಗೆ ಕಿಡಿಗೇಡಿಗಳಿಂದ ಕಿರುಕುಳ ನೀಡುವ ಸ್ಥಳವಾಗಿ ಮಾರ್ಪಟ್ಟಿದೆ. ಪ್ರವೇಶಕ್ಕಾಗಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುವ ಮೂಲಕ ಬೆಳಕಿಗೆ ಬಂದಿದೆ.
ಕನಕಪುರ (ಆ.30): ಪ್ರವಾಸಿಗರಿಂದ 100 ರಿಂದ 500 ರೂ.ವರೆಗೆ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ.ಈ ಘಟನೆಯಿಂದ ಕೆರಳಿದ ಪ್ರವಾಸೋದ್ಯಮ ಇಲಾಖೆಯ ಸಹಾಯ ನಿರ್ದೇಶಕರು ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾತನೂರು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ಕೈಗೊಂಡಿದ್ದಾರೆ. ವೀಡಿಯೋದಲ್ಲಿ ಕಿಡಿಗೇಡಿಗಳು ಪ್ರವಾಸಿಗರಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡುವ ದೃಶ್ಯ ಸೆರೆಯಾಗಿದ್ದು, ಪ್ರವಾಸಿಗರು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚುಂಚಿಫಾಲ್ಸ್‌ಗೆ ಆಗಮಿಸುವ ಪ್ರವಾಸಿಗರು, ವಿಶೇಷವಾಗಿ ಕುಟುಂಬಸಮೇತ ಬರುವವರು, ಈ ಕಿರುಕುಳದಿಂದ ಆತಂಕಗೊಂಡಿದ್ದಾರೆ. 'ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ಬಂದರೆ, ಇಲ್ಲಿ ಕಿಡಿಗೇಡಿಗಳಿಂದ ದೌರ್ಜನ್ಯಕ್ಕೆ ಒಳಗಾಗಬೇಕಾಗಿದೆ' ಎಂದು ಪ್ರವಾಸಿಯೊಬ್ಬರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಪ್ರವಾಸೋದ್ಯಮ ಇಲಾಖೆಯ ಭದ್ರತಾ ವ್ಯವಸ್ಥೆಯ ಕೊರತೆಯೂ ಚರ್ಚೆಗೆ ಗುರಿಯಾಗಿದೆ. ಸ್ಥಳೀಯ ಆಡಳಿತವು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಚುಂಚಿಫಾಲ್ಸ್‌ನಂತಹ ಪ್ರವಾಸಿ ತಾಣದ ಆಕರ್ಷಣೆ ಕಡಿಮೆಯಾಗುವ ಆತಂಕವಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಕಿಡಿಗೇಡಿಯ ವಿರುದ್ಧ ಕಠಿಣಕ್ರಮ ಜರುಗಿಸಬೇಕಿದೆ.
