ಬೆಂಗಳೂರು(ಆ.01): ನಗರ ಪೊಲೀಸ್‌ ಆಯುಕ್ತರ ಆಪ್ತ ಸಹಾಯಕ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಂಬಂಧಿ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

"

ಮಳವಳ್ಳಿ ತಾಲೂಕಿನ ಕಿರಣ್‌ಗೌಡ ಅಲಿಯಾಸ್‌ ಶ್ರೀನಿವಾಸ್‌ ಬಂಧಿತನಾಗಿದ್ದು, ಆರೋಪಿಯಿಂದ ಹಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತನ್ನ ಸ್ನೇಹಿತರ ಮೂಲಕ ಕಿರಣ್‌ಗೌಡನಿಗೆ ಉದ್ಯಮಿ ಮನೋಹರ್‌ ಪರಿಚಯವಾಗಿತ್ತು. ಉದ್ಯಮದ ಸಮಸ್ಯೆಗಳ ಬಗ್ಗೆ ಮನೋಹರ್‌ ಹೇಳಿಕೊಂಡಿದ್ದರು. ಬಳಿಕ ಕಿರಣ್‌, ನಾನು ಪೊಲೀಸ್‌ ಕಮೀಷನರ್‌ ಭಾಸ್ಕರ್‌ ರಾವ್‌ ಅವರ ಆಪ್ತ ಸಹಾಯಕ. ನಿಮಗೆ ಸಹಾಯ ಮಾಡುತ್ತೇನೆಂದು ಹೇಳಿ ಕಂಪನಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದ. ತರುವಾಯ ನಿಮ್ಮ ವಿರುದ್ಧ ಆಯುಕ್ತರಿಗೆ ಸಾಲಗಾರರು ದೂರು ಕೊಟ್ಟಿದ್ದಾರೆ. 2 ಲಕ್ಷ ನೀಡಿದರೆ ಪ್ರಕರಣಗಳನ್ನು ಮುಚ್ಚಿ ಹಾಕುತ್ತೇವೆ ಎಂದು ಉದ್ಯಮಿಗೆ ಆರೋಪಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿರಣ್‌ ಮಾತುಗಳಿಂದ ಅನುಮಾನಗೊಂಡ ಮನೋಹರ್‌, ಭಾಸ್ಕರ್‌ ರಾವ್‌ ಅವರನ್ನೇ ನೇರವಾಗಿ ಭೇಟಿಯಾಗಿ ದೂರು ಕೊಟ್ಟಿದ್ದರು.

ಹಳೇ ನೋಟು ವಿನಿಮಯ ನೆಪದಲ್ಲಿ ವಂಚನೆ: ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು

ದರ್ಶನ್‌ ಹೆಸರಿನಲ್ಲಿ ಮಹಿಳೆಯರಿಗೆ ಗಾಳ:

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅವರ ಸೋದರ ಸಂಬಂಧಿ ಎಂದು ಹೇಳಿಕೊಂಡು ಕಿರಣ್‌ ವಂಚಿಸಿರುವ ಸಂಗತಿ ಸಹ ಸಿಸಿಬಿ ತನಿಖೆ ಬೆಳಕಿಗೆ ಬಂದಿದೆ. ತಾನು ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ನನಗೆ ಸ್ಟಾರ್‌ ನಟರು, ನಿರ್ಮಾಪಕರ ಜತೆ ಸ್ನೇಹವಿದೆ. ನಿಮಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಸಹ ಯುವತಿಯರಿಗೆ ಮೋಸ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ.