ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಇನ್ನೋವಾ ಕಾರನ್ನು ಹೊರ ತರಲು ಯತ್ನಿಸಿದ ವೇಳೆ ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಮೈಸೂರಿನ ಎಚ್‌.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ವರ್ಕ್ಶಾಪ್‌ ಬಳಿ ಗುರುವಾರ ರಾತ್ರಿ ನಡೆದಿದೆ.

ಮೈಸೂರು (ಜು.29) :  ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಇನ್ನೋವಾ ಕಾರನ್ನು ಹೊರ ತರಲು ಯತ್ನಿಸಿದ ವೇಳೆ ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಮೈಸೂರಿನ ಎಚ್‌.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ವರ್ಕ್ಶಾಪ್‌ ಬಳಿ ಗುರುವಾರ ರಾತ್ರಿ ನಡೆದಿದೆ.

Add Asianetnews Kannada as a Preferred SourcegooglePreferred

ಅಶೋಕಪುರಂ ನಿವಾಸಿಗಳಾದ ಕಿರಣ್‌(35) ಮತ್ತು ರವಿಕುಮಾರ್‌(33) ಮೃತಪಟ್ಟವರು. ಇನ್ನೂ ಕಾರು ಚಾಲಕ ರವಿ, ಸಹಾಯ ಮಾಡಲು ಬಂದಿದ್ದ ಸಂದೇಶ, ಶಿವಕುಮಾರ್‌ ಹಾಗೂ ರೋಷನ್‌ ಎಂಬವರು ವಿದ್ಯುತ್‌ ಸ್ಪರ್ಶದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರವಿ ಎಂಬವರು ಗುರುವಾರ ರಾತ್ರಿ ಇನ್ನೋವಾ ಕಾರನ್ನು ಚಾಲನೆ ಮಾಡಿಕೊಂಡು ನಾಚನಹಳ್ಳಿಪಾಳ್ಯದ ಕಡೆಯಿಂದ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ವಿದ್ಯುತ್‌ ಕಂಬ ಮುರಿದು ಬಿದ್ದಿದ್ದು, ಕಾರು ವಿದ್ಯುತ್‌ ಕಂಬ ಮತ್ತು ಪಕ್ಕದಲ್ಲಿಯೇ ಇದ್ದ ಕಾಂಪೌಂಡ್‌ ಗೋಡೆಯ ನಡುವೆ ಸಿಕ್ಕಿಕೊಂಡಿದೆ.

ಪಿಕ್ನಿಕ್ ಮುಗಿಸಿ ಮರಳುತ್ತಿದ್ದ ಕಾಲೇಜು ಬಸ್ ಅಪಘಾತ, ವಿದ್ಯುತ್ ಕಂಬಕ್ಕೆ ಡಿಕ್ಕಾಯಾಗಿ ಪಲ್ಟಿ!

ಈ ಅಪಘಾತ ಸಂಭವಿಸಿದ ಬಳಿಕ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಚಾಲಕರಾದ ರವಿಕುಮಾರ್‌ ಮತ್ತು ಕಿರಣ್‌ ಅವರು ಕಾರು ಚಾಲಕನ ನೆರವಿಗೆ ಬಂದಿದ್ದು, ವಿದ್ಯುತ್‌ ಸಂಪರ್ಕ ಪಡೆದಿರುವುದನ್ನು ಗಮನಿಸದೇ ಕಾರನ್ನು ಹೊರ ತೆಗೆಯಲು ಮುಂದಾಗಿದ್ದಾರೆ. ಇದಕ್ಕೆ ದಾರಿಯಲ್ಲಿ ಹೋಗುತ್ತಿದ್ದ ಸಂದೇಶ್‌, ಶಿವಕುಮಾರ್‌, ರೋಷನ್‌ ಮತ್ತು ಇತರರು ನೆರವಿಗೆ ಬಂದಿದ್ದಾರೆ.

ಕಾರನ್ನು ಹೊರ ತೆಗೆಯಲು ಯತ್ನಿಸಿದ ವೇಳೆ ವಿದ್ಯುತ್‌ ಶಾಕ್‌ನಿಂದ ರವಿಕುಮಾರ್‌ ಮತ್ತು ಕಿರಣ್‌ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಾರು ಚಾಲಕ ರವಿ, ನೆರವಿಗೆ ಬಂದ ದಾರಿಹೋಕರಾದ ಸಂದೇಶ್‌, ಶಿವಕುಮಾರ್‌ ಮತ್ತು ರೋಷನ್‌ಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ಶಾಕ್ ತಗುಲಿ ಮೂವರು ಸ್ಥಳದಲ್ಲೇ ಸಾವು

ಅಪಘಾತ ಸಂಬಂಧ ಕೆ.ಆರ್‌. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯುತ್‌ ಪ್ರವಹಿಸಿ ಮೃತಪಟ್ಟಿರುವವರ ಸಂಬಂಧ ಅಶೋಕಪುರಂ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ದಾಖಲಾಗಿದೆ.