ಬೆಂಗಳೂರು(ಮಾ.13): ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಕೊಡಿಸಲು 5 ಕೋಟಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದ ಪಿ.ಡಿ.ಕುಮಾರ್‌ ಸೇರಿದಂತೆ ಆರು ಮಂದಿ ಮತ್ತು ಐಎಂಎ ಕಂಪನಿ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ.

ಹಗರಣದಲ್ಲಿ ಪಿ.ಡಿ.ಕುಮಾರ್‌ ಪಾತ್ರದ ಕುರಿತು ಸವಿವರವಾಗಿ ಚಾಜ್‌ರ್‍ಶೀಟ್‌ನಲ್ಲಿ ವಿವರಿಸಲಾಗಿದೆ. ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿ.ಡಿ.ಕುಮಾರ್‌, ಐಎಂಎ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹ್ಮದ್‌ ಮನ್ಸೂರ್‌ ಖಾನ್‌, ನಿರ್ದೇಶಕರಾದ ನಜಮುದ್ದೀನ್‌ ಅಹ್ಮದ್‌, ವಾಸೀಂ, ನವೀದ್‌ ಆಹ್ಮದ್‌, ನಜಿರ್‌ ಹುಸೇಸ್‌ ಮತ್ತು ಐಎಂಎ ಕಂಪನಿ ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ.

ಕಂದಾಯ ಇಲಾಖೆಯಿಂದ ಐಎಂಎ ಪರವಾಗಿ ನಿರಪೇಕ್ಷಣಾ ಪತ್ರ ಕೊಡಿಸಲು ನಾಲ್ಕು ಕಂತುಗಳಲ್ಲಿ ಆರೋಪಿ ಪಿ.ಡಿ.ಕುಮಾರ್‌ .5 ಕೋಟಿ ಲಂಚ ಸ್ವೀಕರಿಸಿದ್ದ. 2019 ಏಪ್ರಿಲ್‌-ಮೇ ತಿಂಗಳಲ್ಲಿ ಎರಡು ಬಾರಿ ಒಂದೂವರೆ ಕೋಟಿ ರು. ಮತ್ತು ಎರಡು ಬಾರಿ ಒಂದು ಕೋಟಿ ರು.ಗಳನ್ನು ಐಎಂಎ ವ್ಯವಸ್ಥಾಪಕ ನಿರ್ದೇಶಕ ಮೇರೆಗೆ ಪಾವತಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಐಎಂಎ ಹೂಡಿಕೆದಾರರಿಗೆ ಇಂದಿನಿಂದ ಹಣ ಜಮೆ

ಬೆಂಗಳೂರು ನಗರ ಜಿಲ್ಲೆಯ ಉತ್ತರ ವಿಭಾಗದ ಸಹಾಯಕ ಆಯಕ್ತರು ‘ಐಎಂಎ ಕಂಪನಿಯು ಅವ್ಯವಹಾರ ನಡೆಸುತ್ತಿಲ್ಲ’ ಎಂಬ ವರದಿ ನೀಡಲಾಗಿತ್ತು. ಆ ವರದಿಯ ಆಧಾರದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಕಂಪನಿಯ ಪರವಾಗಿ ನಿರಪೇಕ್ಷಣಾ ಪತ್ರ ಕೊಡಿಸುವುದಾಗಿ ಹೇಳಿ ಪಿ.ಡಿ.ಕುಮಾರ್‌ ಹಣ ಪಡೆದುಕೊಂಡಿದ್ದ. ಆದರೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಿಸಿದ್ದರು. ಅಲ್ಲದೆ, ವರದಿಯ ಕುರಿತು ಕಾನೂನು ಇಲಾಖೆಯ ಅಭಿಪ್ರಾಯಕ್ಕಾಗಿ ಕಳುಹಿಸಿಕೊಟ್ಟಿದ್ದರು. ಮತ್ತು ಕಂಪನಿಯ ವಿರುದ್ಧ ಹೆಚ್ಚಿನ ತನಿಖೆ ನಡೆಸಬೇಕು ಎಂದು ಪೊಲೀಸ್‌ ಇಲಾಖೆಯನ್ನು ಕೋರಿದ್ದರು.

ಕಂದಾಯ ಇಲಾಖೆಯು ಕಂಪನಿ ಪರವಾಗಿ ನಿರಪೇಕ್ಷಣಾ ಪತ್ರ ನೀಡದಿದ್ದಾಗ ಪಡೆದಿದ್ದ ಹಣವನ್ನು ವಾಪಸ್‌ ನೀಡುವಂತೆ ಪಿ.ಡಿ.ಕುಮಾರ್‌ಗೆ ಐಎಂಎ ಕಂಪನಿಯ ನಿರ್ದೇಶಕರು ಒತ್ತಾಯಿಸಿದ್ದರು. 30 ಲಕ್ಷ ಹಿಂತಿರುಗಿಸಿದ ಕುಮಾರ್‌, ಉಳಿದ ಹಣವನ್ನು ನಗದು ರೂಪದಲ್ಲಿ ಹಿಂದಿರುಗಿಸುವವರೆಗೆ ಭದ್ರತೆಯ ದೃಷ್ಟಿಯಿಂದ ಎರಡು ಕೋಟಿ ರು. ಮತ್ತು ಎರಡೂವರೆ ಕೋಟಿ ರು. ಮೊತ್ತದ ಚೆಕ್‌ಗಳನ್ನು ಪಡೆದುಕೊಳ್ಳಲಾಗಿತ್ತು. ಆ ಚೆಕ್‌ಗಳನ್ನು ಸಿಬಿಐ ಅಧಿಕಾರಿಗಳ ತನಿಖೆಯ ಸಮಯದಲ್ಲಿ ಮರು ಪಡೆಯಲಾಗಿದೆ. ಕುಮಾರ್‌ ಮತ್ತು ನಿರ್ದೇಶಕರ ನಡುವೆ ಹಲವು ವಾಟ್ಸಾಪ್‌ ಚಾಟ್‌ಗಳು ಸೇರಿದಂತೆ ಹಲವಾರು ಸಾಕ್ಷಿಗಳನ್ನು ಸಿಬಿಐ ಕಲೆಹಾಕಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈಗಾಗಲೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ಕು ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದೆ.