ಬೆಂಗಳೂರು (ಮಾ.28) :  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರದ್ದು ಅವರ ವೈಯಕ್ತಿಕ ಸಮಸ್ಯೆ. ಅದನ್ನು ಅವರೇ ಸರಿ ಮಾಡಿಕೊಳ್ಳಬೇಕು. ನನಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಎಲ್ಲವೂ ತನಿಖೆಯಾಗಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಆದರೆ, ‘ಸಂತ್ರಸ್ತ ಯುವತಿ’ ತಮ್ಮನ್ನು ಭೇಟಿ ಮಾಡಲು ಯತ್ನಿಸಿದ್ದು ನಿಜ ಹಾಗೂ ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವ ಪತ್ರಕರ್ತ ನರೇಶ್‌ ತಮಗೆ ಗೊತ್ತು ಎಂದು ಒಪ್ಪಿಕೊಂಡಿದ್ದಾರೆ.

ಸಿ.ಡಿ. ಹಿಂದಿನ ಮಹಾನ್‌ನಾಯಕ ಡಿ.ಕೆ. ಶಿವಕುಮಾರ್‌ ಅವರೇ ಎಂದು ರಮೇಶ್‌ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಸುದ್ದಿಗಾರರ ಮುಂದೆ ಪ್ರತಿಕ್ರಿಯಿಸಿರುವ ಅವರು, ನಾನು ಆ ಯುವತಿಯನ್ನು ಭೇಟಿಯೇ ಮಾಡಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅವರದ್ದೇ ಸರ್ಕಾರವಿದೆ, ಅಧಿಕಾರಿಗಳಿದ್ದಾರೆ ತನಿಖೆ ಮಾಡಲಿ. ಯಾರದ್ದು ತಪ್ಪಿದೆಯೋ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.

ಅಂದು ಗೊತ್ತು ಅಂದರು, ಇಂದು ಇಲ್ಲ ಎಂದ್ರು.. ಏನ್ ಕತೆ! ...

‘ಪಾಪ ರಮೇಶ್‌ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ. ಹೀಗಾಗಿ ನನ್ನ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರಬಹುದು. ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ಸಮಸ್ಯೆ ಇದೆ ಎಂದು ಕಾಣುತ್ತದೆ. ಹೀಗಾಗಿ ಹಾಗೆ ಮಾತನಾಡಿದ್ದಾರೆ. ಅವರ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ಳಬೇಕು’ ಎಂದರು.

ನರೇಶ್‌ ನನಗೆ ಬೇಕಾದ ಹುಡುಗ- ಡಿಕೆಶಿ:

‘ಸಿ.ಡಿ. ಪ್ರಕರಣದ ಸಂತ್ರಸ್ತೆ ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರುವುದು ಸತ್ಯ. ಆದರೆ, ಭೇಟಿಯಾಗಿಲ್ಲ. ನರೇಶ್‌ ಸಹ ನನಗೆ ಗೊತ್ತಿರುವ ಹಾಗೂ ಬೇಕಾದ ಹುಡುಗ. ನಾನು ಅವರ ಮನೆಗೂ ಹೋಗಿದ್ದೇನೆ. ಆತ ನನ್ನೊಂದಿಗೆ ಹಲವು ವಿಚಾರಗಳನ್ನೂ ಸಹ ಹಂಚಿಕೊಂಡಿದ್ದ’ ಎಂದು ಶಿವಕುಮಾರ್‌ ಹೇಳಿದರು.

‘ಸಮಸ್ಯೆ ಹೇಳಿಕೊಂಡು ಹಲವರು ನಮ್ಮ ಮನೆ ಬಳಿ ಬರುತ್ತಾರೆ. ಅದೇ ರೀತಿ ಆ ಯುವತಿ ನಮ್ಮ ಬಳಿ ಬಂದಿರಬಹುದು. ಆದರೆ, ನಾನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ಆಕೆ ಬಂದು ಸಹಾಯ ಕೇಳಿದರೂ ನಾನು ಪರಿಶೀಲನೆ ಮಾಡುತ್ತೇನೆ’ ಎಂದರು.

ಜಾರಕಿಹೊಳಿ ಟ್ರ್ಯಾಕ್‌ ಮಾಡಿದ್ದು ಸತ್ಯ:  ‘ರಮೇಶ್‌ ಜಾರಕಿಹೊಳಿ ಅವರು ಕಾಂಗ್ರೆಸ್‌ನ 5 ಶಾಸಕರನ್ನು ಸೆಳೆಯುವುದಾಗಿ ಬಹಿರಂಗ ಸವಾಲು ಹಾಕಿದ್ದರು. ನಮ್ಮ ಶಾಸಕರನ್ನು ಸೆಳೆಯುತ್ತೇವೆ ಎಂದಾಗ ನಾವು ಅವರನ್ನು ಟ್ರ್ಯಾಕ್‌ ಮಾಡಿದ್ದು ನಿಜ. ಯಾರು ಯಾರ ಜತೆ ಮಾತನಾಡುತ್ತಿದ್ದಾರೆ, ಎಲ್ಲಿ ಹೋಗುತ್ತಿದ್ದಾರೆ ಎಂದು ಗಮನಿಸಿದ್ದೆವು. ಆದರೆ, ಅವರ ವೈಯಕ್ತಿಕ ವಿಚಾರಗಳ ಅವಶ್ಯಕತೆ ನಮಗಿಲ್ಲ’ ಎಂದು ಹೇಳಿದರು.

‘ಸಂತ್ರಸ್ತೆಯ ಪೋಷಕರಿಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಅವರಿಗೆ ಅವರದೇ ಆದ ಘನತೆ ಇದೆ. ಅವರು ಸೂಕ್ತ ರಕ್ಷಣೆ ನೀಡುತ್ತಾರೆ’ ಎಂದು ಆಗ್ರಹಿಸಿದರು.