*  ಪೊಲೀಸರಿಗೆ ತಲೆನೋವಾದ ಬೆಟ್ಟಿಂಗ್*  ಗೋವಾ, ಮಹಾರಾಷ್ಟ್ರ. ದೆಹಲಿಗೆ ವಿಸ್ತರಿಸಿದೆ ಕ್ರಿಕೆಟ್ ಬೆಟ್ಟಿಂಗ್ ಜಾಲ*  15 ದಿನದಲ್ಲಿ 18 ಕೇಸ್ ದಾಖಲು 13 ಲಕ್ಷ ಜಪ್ತಿ- 116 ಜನರ ವಿರುದ್ಧ ಕೇಸ್ 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಏ.24): ಒಂದು ಕಾಲದಲ್ಲಿ ಕ್ರಿಕೆಟನ್ನು(Cricket)‌ ಇಷ್ಟಪಟ್ಟು ನೋಡ್ತಿದ್ರು, ಯುವಕರು ನಾವು ಅವರಂತೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದು ನೋಡ್ತಿದ್ರು. ಆದ್ರೇ ಐಪಿಎಲ್(IPL) ಬಂದ ಮೇಲೆ ಆಡೋರಷ್ಟೇ ಅಲ್ಲ ನೋಡೋರು ಕೂಡ ಕಮರ್ಷಿಯಲ್ ಅಗಿಬಿಟ್ಟಿದ್ದಾರೆ. ಪ್ರತಿ ಮ್ಯಾಚ್‌ಗೂ ನೂರರಿಂದ ಲಕ್ಷದವರೆಗೂ ಬೆಟ್ಟಿಂಗ್ ಆಡೋ ಮೂಲಕ ಯುವಕರು ಕೆಟ್ಟ ದಾರಿಯತ್ತ ಸಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪೊಲೀಸರು ವಿವಿಧ ರೀತಿಯಲ್ಲಿ ಪ್ರಯತ್ನ ಪಡುತ್ತಿದ್ರೂ ಅದು ಸಾಧ್ಯವಾಗ್ತಿಲ್ಲ. ಇಷ್ಟಾದರೂ ಬಳ್ಳಾರಿ ಪೊಲೀಸರು 15 ದಿನದಲ್ಲಿ 18 ಕೇಸ್ ದಾಖಲು ಮಾಡಿ 13 ಲಕ್ಷ ಜಪ್ತಿ ಮಾಡೋ ಮೂಲಕ 116 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಐಪಿಎಲ್ ಬಂದ ಮೇಲೆ ಬೆಟ್ಟಿಂಗ್ ಜೋರು

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ-20 ಕ್ರಿಕೆಟ್‌ ಪಂದ್ಯಾವಳಿ ದೇಶದಲ್ಲಿ ಜೋರಾಗಿ ಸಾಗುತ್ತಿದೆ. ಒಂದೆಡೆ ಹಲವು ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸುತ್ತಿವೆ. ಮತ್ತೊಂದು ಕಡೆ ಬೆಟ್ಟಿಂಗ್(Betting) ದಂಧೆ ಸಹ ಜೋರಾಗಿ ಸಾಗಿದೆ. ಅದ್ರಲ್ಲೂ ಗಣಿ ನಾಡು ಬಳ್ಳಾರಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿದೆ. ಐಪಿಎಲ್‌ ಕ್ರಿಕೆಟ್ ಬೆಟ್ಟಿಂಗ್‌ ಗೆ ಮೊಬೈಲ್‌ನಲ್ಲಿ ವಿಶೇಷ ಆ್ಯಪ್‌(App) ಬಳಸಿ ಬೆಟ್ಟಿಂಗ್ ನಡೆಸಲಾಗುತ್ತಿದೆ. 

Fraud; ವರ್ಕ್ ಫ್ರಾಂ ಹೋಂ ಕೊಡಿಸುತ್ತೇನೆ ಎಂದು ಲಕ್ಷ ಲಕ್ಷ ವಂಚಿಸ್ತಾರೆ.. ಹುಷಾರ್!

ಬೆಟ್ಟಿಂಗ್‌ ದಂಧೆಯ ಜಾಲ ಹಳ್ಳಿ - ಹಳ್ಳಿಗೂ ವಿಸ್ತರಿಸಿದ್ದು, ಬಳ್ಳಾರಿ(Ballari) ಜಿಲ್ಲೆಯೊಂದರಲ್ಲೇ ನಿತ್ಯ ಲಕ್ಷಾಂತರ ರೂಪಾಯಿ ಬೆಟ್ಟಿಂಗ್‌ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬಳ್ಳಾರಿ ಪೊಲೀಸರು(Police) ಪ್ರತಿನಿತ್ಯ ಕ್ರಿಕೆಟ್ ಬೆಟ್ಟಿಂಗ್ ಜಾಲದ ವಿರುದ್ಧ ದಾಳಿ ನಡೆಸಿ ಕೇಸ್ ದಾಖಲಿಸುತ್ತಿದ್ದಾರೆ. ಕಳೆದ 15 ದಿನದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬರೋಬ್ಬರಿ 18 ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿದ್ದಾರೆ.‌ 

ಹಲವು ಠಾಣೆಗಳಲ್ಲಿ ಪ್ರಕರಣ ದಾಖಲು

ಬಳ್ಳಾರಿಯ ಕೌಲಬಜಾರ್ ಬ್ರೂಸ್ಪೇಟೆ. ಗಾಂಧಿನಗರ, ಕಂಪ್ಲಿ ಸಿರಗುಪ್ಪ ಸೇರಿದಂತೆ ಹಲವು ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾದವರ ವಿರುದ್ದ ಕೇಸ್ ದಾಖಲಾಗಿದೆ. ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣದಲ್ಲಿ ಪೊಲೀಸರು ನಿತ್ಯ ದಾಳಿ ಮಾಡಿ ಹಲವರನ್ನ ಬಂಧಿಸಿ ಪ್ರಕರಣ ದಾಖಲಿಸುತ್ತಿದ್ದರೂ ಜೂಜಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಪೊಲೀಸರ ಕೈಗೆ ಸಿಗುವವರೆಲ್ಲ ಸಾಮಾನ್ಯ ಆಟಗಾರರಾಗಿದ್ದ ಬೆಟ್ಟಿಂಗ್‌ ಕಿಂಗ್‌ಪಿನ್‌ ಮತ್ತು ಪ್ರಮುಖ ಬುಕ್ಕಿಗಳು ಸಿಕ್ತಿಲ್ಲ ಮೂಲಗಳ ಪ್ರಕಾರ ಗೋವಾ ಮತ್ತು ಮಹಾರಾಷ್ಟ್ರ ದೆಹಲಿಯಿಂದಲೇ ನಿತ್ಯ ಬೆಟ್ಟಿಂಗ್‌ ನಡೆಸುತ್ತಿದ್ದಾರೆ. ಇದರಿಂದ ಕ್ರಿಕೆಟ್‌ ಜೂಜಿನ ಹಿಂದಿರುವ ಜಾಲ ಭೇದಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ ಅಂತಾರೆ ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್.

IPL Bettingನಲ್ಲಿ ₹ 10ಲಕ್ಷ ನಷ್ಟ : ATMಗೇ ಕನ್ನ ಹಾಕಿದ ಬ್ಯಾಂಕ್‌ ಉದ್ಯೋಗಿ!

ಇನ್ನು ಬೆಟ್ಟಿಂಗ್ ಜಾಲವನ್ನು ನಗರದಿಂದ ಗ್ರಾಮೀಣ ಭಾಗಕ್ಕೂ ವಿಸ್ತರಿಸಿಕೊಂಡಿರುವ ಬುಕ್ಕಿಗಳು ಒಂದೊಂದು ಹಳ್ಳಿ ವಾರ್ಡ್‌ಗಳಲ್ಲೂ ತಮ್ಮದೇ ಆದ ನೆಟ್‌ವರ್ಕ್‌ ಉಳ್ಳ ಯುವಕರನ್ನು ಟಾರ್ಗೆಟ್‌ ಮಾಡಿ, ಅವರ ಮೂಲಕ ಜೂಜು ನಡೆಸುತ್ತಾರೆ. ಹೀಗಾಗಿ ಪೊಲೀಸರು ಬೆಟ್ಟಿಂಗ್ ವಿರುದ್ಧ ಸಮರ ಸಾರಿದ್ರೂ ಕಿಂಗ್ ಪಿಮ್‌ಗಳ ಬಂಧನ ಸಾಧ್ಯವಾಗುತ್ತಿಲ್ಲ. ಅಲ್ಲದೇ ಬೆಟ್ಟಿಂಗ್ ದಂಧೆಯಲ್ಲಿ ಹಣ ತೊಡಗಿಸಿದವರು ನಿತ್ಯ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದು ಪೊಲೀಸರು ಬೆಟ್ಟಿಂಗ್ ದಂಧೆಯಲ್ಲಿ ತೊಡಗದಂತೆ ಯುವಕರಿಗೆ ಮನವಿ ಮಾಡುತ್ತಿದ್ದಾರೆ. 

ಲಕ್ಷಾಂತರ ರೂಪಾಯಿ ಗೆಲ್ಲೋ ಆಸೆ

ಕಡಿಮೆ ಹಣವನ್ನ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿದ್ರೆ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು ಅನ್ನೋ ಆಮಿಷವೊಡ್ಡಿ ಬೆಟ್ಟಿಂಗ್‌ ದಂಧೆ ನಡೆಸಲಾಗುತ್ತಿದೆ. ಹೀಗಾಗಿ ಬೆಟ್ಟಿಂಗ್ ಜಾಲ ಬಳ್ಳಾರಿ ಜಿಲ್ಲೆಯಲ್ಲಿ ಸಕ್ರಿವಾಗಿದ್ದು. ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಜಾಲದಲ್ಲಿ ಬಳ್ಳಾರಿ ಜಿಲ್ಲೆಯ ದೊಡ್ಡ - ದೊಡ್ಡ ಕುಳಗಳೇ ಭಾಗಿಯಾಗಿದ್ದಾರೆ ಅನ್ನೋ ಮಾತಿದೆ. ನಿತ್ಯ ಲಕ್ಷಾಂತರ ರೂಪಾಯಿ ಜೂಜು ಆಡುವ ಯುವಕರು ವ್ಯಸನಿಗಳಾಗುತ್ತಿದ್ದು. ಹೆಚ್ಚಿನ ಹಣದ ಆಸೆಗಾಗಿ ಜೂಜು ಆಡುವ ಎಷ್ಟೋ ಜನರು ಸಾಲ ಮಾಡಿ ಬೀದಿಗೆ ಬರುತ್ತಿದ್ದಾರೆ. ಹೀಗಾಗಿ ಬೆಟ್ಟಿಂಗ್ ದಂಧೆ ವಿರುದ್ದ ಪೊಲೀಸರು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.