ಬೆಂಗಳೂರು(ಮಾ.12): ನಗರದ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದ ಹೂಡಿಕೆದಾರರಿಗೆ ಕಂಪನಿಯಿಂದ ಜಪ್ತಿ ಮಾಡಲಾದ ಚಿನ್ನಾಭರಣ ಹಾಗೂ ಆಸ್ತಿ ಮಾರಾಟದಿಂದ ಬಂದ ಹಣವನ್ನು ಮಾ.12ರಿಂದ ಗ್ರಾಹಕರಿಗೆ ನೀಡಲು ರಾಜ್ಯ ಸರ್ಕಾರ ನೇಮಿಸಿದ ಸಕ್ಷಮ ಪ್ರಾಧಿಕಾರ ಮುಂದಾಗಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಆದೇಶದಂತೆ ವಂಚನೆಗೆ ಒಳಗಾದ ಠೇವಣಿದಾರರಿಗೆ ಗರಿಷ್ಠ 50 ಸಾವಿರ ಹಂಚಿಕೆ ಆಗಲಿದೆ. ಅತಿ ಕಡಿಮೆ ಹಣ ಕಳೆದುಕೊಂಡಿರುವವರ ಖಾತೆಗೆ ಮೊದಲು ಹಣ ಜಮೆ ಆಗಲಿದೆ. 50 ಸಾವಿರಕ್ಕಿಂತ ಕಡಿಮೆ ಹಣ ವಂಚನೆಗೆ ಒಳಗಾದವರ ಕ್ಲೈಮ್‌ ಅರ್ಜಿಗಳನ್ನು ಮೊದಲು ಇತ್ಯರ್ಥಪಡಿಸಲಿದೆ ಎಂದು ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷ ಗುಪ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲ ಅರ್ಜಿದಾರರು ಈಗಾಗಲೇ ಹೂಡಿಕೆ ಮಾಡಿದ ಹಣಕ್ಕಿಂತ ಅಧಿಕ ಲಾಭಾಂಶ ಪಡೆದಿದ್ದು, ಹೂಡಿಕೆ ಮೊತ್ತದಲ್ಲಿ ಹೊಂದಾಣಿಕೆ ಮಾಡಿಕೊಂಡು ಲೆಕ್ಕ ಹಾಕಲಾಗುತ್ತದೆ. ಅಂತಹವರಿಗೆ ಹಣ ಪಾವತಿಸಲಾಗುವುದಿಲ್ಲ. ಪ್ರಸ್ತುತ 5 ಕೋಟಿ ಇದ್ದು, ಕ್ಲೈಮ್‌ದಾರರ ಬ್ಯಾಂಕ್‌ ಖಾತೆಗೆ ಮಾ.12ರಿಂದ ಹಣ ಜಮೆ ಪ್ರಕ್ರಿಯೆ ಆರಂಭವಾಗಲಿದೆ. ಜಮೆ ಆಗುತ್ತಿದ್ದಂತೆ ಠೇವಣಿದಾರರ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ. ಪ್ರಾಧಿಕಾರ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಪರಿಶೀಲಿಸಬಹುದು.

IMA ಹಗರಣದಲ್ಲಿ ಮನ್ಸೂರ್ ಖಾನ್‌ನಿಂದ ಕೋಟಿ ಕೋಟಿ ಹಣ ಪಡೆದ್ರಾ ಮಾಜಿ ಮುಖ್ಯಮಂತ್ರಿಗಳು.?

ಹೆಚ್ಚುವರಿ ದೃಢೀಕರಣ ಮಾಡಲು ಅರ್ಜಿದಾರರು ಆಧಾರ್‌ ಸಂಖ್ಯೆ ಹೊಂದಿರದಿದ್ದರೆ ಅಥವಾ ಐಎಂಎ ಬ್ಯಾಂಕ್‌ ಖಾತೆ ಚಾಲ್ತಿಯಲ್ಲಿರದಿದ್ದರೆ, ಆ ಅರ್ಜಿದಾರರು ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪಾನ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್‌ ಪಾಸ್‌ ಪುಸ್ತಕ ಇತ್ಯಾದಿಗಳೊಂದಿಗೆ ಸಕ್ಷಮ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಬಹುದು.

ಎಲ್ಲಾ ಅರ್ಜಿದಾರರಿಗೆ ಏಕ ಕಾಲದಲ್ಲಿ ಹಣ ಪಾವತಿ ಮಾಡಲಾಗುವುದಿಲ್ಲ. ಸಕ್ಷಮ ಪ್ರಾಧಿಕಾರಿಯವರಲ್ಲಿ ಲಭ್ಯವಿರುವ ಮೊತ್ತಕ್ಕೆ ಅನುಗುಣವಾಗಿ ಠೇವಣಿದಾರರಿಗೆ ಪಾವತಿ ಮಾಡಲಾಗುವುದು. ಸಕ್ಷಮ ಪ್ರಾಧಿಕಾರಿಯವರಲ್ಲಿ ಹೆಚ್ಚಿನ ಹಣ ಲಭ್ಯವಾದಂತೆ ಉಳಿದ ಠೇವಣಿದಾರರಿಗೆ ಆಗ್ಗಾಗ್ಗೆ ಪಾವತಿ ಮಾಡಲಾಗುತ್ತದೆ.

ಅರ್ಜಿದಾರರು ತಮ್ಮ ಕ್ಲೈಮು ಪರಿಶೀಲನೆ ಮತ್ತು ಪಾವತಿಗೆ ಸಂಬಂಧಿಸಿದ ಮಾಹಿತಿಯನ್ನು imaclaims.karnataka.gov.in ವೆಬ್‌ಸೈಟ್‌ನಲ್ಲಿ online Claim Information Menu Button Click ಮಾಡಿದ ಬಳಿಕ Know Your Claim Status ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಿಳಿದುಕೊಳ್ಳಬಹುದು. ವಿವರಗಳಿಗೆ ಸಹಾಯವಾಣಿ (080-46885959) ಸಂಪರ್ಕಿಸಬಹುದು.