100 ಕೋಟಿಗೆ ಗೌರ್ನರ್, ಎಂಪಿ ಸ್ಥಾನ: ವಂಚನೆ ಸಂಚು ಬಯಲು!
ಸಿಬಿಐನಿಂದ ನಾಲ್ಕು ರಾಜ್ಯಗಳಲ್ಲಿ ಭರ್ಜರಿ ಬೇಟೆ
ಬೆಳಗಾವಿಯ ರವೀಂದ್ರ ನಾಯಕ್ ಸೇರಿ ನಾಲ್ವರ ಬಂಧನ
ಸಿಬಿಐನಿಂದ ನಕಲಿ ಸಿಬಿಐ ಅಧಿಕಾರಿಗಳು ಬಲೆಗೆ
ನವದೆಹಲಿ ( ಜುಲೈ 26): 100 ಕೋಟಿ ಕೊಟ್ಟರೆ ರಾಜ್ಯಪಾಲರ ಹುದ್ದೆ ಹಾಗೂ ರಾಜ್ಯಸಭೆ ಸದಸ್ಯ ಸ್ಥಾನ ಕಲ್ಪಿಸಿಕೊಡುವ ಆಮಿಷವೊಡ್ಡಿ ಭಾರೀ ವಂಚನೆಗೆ ಸಂಚು ರೂಪಿಸಿದ್ದ ಜಾಲವೊಂದನ್ನು ಸಿಬಿಐ ಭೇದಿಸಿದೆ. ಕರ್ನಾಟಕ, ದೆಹಲಿ, ಯುಪಿ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು, ಈ ದಂಧೆ ಸಂಬಂಧ ಬೆಳಗಾವಿಯ ವ್ಯಕ್ತಿಯೊಬ್ಬ ಸೇರಿದಂತೆ ನಾಲ್ವರನ್ನು ಬಂಧಿಸಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗೆ ಬಲೆ ಬೀಸಿದೆ. ಈ ಜಾಲವು ಕೇವಲ ಈ ರೀತಿಯ ವಂಚನೆಯಷ್ಟೇ ಅಲ್ಲ, ತಾವು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ತಮಗೆ ಬೇಕಾದವರನ್ನು ಪ್ರಕರಣಗಳಿಂದ ಮುಕ್ತಗೊಳಿಸುವ ಕೆಲಸಗಳನ್ನೂ ಮಾಡುತ್ತಿತ್ತು ಎಂದು ಗೊತ್ತಾಗಿದೆ. ಬಂಧಿತರನ್ನು ಮಹಾರಾಷ್ಟ್ರದ ಲಾತೂರಿನ ಕಮಲಾಕರ ಬಂಡಗಾರ್, ಬೆಳಗಾವಿಯ ರವೀಂದ್ರ ವಿಠ್ಠಲ ನಾಯಕ್, ದಿಲ್ಲಿಯ ಮಹೇಂದ್ರ ಪಾಲ್ ಆರೋರಾ ಹಾಗೂ ಅಭಿಷೇಕ್ ಬೋರಾ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಮೊಹಮ್ಮದ್ ಅಯಾಜ್ ಖಾನ್, ಬಂಧಿಸಲು ಬಂದ ಸಿಬಿಐ ಅಧಿಕಾರಿಗಳ ಮೇಲೇ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಆತನ ಮೇಲೆ ಪ್ರತ್ಯೇಕ ಹಲ್ಲೆ ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ.
ವಂಚನೆ ಹೇಗೆ ಮಾಡುತ್ತಿದ್ದರು?: ಈ ವಂಚಕರ ಜಾಲಕ್ಕೆ ಲಾತೂರಿನ ಕಮಲಾಕರ ಬಂಡಗಾರ್ ಮುಖ್ಯಸ್ಥ. ಈತ ತನ್ನನ್ನು ತಾನು ‘ಸಿಬಿಐ ಅಧಿಕಾರಿ’ ಎಂದೂ ಹೇಳಿಕೊಳ್ಳುತ್ತಿದ್ದ. ತನಗೆ ಪ್ರಭಾವಿಗಳ ಪರಿಚಯವಿದೆ. ಬೇಕಾದ ಕೆಲಸ ಮಾಡಿಸಿಕೊಡುವೆ ಎಂದೂ ಜನರನ್ನು ಹಾಗೂ ರಾಜಕಾರಣಿಗಳನ್ನು ನಂಬಿಸುತ್ತಿದ್ದ. ಈತ ತನ್ನ ಅಧೀನದಲ್ಲಿ ಕೆಲಸ ಮಾಡುವ ರವೀಂದ್ರ ವಿಠ್ಠಲ ನಾಯಕ್ ಸೇರಿದಂತೆ ನಾಲ್ವರಿಗೆ, ‘ಯಾರಾದರೂ ರಾಜ್ಯಸಭೆ, ರಾಜ್ಯಪಾಲ, ಕೇಂದ್ರ ಸರ್ಕಾರದ ಅಧೀನದ ನಿಗಮ-ಮಂಡಳಿಗಳ ಆಕಾಂಕ್ಷಿಗಳು ಇದ್ದರೆ ಹುಡುಕಿ. ಅವರಿಂದ ಹಣ ಪೀಕೋಣ’ ಎಂದು ಸೂಚಿಸಿ ಸಂಚು ರೂಪಿಸುತ್ತಿದ್ದ.
ಆಕಾಂಕ್ಷಿಗಳನ್ನು ಆಗ ಸಂಪರ್ಕಿಸುತ್ತಿದ್ದ ಬಂಡಗಾರ್‌ನ ಸಹಚರರು, ‘ನೇರವಾಗಿ ಬಂದು 100 ಕೋಟಿ ಕೊಡಿ. ಅಥವಾ ಮಧ್ಯವರ್ತಿ ಅಭಿಷೇಕ್ ಬೋರಾ ಮೂಲಕ ಕೊಡಿ’ ಎಂದು ನಂಬಿಸುತ್ತಿದ್ದರು. ಇಂಥದ್ದೇ ಒಂದು ಸಂಚು ರೂಪಿಸಿದಾಗ ಸಿಬಿಐಗೆ ಇವರು ಮಾಡುತ್ತಿದ್ದ ಕೆಲಸದ ಸುಳಿವು ಸಿಕ್ಕಿದೆ. ಆರೋಪಿಗಳ ಫೋನನ್ನು ಕದ್ದಾಲಿಸಿದ ಸಿಬಿಐ, ಬಂಡಗಾರ್, ನಾಯಕ್ ಸೇರಿ ನಾಲ್ವರನ್ನು ಬಂಧಿಸಿದೆ. ರಾಜ್ಯಸಭೆ ಸ್ಥಾನಕ್ಕಾಗಿ 100 ಕೋಟಿ ರು. ನಡೆದ ಡೀಲ್ ಅದು ಎಂದು ಬೆಳಕಿಗೆ ಬಂದಿದೆ. ಇದನ್ನು ಸಿಬಿಐ, ಎಫ್‌ಐಆರ್‌ನಲ್ಲಿ ದಾಖಲಿಸಿದೆ.
CRIME NEWS: ಇಬ್ಬರು ರೌಡಿಶೀಟರ್‌ಗಳ ಮೇಲೆ ಬಿತ್ತು ಗೂಂಡಾ ಕಾಯ್ದೆ!
100 ಕೋಟಿ ರೂಪಾಯಿ ಬೇಡಿಕೆ: ಇದಲ್ಲದೆ, ರಾಜ್ಯಪಾಲ ಹುದ್ದೆ, ಕೇಂದ್ರ ಸರ್ಕಾರದ ಅಧೀನದ ನಿಗಮ-ಮಂಡಳಿ, ವಿವಿಧ ಮಹತ್ವದ ಹುದ್ದೆಗಳಿಗೆ ಈ ತಂಡ 100 ಕೋಟಿ ರು. ಬೇಡಿಕೆ ಇರಿಸುತ್ತಿತ್ತು. ಈ ಮೂಲಕ ವಂಚನೆಗೆ ಸಂಚು ರೂಪಿಸಿತ್ತು. ತಾನು ಸಿಬಿಐ ಅಧಿಕಾರಿ ಎಂದು ಸುಳ್ಳು ಹೇಳಿ ಪೊಲೀಸ್ ಠಾಣೆಗಳನ್ನು ಸಂಪರ್ಕಿಸುತ್ತಿದ್ದ ಬಂಡಗಾರ್, ಬೇಕಾದವರನ್ನು ಕೇಸ್‌ನಿಂದ ಬಿಡುಗಡೆ ಮಾಡಿಸುತ್ತಿದ್ದ ಎಂದೂ ತಿಳಿದುಬಂದಿದೆ.
'ಪ್ರವಾದಿ ನಿಂದಕರಿಗೆ ಶಿರಚ್ಛೇದನವೇ ಶಿಕ್ಷೆ': ಮಗನ ಸಾವಿನ ಗಂಟೆಗಳ ಮುಂಚೆ ತಂದೆಗೆ ಸಂದೇಶ
ಹಲವು ಎಫ್ಐಆರ್: ಪ್ರಕರಣದಲ್ಲಿ ಒಟ್ಟು 5 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಸಿಬಿಐ 7 ಕಡೆ ದಾಳಿ ನಡೆಸಿದೆ. ದಾಳಿ ವೇಳೆ ಹಲವು ಪ್ರಮುಖ ದಾಖಲೆಗಳು ಪತ್ತೆಯಾಗಿದ್ದು, ಈ ದಾಖಲೆಗಳ ತನಿಖೆ ಕಾರ್ಯ ನಡೆಯುತ್ತಿದೆ. 100 ಕೋಟಿ ವಂಚನೆ ಮಾಡುವುದೇ ಜನರ ಉದ್ದೇಶ ಎಂದು ಸಿಬಿಐನ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ದಾಳಿಯ ವೇಳೆ ಸಿಬಿಐಗೆ ಹಲವು ವಾಟ್ಸ್ ಆಪ್ ಚಾಟ್ ಗಳು ಬಂದಿದ್ದು, ತನಿಖೆ ನಡೆಯುತ್ತಿದೆ. ಸಿಬಿಐ ಪ್ರಕಾರ, ಈ ಪ್ರಕರಣದಲ್ಲಿ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಇದರೊಂದಿಗೆ ಎಷ್ಟು ಮಂದಿ ಈ ಜನರಿಗೆ ಎಷ್ಟು ರೂಪಾಯಿ ವಂಚಿಸಿದ್ದಾರೆ ಎನ್ನುವುದು ಖಚಿತವಾಗಲಿದೆ.
ಹೇಗಿತ್ತು ಸಂಚು?
- ಲಾತೂರಿನ ಕಮಲಾಕರ ಬಂಡಗಾರ್ ಇದರ ಕಿಂಗ್‌ಪಿನ್
- ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ
- ಪ್ರಭಾವಿಗಳು ಗೊತ್ತಿದ್ದಾರೆ, ಕೆಲಸ ಆಗುತ್ತದೆ ಎನ್ನುತ್ತಿದ್ದ
- ಇಂಥದ್ದೇ ಸಂಚು ರೂಪಿಸುತ್ತಿದ್ದಾಗ ಸಿಬಿಐಗೆ ಸುಳಿವು
- ಫೋನ್ ಕದ್ದಾಲಿಕೆ ಮಾಡಿದಾಗ ವಂಚನೆ ಸ್ಪಷ್ಟ, ಬಂಧನ