ಕಳೆದ ಐದು ವರ್ಷಗಳಲ್ಲಿ 11 ಸರ್ಕಾರಿ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 9,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಜನ ಧನ ಖಾತೆ, ಮೂಲ ಉಳಿತಾಯ ಖಾತೆ ಮತ್ತು ಸಂಬಳ ಖಾತೆಗಳಿಗೆ ವಿನಾಯಿತಿ ನೀಡಲಾಗಿದೆ.
ನವದೆಹಲಿ (ಜು.31): ಕಳೆದ 5 ವರ್ಷಗಳಲ್ಲಿ, ದೇಶದ 11 ಸರ್ಕಾರಿ ಬ್ಯಾಂಕುಗಳು ತಮ್ಮ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 9,000 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿವೆ. ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಖಾತೆಗಳಲ್ಲಿ ಮಾಸಿಕ ಆಧಾರದ ಮೇಲೆ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ದಂಡ ವಿಧಿಸಿದರೆ, ಇನ್ನು ಕೆಲವು ತ್ರೈಮಾಸಿಕ ಆಧಾರದ ಮೇಲೆ ಅದನ್ನು ವಸೂಲಿ ಮಾಡಿದ್ದವು.
ಆದರೆ, ಪ್ರಧಾನ ಮಂತ್ರಿ ಜನ ಧನ ಖಾತೆ, ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಮತ್ತು ಸಂಬಳ ಖಾತೆಯಂತಹ ಅಕೌಂಟ್‌ಗಳನ್ನು ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ಮಾಹಿತಿಯನ್ನು ನೀಡಿದರು. ಕನಿಷ್ಠ ಸರಾಸರಿ ಬ್ಯಾಲೆನ್ಸ್ (MAB) ಕಾಯ್ದುಕೊಳ್ಳದಿದ್ದಕ್ಕಾಗಿ ವಿಧಿಸಲಾಗುವ ದಂಡವನ್ನು ತರ್ಕಬದ್ಧಗೊಳಿಸುವಂತೆ ಹಣಕಾಸು ಸೇವೆಗಳ ಇಲಾಖೆ (DFS) ಬ್ಯಾಂಕುಗಳಿಗೆ ಸಲಹೆ ನೀಡಿದೆ ಎಂದು ಸಚಿವರು ಹೇಳಿದರು.
ಇದರಲ್ಲಿ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಪರಿಹಾರ ನೀಡುವತ್ತ ವಿಶೇಷ ಒತ್ತು ನೀಡಲಾಗಿದೆ. 11 ಸರ್ಕಾರಿ ಬ್ಯಾಂಕುಗಳಲ್ಲಿ 7 ಮಾತ್ರ ಈ ಸಲಹೆಯನ್ನು ಪಾಲಿಸಿವೆ ಎಂದು ತೋರುತ್ತದೆ. ಇತರ 4 ಬ್ಯಾಂಕುಗಳು ಸಹ ಶೀಘ್ರದಲ್ಲೇ ಹಾಗೆ ಮಾಡುವುದಾಗಿ ಹೇಳಿವೆ. ಆದರೆ ಅನೇಕ ಖಾಸಗಿ ಬ್ಯಾಂಕುಗಳು ಹಾಗೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ಬ್ಯಾಂಕುಗಳು ಇನ್ನೂ ಈ ಶುಲ್ಕಗಳನ್ನು ಏಕೆ ವಿಧಿಸುತ್ತಿವೆ?: ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ, ಬ್ಯಾಂಕುಗಳು ತಮ್ಮ ಮಂಡಳಿಯು ಅನುಮೋದಿಸಿದ ನೀತಿಗಳ ಪ್ರಕಾರ ದಂಡವನ್ನು ನಿಗದಿಪಡಿಸಬಹುದು. ಆದರೆ ಈ ದಂಡವು ಖಾತೆಯನ್ನು ತೆರೆಯುವ ಸಮಯದಲ್ಲಿ ಒಪ್ಪಿಕೊಂಡಿರುವ ನಿಜವಾದ ಬ್ಯಾಲೆನ್ಸ್ ಮತ್ತು ಕನಿಷ್ಠ ಬ್ಯಾಲೆನ್ಸ್ ನಡುವಿನ ವ್ಯತ್ಯಾಸದ ಮೇಲೆ ನಿಗದಿತ ಶೇಕಡಾವಾರು ಆಗಿರಬೇಕು ಎಂದಿದೆ.
ಇಂಡಿಯನ್ ಬ್ಯಾಂಕ್‌ನಿಂದ ಗರಿಷ್ಠ ಹಣ ವಸೂಲಿ: ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಗರಿಷ್ಠ ಮೊತ್ತ ವಸೂಲಿ ಮಾಡಿದ ಬ್ಯಾಂಕ್‌ಗಳ ಪಟ್ಟಿಯಲ್ಲಿಇಂಡಿಯನ್ ಬ್ಯಾಂಕ್ ಅಗ್ರಸ್ಥಾನದಲ್ಲಿದೆ. ಇಂಡಿಯನ್ ಬ್ಯಾಂಕ್ ಒಟ್ಟು 1828 ಕೋಟಿ ರೂಪಾಯಿ ವಸೂಲಿ ಮಾಡಿದೆ. ನಂತರದ ಸ್ಥಾನದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (1662 ಕೋಟಿ), ಬ್ಯಾಂಕ್ ಆಫ್ ಬರೋಡ (1532 ಕೋಟಿ), ಕೆನರಾ ಬ್ಯಾಂಕ್ (1213 ಕೋಟಿ), ಬ್ಯಾಂಕ್ ಆಫ್ ಇಂಡಿಯಾ (810 ಕೋಟಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (588 ಕೋಟಿ), ಬ್ಯಾಂಕ್ ಆಫ್ ಮಹಾರಾಷ್ಟ್ರ (535 ಕೋಟಿ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (485 ಕೋಟಿ), ಯುಕೋ ಬ್ಯಾಂಕ್ (120 ಕೋಟಿ), ಪಂಜಾಬ್ & ಸಿಂಧ್ ಬ್ಯಾಂಕ್ (101 ಕೋಟಿ) ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್(62 ಕೋಟಿ) ಈ ಲಿಸ್ಟ್‌ನಲ್ಲಿದೆ. ಒಟ್ಟು 8936 ಕೋಟಿ ರೂಪಾಯಿ ಹಣ ವಸೂಲಿ ಮಾಡಲಾಗಿದೆ.
