ದಾವಣಗೆರೆಯಲ್ಲಿ ಗಣೇಶೋತ್ಸವದ ನಿಮಿತ್ತ ಅಳವಡಿಸಲಾಗಿದ್ದ ಶಿವಾಜಿ ಫ್ಲೆಕ್ಸ್‌ಗೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತೀಶ್ ಪೂಜಾರಿ ಬಂಧಿಸಲಾಗಿತ್ತು. ಹಿಂದೂಪರ ಸಂಘಟನೆಗಳು ತೀವ್ರ ಪ್ರತಿಭಟನೆ ಹಿನ್ನೆಲೆ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾದಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಾವಣಗೆರೆ (ಆ.30): ದಾವಣಗೆರೆ (ಆ.30): ದಾವಣಗೆರೆಯ ಮಟ್ಟಿಕಲ್ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅಫ್ಜಲ್ ಖಾನ್ ಯುದ್ಧದ ಸನ್ನಿವೇಶವನ್ನು ಚಿತ್ರಿಸಿದ ಆಕ್ಷೇಪಾರ್ಹ ಫ್ಲೆಕ್ಸ್‌ನಿಂದ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತೀಶ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಸತೀಶ್ ಪೂಜಾರಿ ಬಂಧನ ಬಳಿಕ ಹಿಂದೂಪರ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿದರು. ಬಿಡುಗಡೆ ಮಾಡುವವರಿಗೀ ಸ್ಥಳದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕಾರ್ಯಕರ್ತರು. ಬಳಿಕ ಸ್ಟೇಷನ್ ಬೇಲ್ ಮೇಲೆ ಸತೀಶ್ ಪೂಜಾರಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆ

ಗಣೇಶೋತ್ಸವದ ಸಂದರ್ಭದಲ್ಲಿ ಮಟ್ಟಿಕಲ್‌ನಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧಿಸುವ ಐತಿಹಾಸಿಕ ಘಟನೆಯನ್ನು ಚಿತ್ರಿಸಲಾಗಿತ್ತು. ಫ್ಲೆಕ್ಸ್ ತೆರುವು ಮಾಡಲು ಭಾರೀ ಭದ್ರತೆಯೊಂದಿಗೆ ಬಂದಾಗ ಹಿಂದೂ ಪರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಮಧ್ಯರಾತ್ರಿ ಪೊಲೀಸ್ ಭದ್ರತೆಯಲ್ಲಿ ಫ್ಲೆಕ್ಸ್ ತೆರವು ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್ ಪೂಜಾರಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು.

ಠಾಣೆಗೆ ಬೆಂಕಿ ಹಚ್ಚಿದವರನ್ನ ಬಿಡ್ತೀರಿ..!

ಸತೀಶ್ ಪೂಜಾರಿಯ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಹಿಂದೂ ಕಾರ್ಯಕರ್ತರು ವಿದ್ಯಾನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಕೆಲವರು ಠಾಣೆಗೆ ಬೆಂಕಿ ಹಚ್ಚಿದವರನ್ನು ಬಿಡುಗಡೆ ಮಾಡ್ತೀರಿ, ನಾವೇನು ಅಂಥವರಲ್ಲ ಎಂದು ಪೊಲೀಸರ ವಿರುದ್ಧವೇ ಹರಿಹಾಯ್ದರು. ಅಲ್ಲದೇ ಸತೀಶ್ ಪೂಜಾರಿಯನ್ನು ಬಿಡುಗಡೆ ಮಾಡದಿದ್ದರೆ ಠಾಣೆಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕಿದರು. ಈ ಸಂದರ್ಭದಲ್ಲಿ ಪೊಲೀಸರು ಯುವಕರನ್ನು ಶಾಂತಗೊಳಿಸಲು ತೀವ್ರ ಶ್ರಮಪಟ್ಟರು.

ವಿದ್ಯಾನಗರ ಠಾಣೆ ಸುತ್ತಮುತ್ತ ನಿಷೇಧಾಜ್ಞೆ ಜಾರಿ:

ವಿದ್ಯಾನಗರ ಠಾಣೆಯ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.ನಾಯಕರ ಸೂಚನೆಯಂತೆ ಶಾಂತಿಯುತ ವರ್ತನೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕೆಲವು ಮುಖಂಡರನ್ನು ಠಾಣೆಯ ಒಳಗೆ ಕರೆದು ಮಾತುಕತೆ ನಡೆಸಿದರು. ಮುಖಂಡರು ಯುವಕರಿಗೆ ಶಾಂತಿಯುತವಾಗಿರಲು ಸೂಚಿಸಿದ್ದು, ಎಲ್ಲರೂ ಮನೆಗೆ ವಾಪಸಾಗುವಂತೆ ತಿಳಿಸಿದರು. ಇದರಿಂದ ಜಮಾಯಿಸಿದ್ದ ಯುವಕರು ಕ್ರಮೇಣ ಚದರಿಹೋಗಿದ್ದಾರೆ.

ಇದೊಂದು ವ್ಯವಸ್ಥಿತ ಪಿತೂರಿ:ಬಿಜೆಪಿ ಮಾಜಿ ಮೇಯರ್‌:

ಈ ಘಟನೆಗೆ ಸಂಬಂಧಿಸಿದಂತೆ ದಾವಣಗೆರೆಯ ಬಿಜೆಪಿ ಮಾಜಿ ಮೇಯರ್ ಎಸ್.ಟಿ.ವೀರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವ್ಯವಸ್ಥಿತ ಪಿತೂರಿಯಾಗಿದ್ದು, ರಾಜಕೀಯ ಕಾರಣಗಳಿಂದ ಈ ಬಂಧನ ನಡೆದಿರಬಹುದು. ಪೊಲೀಸರ ಮೂಲಕ ಕೆಲವು ಶಕ್ತಿಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಸತೀಶ್ ಪೂಜಾರಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಆರೋಪಿಸುತ್ತಿದ್ದಾರೆ, ಆದರೆ ಇದಕ್ಕೆ ಸಾಕ್ಷ್ಯ ಕೇಳಿದ್ದೇವೆ. ವಕೀಲರ ಸಲಹೆ ಪಡೆದು ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯಮಟ್ಟದ ನಾಯಕರೊಂದಿಗೆ ಚರ್ಚಿಸಿ, ಅಗತ್ಯವಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು..

ವಿವಾದಕ್ಕೆ ಕಾರಣವಾದ ಫ್ಲೆಕ್ಸ್:

ಅಫ್ಜಲ್ ಖಾನ್‌ನನ್ನು ಶಿವಾಜಿ ಮಹಾರಾಜರು ವಧಿಸಿದ್ದು ಐತಿಹಾಸಿಕ ಘಟನೆಯಾಗಿದ್ದು, ಅದನ್ನು ನಾವು ರಚಿಸಿಲ್ಲ ಅಥವಾ ಆನಿಮೇಟೆಡ್ ರೂಪದಲ್ಲಿ ತೋರಿಸಿಲ್ಲ. ಫ್ಲೆಕ್ಸ್ ಹಾಕಿರೋದಕ್ಕೆ ಬಂಧಿಸಲಾಗಿದೆ. ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಬಾರದೆಂದು ಸಮಾಧಾನದಿಂದ ಇದ್ದೇವೆ ಎಂದು ಎಸ್.ಟಿ.ವೀರೇಶ್ ತಿಳಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸತೀಶ್ ಪೂಜಾರಿಯ ವಿಚಾರಣೆ ಭಾರಿ ಭದ್ರತೆಯೊಂದಿಗೆ ಮುಂದುವರಿದಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಘಟನೆಯಿಂದ ದಾವಣಗೆರೆಯಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕ್ರಮ ಕೈಗೊಂಡಿದ್ದಾರೆ.