Asianet Suvarna News Asianet Suvarna News

Fraud: ಚೀನಿ ಆ್ಯಪ್‌ ಕಂಪನಿಗಳಿಗೆ ಬೆಂಗಳೂರೇ ಅಡ್ರೆಸ್‌..! ಎಸ್‌ಎಫ್‌ಐಒ, ಇಡಿಯಿಂದ ಪತ್ತೆ

ಚೀನಿ ಆ್ಯಪ್‌ ಕಂಪನಿಗಳು ಬೆಂಗಳೂರಿನ ‘ಬ್ರಿಕ್‌ ಸ್ಪೇಸ್‌’ ಎಂಬ ಒಂದೇ ವಿಳಾಸ ನೀಡಿ ವಂಚನೆ ನಡೆಸುತ್ತಿವೆ ಎಂಬುದು ಕೇಂದ್ರದ ತನಿಖೆ ವೇಳೆ ಪತ್ತೆಯಾಗಿದೆ. 1200 ಅಕ್ರಮ ಕಂಪನಿಗಳ ಜಾಲವೂ ಬೆಳಕಿಗೆ ಬಂದಿದೆ. 

chinese loan app racket gurgaon cops say scam linked to fake firms ash
Author
First Published Sep 13, 2022, 8:31 AM IST

ನವದೆಹಲಿ: ಮೊಬೈಲ್‌ ಆ್ಯಪ್‌ ಮೂಲಕ ಸಾಲ ನೀಡಿ ಅಮಾಯಕ ಜನರನ್ನು ಶೋಷಣೆ ನಡೆಸುತ್ತಿರುವ ಚೀನಾ ಮೂಲದ ಕಂಪನಿಗಳ ವಿರುದ್ಧ ಕೇಂದ್ರ ಸರ್ಕಾರ ಬೇಟೆ ತೀವ್ರಗೊಳಿಸಿರುವಾಗಲೇ, ಈ ಪೈಕಿ 3 ಕಂಪನಿಗಳು ಬೆಂಗಳೂರಿನ ಒಂದೇ ವಿಳಾಸ (Address) ನೀಡಿ ಕಾರ್ಯಾಚರಣೆ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ, ಒಂದೇ ಅಡ್ರೆಸ್‌ನಲ್ಲಿ ಬರೋಬ್ಬರಿ 1200 ಬೇರೆ ಬೇರೆ ಕಂಪನಿಗಳು ಅಕ್ರಮವಾಗಿ ನಡೆಯುತ್ತಿರುವುದು ಪತ್ತೆಯಾಗಿದೆ. ಬೆಂಗಳೂರಿನ ಕಲ್ಯಾಣನಗರ (Kalyan Nagar) ಬಳಿಯ ಎಚ್‌ಆರ್‌ಬಿಆರ್‌ ಬಡಾವಣೆಯ (HRBR Layout) 4ನೇ ಅಡ್ಡರಸ್ತೆಯಲ್ಲಿ ಬ್ರಿಕ್‌ಸ್ಪೇಸ್‌ (BricSpaces Private Limited) ಎಂಬ ಸಂಸ್ಥೆಯಿದೆ. ಸ್ವಂತ ನೆಲೆ ಇಲ್ಲದ ಕಂಪನಿಗಳು ಕಾರ್ಯಾಚರಿಸಲು ಜಾಗ ನೀಡುವ ‘ಕೋ ವರ್ಕಿಂಗ್‌ ಸ್ಪೇಸ್‌’ (Co - Working Space) ಕಂಪನಿ ಇದು. ಇದೇ ಕಂಪನಿಯ ವಿಳಾಸವನ್ನು ನೀಡಿ 3 ಚೀನಿ ಆ್ಯಪ್‌ ಕಂಪನಿಗಳು ನೋಂದಣಿಯಾಗಿರುವುದನ್ನು ಹಾಗೂ ಅದಕ್ಕೆ ದೆಹಲಿ ಮೂಲದ ವ್ಯಕ್ತಿಯೊಬ್ಬ ಅನುಕೂಲ ಮಾಡಿಕೊಟ್ಟಿರುವುದನ್ನು ಗಂಭೀರ ವಂಚನೆಗಳ ತನಿಖಾ ಸಂಸ್ಥೆ (Serious Fraud Investigation Office) (ಎಸ್‌ಎಫ್‌ಐಒ) ಹಾಗೂ ಜಾರಿ ನಿರ್ದೇಶನಾಲಯ (Enforcement Directorate) (ಇ.ಡಿ.) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಇದರ ಬೆನ್ನಲ್ಲೇ ಬ್ರಿಕ್‌ಸ್ಪೇಸ್‌ ಕಂಪನಿ ಕೇಂದ್ರ ಕಾರ್ಪೋರೆಟ್‌ ಸಚಿವಾಲಯಕ್ಕೆ ಪತ್ರ ಬರೆದು, ತನ್ನ ವಿಳಾಸವನ್ನು ಬಳಸಿಕೊಂಡು ಹಲವಾರು ಕಂಪನಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಆ ಕಂಪನಿಗಳ ವಿಳಾಸದಿಂದ ತನ್ನ ಹೆಸರನ್ನು ಕೈಬಿಡಬೇಕು ಎಂದು ಮನವಿ ಮಾಡಿದೆ. ಅಲ್ಲದೆ, ತನ್ನ ವಿಳಾಸ ನೀಡಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ 1200 ಕಂಪನಿಗಳ ಪಟ್ಟಿಯನ್ನು ರವಾನಿಸಿದೆ. ಈ ಪೈಕಿ ಚೀನಾ ಮೂಲದ ಮೊಬೈಲ್‌ ಆ್ಯಪ್‌ ಸಾಲ ಕಂಪನಿಗಳು ಎಷ್ಟು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.

ಚೀನಾ ಕಂಪನಿ ಪಾಲಾಯ್ತು ದೆಹಲಿ-ಮೀರತ್ ಕಾರಿಡಾರ್ ಕಾಮಗಾರಿ; ವಿವಾದ ಆರಂಭ!

ಗೊತ್ತಾಗಿದ್ದು ಹೇಗೆ..?:
ಚೀನಾ ಮೂಲದ ಆ್ಯಪ್‌ ಕಂಪನಿಗಳು ಮುಗ್ಧ ಜನರಿಗೆ ಮೋಸ ಮಾಡಲು ಶೆಲ್‌ ಕಂಪನಿಗಳ ರೀತಿ ಕಾರ್ಯನಿರ್ವಹಿಸುತ್ತಿರುವ ಕುರಿತು ತನಿಖೆ ನಡೆಸಿದ್ದ ಎಸ್‌ಎಫ್‌ಐಒ ಕಳೆದ ವಾರ ಡೋರ್ಚ್‌ಸೆ ಎಂಬಾತನನ್ನು ಬಂಧಿಸಿತ್ತು. ಕಾರ್ಪೋರೆಟ್‌ ವ್ಯವಹಾರಗಳ ಸಚಿವಾಲಯದ ದೂರು ಆಧರಿಸಿ ಆತನ ವಿರುದ್ಧ ಗುರುಗ್ರಾಮ ಪೊಲೀಸರು ಕೂಡ ಮತ್ತೊಂದು ಪ್ರಕರಣ ದಾಖಲಿಸಿದ್ದರು. ವಾನ್‌ ಜುನ್‌ ಎಂಬ ಚೀನಾ ಪ್ರಜೆಯ ಜತೆಗೂಡಿ ಡೋರ್ಚ್‌ಸೆ ಎರಡು ಕಂಪನಿಗಳನ್ನು ಸ್ಥಾಪಿಸಿದ್ದ. ಅದಕ್ಕೆ ಜುನ್‌ ನಿರ್ದೇಶಕನಾಗಿದ್ದ. ಈ ಪೈಕಿ ಫಿನಿಂಟಿ ಕಂಪನಿ ಬೆಂಗಳೂರಿನ ಬ್ರಿಕ್‌ಸ್ಪೇಸ್‌ ವಿಳಾಸ ನೀಡಿ ನೋಂದಣಿಯಾಗಿತ್ತು. ಇದಲ್ಲದೆ ತನಿಖೆ ಎದುರಿಸುತ್ತಿರುವ ಯೆಲ್ಲೋ ಟ್ಯೂನ್‌ ಟೆಕ್ನಾಲಜೀಸ್‌ ಹಾಗೂ ಮಡ್‌ಮೇಟ್‌ ಟೆಕ್ನಾಲಜೀಸ್‌ ಕಂಪನಿಗಳೂ ಇದೇ ವಿಳಾಸ ನೀಡಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿತ್ತು.

ಈ ವಿಚಾರ ಗೊತ್ತಾಗುತ್ತಿದ್ದಂತೆ ಬ್ರಿಕ್‌ಸ್ಪೇಸ್‌ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ತನ್ನ ವಿಳಾಸ ನೀಡಿ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಗಳ ಪಟ್ಟಿಯನ್ನು ನೀಡಿದೆ. ಜತೆಗೆ ಈಗ ತನಿಖೆ ಎದುರಿಸುತ್ತಿರುವ 3 ಕಂಪನಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನೂ ಮಾಧ್ಯಮಗಳಿಗೆ ನೀಡಿದೆ. ದೆಹಲಿ ಮೂಲದ ವ್ಯಕ್ತಿಯೊಬ್ಬರು ಬಂದು ಈ ಕಂಪನಿಗಳಿಗೆ ಸ್ಥಳಾವಕಾಶ ಬೇಕೆಂದು ಸಂಪರ್ಕಿಸಿದ್ದರು. ಆ ವ್ಯಕ್ತಿಯ ಕೋರಿಕೆ ಮೇರೆಗೆ ಈ ಕಂಪನಿಗಳ ಜತೆಗೆ ಇನ್ನೂ 22 ಕಂಪನಿಗಳಿಗೆ ಸ್ಥಳಾವಕಾಶ ನೀಡಲಾಗಿತ್ತು. ಈ ಸಂಬಂಧ 2021ರ ಮಾರ್ಚ್‌ 2, 3ರಂದು ಒಪ್ಪಂದವೇರ್ಪಟ್ಟಿತ್ತು. ಅದು ಒಂದು ವರ್ಷದ್ದಾಗಿತ್ತು ಎಂದು ಹೇಳಿದೆ. ಈ ನಡುವೆ, ಯೆಲ್ಲೋ ಟ್ಯೂನ್‌ ಟೆಕ್ನಾಲಜೀಸ್‌ಗೆ ಸೇರಿದ 370 ಕೋಟಿ ರೂ. ಗಳನ್ನು ಈಗಾಗಲೇ ಬೇರೊಂದು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವ ಕಂಪನಿಗಳಿಗೆ ಪ್ರೋತ್ಸಾಹಕ ಧನ ಘೋಷಿಸಿದ ಜಪಾನ್!

Follow Us:
Download App:
  • android
  • ios