Asianet Suvarna News Asianet Suvarna News

Covid 19 Fake Report: ಒಮಿಕ್ರೋನ್‌ ನಕಲಿ ವರದಿ ಸೃಷ್ಟಿಸಿ ಉದ್ಯಮಿ ಪರಾರಿ: ನಾಲ್ವರು ಪೊಲೀಸ್‌ ಬಲೆಗೆ!

*ಒಮಿಕ್ರೋನ್‌ ಸೋಂಕಿತನಿಗೆ ನಕಲಿ ವರದಿ: ನಾಲ್ವರು ವಶ
*ಬೆಂಗಳೂರು ಲ್ಯಾಬ್‌ನ ಇಬ್ಬರೂ ಪೊಲೀಸ್‌ ಬಲೆಗೆ
*ನಕಲಿ ವರದಿ ತೋರಿಸಿ ಪರಾರಿಯಾಗಿದ್ದ ಉದ್ಯಮಿ
*ಗಂಭೀರವಾಗಿ ಪರಿಗಣಿಸಿದ ಸರ್ಕಾರದಿಂದ ತನಿಖೆಗೆ ಆದೇಶ
 

businessman used Fake Omicron  Covid 19 Report to fly by Bengaluru 4 Arrested mnj
Author
Bengaluru, First Published Dec 13, 2021, 6:27 AM IST | Last Updated Dec 13, 2021, 6:27 AM IST

ಬೆಂಗಳೂರು (ಡಿ. 13): ಇತ್ತೀಚಿಗೆ ಬೆಂಗಳೂರಿನ (Bengaluru) ಪ್ರತಿಷ್ಠಿತ ಹೋಟೆಲ್‌ನಲ್ಲಿ ಪ್ರತ್ಯೇಕ ವಾಸದಲ್ಲಿ (ಕ್ವಾರಂಟೈನ್‌) ಇದ್ದಾಗ ತಪ್ಪಿಸಿಕೊಂಡು ದುಬೈ (Dubai) ಮೂಲಕ ತವರು ದಕ್ಷಿಣ ಆಫ್ರಿಕಾಗೆ ಪರಾರಿ ಆಗಿರುವ ಒಮಿಕ್ರೋನ್‌ ಸೋಂಕಿತನಿಗೆ ನಕಲಿ ಕೊರೋನಾ ನೆಗೆಟಿವ್‌ (Omicron Negative Report) ವರದಿ ನೀಡಿದ್ದು ಸಾಬೀತಾಗಿದೆ. ಈ ಸಂಬಂಧ ಖಾಸಗಿ ಲ್ಯಾಬ್‌ ಸಿಬ್ಬಂದಿ ಸೇರಿದಂತೆ ನಾಲ್ವರು ಹೈಗ್ರೌಂಡ್ಸ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾದ ಸೋಂಕಿತ ವ್ಯಕ್ತಿಯ ಮಾಲೀಕತ್ವದ ಸಾಫ್ಟ್‌ವೇರ್‌ ಕಂಪನಿಯ ಬೆಂಗಳೂರು ಶಾಖಾ ಕಚೇರಿಯ ಉದ್ಯೋಗಿ ರವೀಂದ್ರ ಸೇರಿ ಇಬ್ಬರು ನೌಕರರು ಹಾಗೂ ನಕಲಿ ಕೊರೋನಾ ನೆಗೆಟಿವ್‌ ವರದಿ ನೀಡಿದ್ದ ಖಾಸಗಿ ಲ್ಯಾಬ್‌ನ ಇಬ್ಬರು ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?

- ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪನಿ ಹೊಂದಿರುವ ಆಫ್ರಿಕಾ ಪ್ರಜೆ

- ಕಾರ್ಯ ನಿಮಿತ್ತ ನ.20ರಂದು ಬೆಂಗಳೂರಿಗೆ ಆಗಮಿಸಿದ್ದ ಉದ್ಯಮಿ

- ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಕೊರೋನಾ ಪತ್ತೆ

- ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಯಲ್ಲಿ ಒಮಿಕ್ರೋನ್‌ ಕೂಡ ದೃಢ

- ಹೋಟೆಲೊಂದರಲ್ಲಿ 14 ದಿನ ಕ್ವಾರಂಟೈನ್‌ ಮಾಡಿದ್ದ ಅಧಿಕಾರಿಗಳು

- ತನ್ನ ಸಿಬ್ಬಂದಿ ಮೂಲಕ ಖಾಸಗಿ ಲ್ಯಾಬ್‌ನಿಂದ ನಕಲಿ ವರದಿ ಸಂಗ್ರಹ

- ಅದನ್ನು ತೋರಿಸಿ ದುಬೈ ಮೂಲಕ ದಕ್ಷಿಣ ಆಫ್ರಿಕಾಗೆ ಪರಾರಿ

- ಗಂಭೀರವಾಗಿ ಪರಿಗಣಿಸಿದ ಸರ್ಕಾರದಿಂದ ತನಿಖೆಗೆ ಆದೇಶ

- ಬಿಬಿಎಂಪಿಯಿಂದ ಪೊಲೀಸರಿಗೆ ದೂರು ದಾಖಲು: ನಾಲ್ವರ ವಶ

ಇತ್ತೀಚೆಗೆ ಕಂಪನಿ ಕೆಲಸದ ನಿಮಿತ್ತ ದಕ್ಷಿಣ ಆಫ್ರಿಕಾದಿಂದ (South Africa) ಆಗಮಿಸಿದ್ದ ವ್ಯಕ್ತಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಿದಾಗ ಒಮಿಕ್ರೋನ್‌ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್‌ ಸಮೀಪದ ಶಾಂಗ್ರೀಲಾ ಹೋಟೆಲ್‌ನಲ್ಲಿ ಅವರನ್ನು 14 ದಿನಗಳು ಪ್ರತ್ಯೇಕ ವಾಸದಲ್ಲಿ ಇರಿಸಲಾಗಿತ್ತು. ಆದರೆ ತನ್ನ ಕಂಪನಿ ನೌಕರರನ್ನು ಬಳಸಿಕೊಂಡು ನಕಲಿ ಕೊರೋನಾ ನೆಗೆಟಿವ್‌ ವರದಿ ಪಡೆದು ತಪ್ಪಿಸಿಕೊಂಡು ಆತ ದುಬೈ ಮೂಲಕ ತನ್ನ ದೇಶಕ್ಕೆ ತೆರಳಿದ್ದಾನೆ.

Omicron Threat: ಮುಳುವಾಯ್ತಾ ಸಾಂಸ್ಥಿಕ ಕ್ವಾರಂಟೈನ್‌ ವಿನಾಯ್ತಿ?: ಮತ್ತೆ ಕೊರೋನಾ ಸ್ಫೋಟ ಸಾಧ್ಯತೆ

ವಿಮಾನ ನಿಲ್ದಾಣದಲ್ಲಿ ಆತ ಸಲ್ಲಿಸಿದ್ದ ಕೊರೋನಾ ವರದಿ ಆಧರಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆ ವರದಿ ನೀಡಿದ್ದ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಖಾಸಗಿ ಲ್ಯಾಬ್‌ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದರು. ಆಗ ಪ್ರಶ್ನಿಸಿದಾಗ ಭಾನಗಡಿ ಬಯಲಾಗಿದೆ.

ಹಣ ಪಡೆದು ನಕಲಿ ವರದಿ ಸೃಷ್ಟಿ!

ದಕ್ಷಿಣ ಆಫ್ರಿಕಾ ಪ್ರಜೆಯಾದ ಪರಾರಿಕೋರ ಸೋಂಕಿತ, ಸಾಫ್ಟ್‌ವೇರ್‌ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ತಮ್ಮ ಕಂಪನಿಯ ಕೆಲಸದ ನಿಮಿತ್ತ ನ.20 ರಂದು ನಗರಕ್ಕೆ ಬಂದಿದ್ದ ಆತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್‌-19 ಪರೀಕ್ಷೆಗೊಳಪಡಿಸಲಾಗಿತ್ತು. ಆಗ ಆತನಲ್ಲಿ ಕೊರೋನಾ ಪತ್ತೆಯಾಗಿತ್ತು. ಬಳಿಕ ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಯಲ್ಲಿ ಒಮಿಕ್ರೋನ್‌ ಅಂಶ ಪತ್ತೆಯಾಗಿತ್ತು.

Omicron: ಬೂಸ್ಟರ್ ಡೋಸ್‌ ಬೇಕೆ ಬೇಕು,  ತಜ್ಞರು ಕೊಟ್ಟ ಕಾರಣಗಳು

ಈ ಮಾಹಿತಿ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು, ಹೈಗ್ರೌಂಡ್ಸ್‌ ಸಮೀಪದ ಶಾಂಗ್ರೀಲಾ ಹೋಟೆಲ್‌ನಲ್ಲಿ ಆತನಿಗೆ 14 ದಿನಗಳ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಈ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ತಮ್ಮ ದೇಶಕ್ಕೆ ತೆರಳಲು ನಿರ್ಧರಿಸಿದ್ದ ಆತ, ತನ್ನ ಕಂಪನಿ ನೌಕರರನ್ನು ಬಳಸಿಕೊಂಡು ನಕಲಿ ಕೊರೋನಾ ನೆಗೆಟಿವ್‌ ವರದಿ ಪಡೆಯಲು ಸಂಚು ರೂಪಿಸಿದ್ದ.

ಸೋಂಕಿತನ ಬದಲಿಗೆ ಮತ್ತೊಬ್ಬ ವ್ಯಕ್ತಿಯ ಸ್ವ್ಯಾಬ್ ಪರೀಕ್ಷೆ

ಅಂತೆಯೇ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಸಿಂಗೇನಿ ಲ್ಯಾಬ್‌ ಅನ್ನು ಆತನ ಕಂಪನಿಯ ಉದ್ಯೋಗಿ ರವೀಂದ್ರ ಸೇರಿ ಇಬ್ಬರು ಸಂಪರ್ಕಿಸಿದ್ದರು. ಬಳಿಕ ಲ್ಯಾಬ್‌ನ ಸಿಬ್ಬಂದಿಗೆ ಹಣದಾಸೆ ತೋರಿಸಿದ ಆರೋಪಿಗಳು, ಸೋಂಕಿತನ ಬದಲಿಗೆ ಮತ್ತೊಬ್ಬ ವ್ಯಕ್ತಿಯ ಸ್ವ್ಯಾಬ್ (Swab) ಅನ್ನು ಪರೀಕ್ಷೆಗೆ ಕೊಟ್ಟಿದ್ದರು. ಅಲ್ಲದೆ ಮೊಬೈಲ್‌ ಸಂಖ್ಯೆ ಸಹ ತಪ್ಪು ಕೊಟ್ಟಿದ್ದರು.

Omicron UK Death Study: ಯುಕೆನಲ್ಲಿ ಒಮಿಕ್ರಾನ್ ಹಾವಳಿ, 75 ಸಾವಿರ ಬಲಿ ಸಾಧ್ಯತೆ!

ನ.26ರಂದು ನೆಗೆಟಿವ್‌ ವರದಿ ಸಿದ್ಧಪಡಿಸಿದ್ದ ಲ್ಯಾಬ್‌ ಸಿಬ್ಬಂದಿ, ಅದನ್ನು ಸೋಂಕಿತನ ಕಂಪನಿಯ ನೌಕರರಿಗೆ ಕೊಟ್ಟಿದ್ದಾರೆ. ಈ ವರದಿ ಕೈ ಸೇರಿದ ಮರುದಿನವೇ ಹೋಟೆಲ್‌ ತೊರೆದ ಆತ, ವಿಮಾನ ನಿಲ್ದಾಣಕ್ಕೆ ತೆರಳಿ ವಲಸೆ ವಿಭಾಗದಲ್ಲಿ ಕೊರೋನಾ ನೆಗೆಟಿವ್‌ ವರದಿ ಸಲ್ಲಿಸಿದ್ದ. ದುಬೈ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದ. ಇತ್ತ ಆತನ ದಿಢೀರ್‌ ನಾಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಬಳಿಕ ಬಿಬಿಎಂಪಿ ಶಿವಾಜಿನಗರ ವಲಯದ ಆರೋಗ್ಯಾಧಿಕಾರಿ ಡಾ.ನವೀನ್‌ ಕುಮಾರ್‌ ಅವರು, ಹೈಗ್ರೌಂಡ್ಸ್‌ ಠಾಣೆಯಲ್ಲಿ ಹೋಟೆಲ್‌ ಮತ್ತು ಸೋಂಕಿತನ ವಿರುದ್ಧ ದೂರು ದಾಖಲಿಸಿದ್ದರು.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ವಲಸೆ ವಿಭಾಗದಲ್ಲಿ ಮನೋಜ್‌ ಸಲ್ಲಿಸಿದ್ದ ಕೊರೋನಾ ನೆಗೆಟಿವ್‌ ವರದಿಯನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ನಾಲ್ವರು ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios