ಬೆಂಗಳೂರು (ಮಾ.31):  ಮಾಜಿ ಸಚಿವರ ಲೈಂಗಿಕ ಹಗರಣದಲ್ಲಿ ಯುವತಿ ಪ್ರತ್ಯಕ್ಷವಾದ ಬೆನ್ನಲ್ಲೇ ಸಿ.ಡಿ. ಸ್ಫೋಟದ ಗುಂಪಿನ ಶಂಕಿತ ಮಾಸ್ಟರ್‌ ಮೈಂಡ್‌ ಎನ್ನಲಾದ ಖಾಸಗಿ ಸುದ್ದಿವಾಹಿನಿ ಸ್ಟಿಂಗ್‌ ಆಪರೇಷನ್‌ ವರದಿಗಾರ ನರೇಶ್‌ ಗೌಡ ಹಾಗೂ ಆತನ ಗೆಳೆಯರ ಪತ್ತೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ.

ಸಿ.ಡಿ. ಸ್ಫೋಟವಾದ ಬಳಿಕ ಪತ್ರಕರ್ತರಾದ ನರೇಶ್‌ ಗೌಡ, ಶ್ರವಣ್‌ ಕುಮಾರ್‌ ಹಾಗೂ ಗ್ರಾನೈಟ್‌ ಉದ್ಯಮಿ ಕನಕಪುರ ತಾಲೂಕಿನ ಶಿವಕುಮಾರ್‌ ಸೇರಿದಂತೆ ಕೆಲವರು ಅಜ್ಞಾತವಾಗಿದ್ದಾರೆ. ಕಳೆದ ಇಪ್ಪತ್ತೆಂಟು ದಿನಗಳಿಂದ ಹೊರ ರಾಜ್ಯಗಳಲ್ಲಿ ಸಿ.ಡಿ. ಸ್ಫೋಟದ ತಂಡಕ್ಕೆ ಎಸ್‌ಐಟಿ ಹುಡುಕಾಟ ನಡೆಸಿದರೂ ಫಲ ದೊರೆತಿಲ್ಲ. ಈಗ ಯುವತಿ ಪ್ರತ್ಯಕ್ಷಳಾದ ಬಳಿಕ ಮತ್ತೆ ಕಾರ್ಯಾಚರಣೆಯನ್ನು ಅಧಿಕಾರಿಗಳು ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ರಮೇಶ್ ಟ್ರ್ಯಾಕ್ ಮಾಡಿದ್ದು ಯಾಕೆ..? : ಡಿಕೆಶಿ ಹೇಳಿದ ಸೀಕ್ರೆಟ್ ...

ಪ್ರಕರಣದ ಕುರಿತು ಮಂಗಳವಾರ ಪ್ರಾಥಮಿಕ ಹಂತದ ವಿಚಾರಣೆ ವೇಳೆ ನರೇಶ್‌ ಗೌಡನ ಬಗ್ಗೆ ಸಹ ಯುವತಿಯನ್ನು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಆದರೆ ಆತನ ಇರುವಿಕೆ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡದೆ ಆಕೆ ಜಾರಿಕೊಂಡಿದ್ದಾಳೆ. ಮಾಜಿ ಸಚಿವರಿಂದ ನ್ಯಾಯ ಕೊಡಿಸಲು ನನಗೆ ನರೇಶ್‌ ಗೌಡ ಸಹಾಯ ಮಾಡಿದ್ದರು ಎಂದಷ್ಟೇ ಆಕೆ ಹೇಳಿದ್ದಾಳೆ ಎನ್ನಲಾಗಿದೆ.

ಬುಧವಾರ ಮತ್ತೆ ಯುವತಿಯ ವಿಚಾರಣೆ ನಡೆಯಲಿದೆ. ಈ ವೇಳೆ ನರೇಶ್‌ ಗೌಡ ಹಾಗೂ ಶ್ರವಣ್‌ ವಿಚಾರವಾಗಿ ಅಧಿಕಾರಿಗಳು ಪ್ರಶ್ನೆಗಳನ್ನು ಹಾಕಿ ಆಕೆಯಿಂದ ಬಾಯಿ ಬಿಡಿಸುವ ಪ್ರಯತ್ನ ನಡೆಸಲಿದ್ದಾರೆ. ಒಂದು ವೇಳೆ ಏನಾದರೂ ಆಕೆ ಸುಳಿವು ನೀಡಿದರೆ ಅದನ್ನು ಆಧರಿಸಿ ಪತ್ರಕರ್ತರಿಗೆ ಎಸ್‌ಐಟಿ ಗಾಳ ಹಾಕಬಹುದು ಎನ್ನಲಾಗುತ್ತಿದೆ.