ಬೆಂಗಳೂರು(ಆ.05): ಅಕ್ರಮ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ನಗರದ ಪೂರ್ವ ವಲಯದ ವ್ಯಾಪ್ತಿಯಲ್ಲಿ ಆಫ್ರಿಕಾ ಪ್ರಜೆಗಳ ನೆಲೆಗಳ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಮಹಿಳೆ ಸೇರಿದಂತೆ 20 ಮಂದಿಯನ್ನು ಬಂಧಿಸಿದ್ದಾರೆ.

ನೈಜೀರಿಯಾದ ಕ್ಲೈಮೆಂಟ್‌, ಓಕೆಫೆ ಹಾಗೂ ಸ್ಥಳೀಯ ಮಹಿಳೆ ವಸಂತಿ ಬಂಧಿತರು. ಆರೋಪಿಗಳಿಂದ ಭಾರತದ ರುಪಾಯಿ, ಅಮೆರಿಕನ್‌ ಡಾಲರ್‌, ಯುಕೆ ಪೌಂಡ್‌ ಸೇರಿದಂತೆ ಇತರೆ ದೇಶಗಳ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಇನ್ನುಳಿದ 17 ಮಂದಿ ಅಕ್ರಮವಾಗಿ ನೆಲೆಸಿದ್ದರು ಎಂದು ಜಂಟಿ ಆಯುಕ್ತರು (ಅಪರಾಧ) ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ನಟ ದರ್ಶನ್‌ ಸಂಬಂಧಿ ಸೋಗಿನಲ್ಲಿ ಜನರಿಗೆ ವಂಚನೆ: ಕಿಡಿಗೇಡಿ ಬಂಧನ

ಕೆಲ ದಿನಗಳಿಂದ ಕೊತ್ತನೂರು, ಬಾಗಲೂರು, ಸಂಪಿಗೆಹಳ್ಳಿ ಹಾಗೂ ಹೆಣ್ಣೂರು ವ್ಯಾಪ್ತಿಯಲ್ಲಿ ಆಫ್ರಿಕನ್‌ ಪ್ರಜೆಗಳ ವಿರುದ್ಧ ಕಿರುಕುಳ ನೀಡುತ್ತಿರುವ ಬಗ್ಗೆ ಸ್ಥಳೀಯರಿಂದ ನಿರಂತರ ದೂರುಗಳು ಬಂದಿದ್ದವು. ಅಲ್ಲದೆ ಸೈಬರ್‌ ವಂಚನೆ, ಮಾದಕ ವಸ್ತು ಮಾರಾಟ ಜಾಲ ಹಾಗೂ ಖೋಟಾ ನೋಟು ದಂಧೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಹ ಆಫ್ರಿಕಾ ಪ್ರಜೆಗಳು ತೊಡಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಆಫ್ರಿಕನ್‌ ನೆಲೆಗಳ ಮೇಲೆ ದಾಳಿಗೆ ನಿರ್ಧರಿಸಿದ್ದರು.

ಅಂತೆಯೇ ಹೆಣ್ಣೂರು, ಬಾಗಲೂರು, ಕೊತ್ತನೂರು ಹಾಗೂ ಸಂಪಿಗೆಹಳ್ಳಿ ಸರಹದ್ದಿನಲ್ಲಿ ಮುಂಜಾನೆ 5 ಗಂಟೆಗೆ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಕುಲದೀಪ್‌ ಜೈನ್‌ ಮತ್ತು ಕೆ.ಪಿ.ರವಿಕುಮಾರ್‌ ನೇತೃತ್ವದಲ್ಲಿ 5 ಎಸಿಪಿ ಹಾಗೂ 18 ಜನ ಇನ್ಸ್‌ಪೆಕ್ಟರ್‌ಗಳು ಒಳಗೊಂಡಂತೆ 120ಕ್ಕೂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಈ ದಾಳಿ ವೇಳೆ 34 ಮನೆಗಳನ್ನು ತಪಾಸಣೆ ನಡೆಸಿದ ಪೊಲೀಸರು, 85 ವಿದೇಶಿ ಪ್ರಜೆಗಳನ್ನು ವಿಚಾರಣೆಗೊಳಪಡಿಸಿದ್ದರು.
ವಿದೇಶಿಯರ ಮನೆಗಳಲ್ಲಿ ಸಿಕ್ಕಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ 17 ಮಂದಿ ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದ್ದು, ಅಂತಹವರ ಮೇಲೆ ಸ್ಥಳೀಯ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ವಿದೇಶಿಯ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ)ಗೆ ಕೂಡಾ ವರದಿ ಸಲ್ಲಿಸಲಾಗುತ್ತದೆ ಎಂದು ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.

ಹೆಣ್ಣೂರು ಸಮೀಪ ಆಫ್ರಿಕನ್‌ ಪ್ರಜೆಗಳು ವಾಸವಾಗಿದ್ದ ಮನೆಯೊಂದರಲ್ಲಿ ಭಾರತ ಕರೆನ್ಸಿ ಸೇರಿದಂತೆ ವಿವಿಧ ದೇಶಗಳ ಖೋಟಾ ನೋಟುಗಳು ಪತ್ತೆಯಾಗಿವೆ. ಈ ಪ್ರಜೆಗಳ ಜತೆ ಭಾರತೀಯ ಮಹಿಳೆ ಸಹ ವಾಸವಾಗಿದ್ದಳು. ಆಕೆಯ ಪೂರ್ವಾಪರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

ಖೋಟಾ ನೋಟು ದಂಧೆಯಲ್ಲಿ ವಿದೇಶಿ ಪ್ರಜೆಗಳ ಜತೆ ಪತ್ತೆಯಾದ ಭಾರತೀಯ ಮಹಿಳೆ ಪೂರ್ವಾಪರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿದೇಶಿಯರು ಅಕ್ರಮ ಕೃತ್ಯ ಹಾಗೂ ಗೂಂಡಾಗಿರಿ ನಡೆಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಅವರು ತಿಳಿಸಿದ್ದಾರೆ.

ನೋಟುಗಳಲ್ಲ ಜೆರಾಕ್ಸ್‌ ಪ್ರತಿಗಳು

ವಿದೇಶಿಯರ ಮನೆಗಳಲ್ಲಿ ಪತ್ತೆಯಾದ ಖೋಟಾ ನೋಟುಗಳು ಜೆರಾಕ್ಸ್‌ ಪ್ರತಿಗಳಾಗಿವೆ. ಅಸಲಿ ನೋಟು ಮತ್ತು ಡಾಲರ್‌ಗಳನ್ನು ಕಲರ್‌ ಜೆರಾಕ್ಸ್‌ ಮಾಡಿ ಚಲಾವಣೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಆದರೆ ಇದಕ್ಕೂ ಮುನ್ನ ಚಲಾವಣೆ ಮಾಡಿದ್ದರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.