ಡಕಾಯತಿಗೆ ಯತ್ನಿಸಿದ ಚಡ್ಡಿ ಗ್ಯಾಂಗ್‌ ನಟೋರಿಯಸ್‌ ಕ್ರಿಮಿನಲ್‌ ಸದಸ್ಯನಿಗೆ ಗುಂಡೇಟು

ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಹಲ್ಲೆ ನಡೆಸಿ ಡಕಾಯತಿ ಮಾಡುತ್ತಿದ್ದ ನಟೋರಿಯಸ್‌ ಕ್ರಿಮಿನಲ್‌, ಚಡ್ಡಿ ಗ್ಯಾಂಗ್‌ನ ಪ್ರಮುಖ ಲೀಡರ್‌ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಪಾಲಾ ವೆಂಕಟೇಶ್ವರ ಅಲಿಯಾಸ್‌ ಕಲ್ಯಾಣಕುಮಾರ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. 

chaddi gang notorious inter state robber attempts to escape in hubballi police shoot him in legs gvd

ಹುಬ್ಬಳ್ಳಿ (ಡಿ.29): ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಹಲ್ಲೆ ನಡೆಸಿ ಡಕಾಯತಿ ಮಾಡುತ್ತಿದ್ದ ನಟೋರಿಯಸ್‌ ಕ್ರಿಮಿನಲ್‌, ಚಡ್ಡಿ ಗ್ಯಾಂಗ್‌ನ ಪ್ರಮುಖ ಲೀಡರ್‌ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಪಾಲಾ ವೆಂಕಟೇಶ್ವರ ಅಲಿಯಾಸ್‌ ಕಲ್ಯಾಣಕುಮಾರ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಗುಂಡು ಹಾರಿಸಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ ಈತ ಹಾಗೂ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದೆ. ವೆಂಕಟೇಶ್ವರ ನಟೋರಿಯಸ್‌ ಕ್ರಿಮಿನಲ್‌. ಈತನ ಮೇಲೆ ಮಂಡ್ಯ, ಚಿಕ್ಕಾಬಳ್ಳಾಪುರ, ರಾಯಚೂರು. ಕೋಲಾರ ಸೇರಿದಂತೆ ವಿವಿಧೆಡೆ ಡಕಾಯತಿ ಪ್ರಕರಣಗಳಿವೆ. ಇವಲ್ಲದೇ, ಆಂಧ್ರ, ಕರ್ನಾಟಕ, ತಮಿಳನಾಡು ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಭಾರೀ ನಟೋರಿಯಸ್‌: ಇವರು ನಾಲ್ಕೈದು ಜನ ಸೇರಿಕೊಂಡು ಮನೆಗಳಿಗೆ ನುಗ್ಗಿ ಆ ಮನೆಯಲ್ಲಿದ್ದವರ ಮೇಲೆ ಹಲ್ಲೆ ಮಾಡುತ್ತಿದ್ದರು. ತಾವು ಹೋದ ಮೇಲೆ ಬೇರೆಡೆ ಹೋಗಿ ತಮಗೆ ಅಪಾಯ ತರಬಾರದು ಎಂಬ ಕಾರಣಕ್ಕೆ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿ ಮೊಬೈಲ್‌ ಕಸಿದುಕೊಳ್ಳುತ್ತಿದ್ದರು. ಜತೆಗೆ ಕಟ್ಟಿ ಹಾಕುತ್ತಿದ್ದರು. ಬಾಗಿಲನ್ನು ಸಹ ಇವರು ದೊಡ್ಡ ದೊಡ್ಡ ಕಲ್ಲುಗಳಿಂದ ಒಡೆದು ಮುರಿದುಕೊಂಡು ಒಳನುಗ್ಗುತ್ತಿದ್ದರು. ಇವರ ಅಟಾಟೋಪ ನೋಡಿಯೇ ಆ ಮನೆಯಲ್ಲಿದ್ದವರು ಹೆದರಬೇಕು. ಆ ರೀತಿ ಇವರ ವರ್ತನೆ ಇರುತ್ತಿತ್ತು. ಕಳೆದ ಆರು ತಿಂಗಳ ಹಿಂದೆ (ಜೂ. 6ರಂದು) ಅಶೋಕ ಕದಂ ಎಂಬುವವರ ಮನೆಗೂ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿ ಕಟ್ಟಿಹಾಕಿ ಡಕಾಯತಿ ಮಾಡಿದ್ದರು. ಇವರು ಡಕಾಯಿತಿ ಮಾಡುವ ಬರೀ ಚಡ್ಡಿ ಧರಿಸುತ್ತಿದ್ದರಿಂದ ಚಡ್ಡಿ ಗ್ಯಾಂಗ್‌ ಎಂದು ಇವರನ್ನು ಕರೆಯುತ್ತಾರೆ.

ಹೊಸವರ್ಷಕ್ಕೆ ಅಯೋಧ್ಯೆ ಹೋಟೆಲ್‌ ಪೂರ್ತಿ ಬುಕ್‌: ದರ್ಶನ ಅವಧಿ ವಿಸ್ತರಣೆ

ನವಲೂರಲ್ಲಿ ಸಿಕ್ಕಿ ಬಿದ್ದ: ಈ ನಡುವೆ ಈ ಗ್ಯಾಂಗ್‌ನ ಸದಸ್ಯರು, ನವಲೂರಿನ ವಿಕಾಸಕುಮಾರ ಎಂಬುವವರ ಮನೆಗೆ ನುಗ್ಗಲು ಪ್ರಯತ್ನಿಸಿತ್ತು. ಊರ ಹೊರವಲಯದಲ್ಲಿ ಇರುವ ಈ ಮನೆಯ ಬಾಗಿಲಗೆ ಕಲ್ಲು ಎಸೆದು ಬಾಗಿಲು ಮುರಿಯಲು ಯತ್ನಿಸಿತ್ತು. ಆದರೆ ಅಷ್ಟರೊಳಗೆ ವಿಕಾಸಕುಮಾರಗೆ ಎಚ್ಚರವಾಗಿ ಪೊಲೀಸರಿಗೆ ಹಾಗೂ ಅಕ್ಕಪಕ್ಕದ ಜನರಿಗೆ ಮೊಬೈಲ್‌ ಮೂಲಕ ತಿಳಿಸಿದ್ದಾರೆ. ಕೂಡಲೇ ಅಲ್ಲಿನ ಪ್ರದೇಶದಲ್ಲಿ ರೌಂಡಿನಲ್ಲಿದ್ದ ಪೊಲೀಸರು ಅಷ್ಟೇ ಅಲ್ಲದೇ, ಬೇರೆ ಬೇರೆ ಠಾಣೆಗಳ ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲೇ ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಆದರೆ, ವೆಂಕಟೇಶ್ವರ ಎಂಬಾತ ಸಿಕ್ಕು ಬಿದ್ದಿದ್ದಾನೆ. ಆತನನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ತನ್ನ ಸಹಚರರು ಇಂಡಿಸ್ಟ್ರಿಯಲ್‌ ಏರಿಯಾದಲ್ಲಿ ಇರುವುದಾಗಿ ತಿಳಿಸಿದ್ದಾನೆ. ಅಲ್ಲಿಗೆ ಆತನನ್ನು ಕರೆದುಕೊಂಡು ಹೋದ ವೇಳೆ ಪೊಲೀಸರ ಮೇಲೆಯೇ ಈತ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ ವಿದ್ಯಾಗಿರಿ ಠಾಣೆಯ ಪಿಐ ಸಂಗಮೇಶ ದಿಡಿಗನಾಳ ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಈತ ಮಾತ್ರ ತಪ್ಪಿಸಿಕೊಳ್ಳುವ ತನ್ನ ಪ್ರಯತ್ನವನ್ನು ಮುಂದುವರಿಸಿದ್ದಾನೆ. ಆಗ ಎರಡು ಕಾಲಿಗೂ ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದ್ದಾರೆ. ಈ ವೇಳೆ ಪಿಎಸ್‌ಐ ಪ್ರಮೋದ ಹಾಗೂ ಪೇದೆ ಆನಂದ ಬಡಿಗೇರ ಅವರಿಗೂ ಗಾಯಗಳಾಗಿವೆ. ಮೂವರನ್ನು ಕೆಎಂಸಿ ಆರ್‌ಐನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈತನೊಂದಿಗೆ ಗುರುತಿಸಿಕೊಂಡಿದ್ದ ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಆಮ್‌ ಆದ್ಮಿ ಪಕ್ಷ ಜಾರಿಗೊಳಿಸಲು ಉದ್ದೇಶಿಸಿರುವ ಗೃಹಲಕ್ಷ್ಮೀ ಸ್ಕೀಂ ಬಗ್ಗೆ ತನಿಖೆಗೆ ಗವರ್ನರ್‌ ಆದೇಶ

ಇಡೀ ವಂಶವೇ ಡಕಾಯತಿ: ವೆಂಕಟೇಶ್ವರ ಅಲಿಯಾಸ್‌ ಕಲ್ಯಾಣಕುಮಾರ ಎಂಬಾತ ಭಾರೀ ನಟೋರಿಯಸ್‌ ಅಪರಾಧಿ. ಈತನಷ್ಟೇ ಅಲ್ಲ. ಈತನ ವಂಶಾವಳಿಯೇ ಡಕಾಯತಿ ಮಾಡುವುದರಲ್ಲಿ ತೊಡಗಿದೆ. ಈತನ ಅಪ್ಪ, ಅಜ್ಜ, ಮುತ್ತಜ್ಜ ಎಲ್ಲರೂ ಡಕಾಯಿತಿ ಮಾಡುವವರೇ. ಈ ಗ್ಯಾಂಗ್‌ನ ಸದಸ್ಯರೆಲ್ಲರೂ ಬರೀ ಚಡ್ಡಿ, ಟಾವಲ್‌ ಹಾಕಿಕೊಂಡೇ ಡಕಾಯಿತಿ ಮಾಡುತ್ತಿದ್ದರು. ತಪ್ಪಿಸಿಕೊಳ್ಳಲು ಅನುಕೂಲವಾಗಲೆಂದು ಮೈಗೆ ಎಣ್ಣೆ ಹಚ್ಚಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಆಂಧ್ರಪ್ರದೇಶ ಸ್ಟುವಟ್‌ಪುರಂ ಎಂಬ ಗ್ಯಾಂಗ್‌ ಇದೆ. ಆ ಗ್ಯಾಂಗ್‌ನೊಂದಿಗೂ ಈತ ಗುರುತಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios