Omicron: ಬೂಸ್ಟರ್ ಡೋಸ್‌ ಬೇಕೆ ಬೇಕು,  ತಜ್ಞರು ಕೊಟ್ಟ ಕಾರಣಗಳು

* 7774 ಕೇಸು, 306 ಸಾವು. ಸಕ್ರಿಯ ಕೇಸು  560 ದಿನಗಳ ಕನಿಷ್ಠ
* ಲಸಿಕೆ ಕಡ್ಡಾಯ ನೀತಿ  ಭಾನುವಾರದಿಂದ ಪುದುಚೇರಿಯಲ್ಲಿ ಜಾರಿ
*ಬ್ರಿಟನ್‌: 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್‌ ಡೋಸ್‌
* ಬೂಸ್ಟರ್‌ ಡೋಸ್‌ ಸದ್ಯಕ್ಕಿಲ್ಲ: ಕೇಂದ್ರ
* ಎಲ್ಲರಿಗೂ 2 ಡೋಸ್‌ ಲಸಿಕೆ ನೀಡುವುದು ಮುಖ್ಯ: ಐಸಿಎಂಆರ್‌

Amid Omicron scare here is what scientists have to say about booster dose mah

ನವದೆಹಲಿ (ಡಿ. 13) ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 7,774 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 306 ಸೋಂಕಿತರು ಸಾವಿಗೀಡಾಗಿದ್ದಾರೆ. ತನ್ಮೂಲಕ ಒಟ್ಟು ಪ್ರಕರಗಳು 3.46 ಕೋಟಿಗೆ ಮತ್ತು ಒಟ್ಟು ಸಾವು 4.75 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 996 ಪ್ರಕರಣಗಳು ಇಳಿಕೆಯಾಗುವ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 92,281ಕ್ಕೆ ಕುಸಿದಿದೆ. ಇದು 560 ದಿನಗಳ ಕನಿಷ್ಠವಾಗಿದೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.27ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.65 ದಾಖಲಾಗಿದೆ. ದೇಶದಲ್ಲಿ ಈವರೆಗೆ 132.93 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ಪುದುಚೇರಿ: ಎಲ್ಲಾ ಅರ್ಹ ನಾಗರಿಕರು ಕೋವಿಡ್‌ ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ನಿಯಮ ಭಾನುವಾರದಿಂದ ಜಾರಿಯಾಗಿದೆ ಎಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ತಮಿಳ್‌ಸಾಯ್‌ ಸುಂದರ ರಾಜನ್‌ ತಿಳಿಸಿದ್ದಾರೆ. ಹೀಗಾಗಿ ಲಸಿಕೆ ಪಡೆದವರು, ತಮ್ಮ ಬಳಿಕ ಪ್ರಮಾಣ ಪತ್ರವನ್ನು ಸದಾ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇಂಥ ನೀತಿ ಜಾರಿ ಬಗ್ಗೆ ಕಳೆದ ವಾರ ಸರ್ಕಾರ ಆದೇಶ ಹೊರಡಿಸಿತ್ತು. ಲಸಿಕೆ ಪಡೆಯದೇ ಇದ್ದವರಿಗೆ ಸೂಕ್ತ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಲಾಗಿತ್ತು

ಲಂಡನ್‌: ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರೋನ್‌ ಹರಡುವಿಕೆಯನ್ನು ತಡೆಗಟ್ಟಲು ಸೋಮವಾರದಿಂದ 30 ವರ್ಷ ಮೇಲ್ಪಟ್ಟಎಲ್ಲಾ ನಾಗರಿಕರಿಗೂ ಬೂಸ್ಟರ್‌ ಡೋಸ್‌ ನೀಡುವುದಾಗಿ ಬ್ರಿಟನ್‌ ಆರೋಗ್ಯ ಇಲಾಖೆ ಘೋಷಿಸಿದೆ. ಅರ್ಹರು ಲಸಿಕೆ ಪಡೆದುಕೊಳ್ಳಲು ಹೆಸರು ನೋಂದಾಯಿಸಿಕೊಳ್ಳುವಂತೆ ಹೇಳಿದೆ. ಬೂಸ್ಟರ್‌ ಡೋಸ್‌, ಒಮಿಕ್ರೋನ್‌ ವಿರುದ್ಧ ಪರಿಣಾಮಕಾರಿಯಾಗಿರಲಿದೆ ಎಂದು ಅಧ್ಯಯನಗಳಿಂದ ದೃಢಪಟ್ಟಿದೆ. ಹೊಸ ರೂಪಾಂತರಿಯಿಂದ ಇನ್ನೂ ಯಾವುದೇ ಸಾವು ಸಂಭವಿಸಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಹಾಗೂ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಕರ್ನಾಟಕದ ಕೊರೋನಾ ಲೆಕ್ಕಾಚಾರೆ

ಬೂಸ್ಟರ್‌ ಡೋಸ್‌  ಬೇಕು: ತಜ್ಞರು: ಕೋವಿಡ್‌ ಬೂಸ್ಟರ್‌ ಡೋಸ್‌ ಲಸಿಕೆಯ ಅಗತ್ಯ ಸದ್ಯಕ್ಕಿಲ್ಲ ಎಂದು ಸರ್ಕಾರ ಹೇಳಿದ್ದರೂ, ಬೂಸ್ಟರ್‌ ಡೋಸ್‌ ನೀಡುವುದರಿಂದ ಜನರಲ್ಲಿ ಕೊರೋನಾ ವಿರುದ್ಧದ ಪ್ರತಿಕಾಯಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

ಡೋಸ್‌ ವಿತರಣೆ : ಒಮಿಕ್ರೋನ್‌ ರೂಪಾಂತರಿ ತಡೆಯಲು 30 ವರ್ಷ ಮೇಲ್ಪಟ್ಟಎಲ್ಲರಿಗೂ ಸೋಮವಾರದಿಂದ ಬೂಸ್ಟರ್‌ ಡೋಸ್‌ ನೀಡುವುದಾಗಿ ಬ್ರಿಟನ್‌ನ ಆರೋಗ್ಯ ಇಲಾಖೆ ಘೋಷಣೆ ಮಾಡಿದೆ. ಅರ್ಹರು ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದೆ.

ಒಮಿಕ್ರೋನ್‌ ಹರಡುವ ಭೀತಿಯಿರುವುದರಿಂದ ಕೊರೋನಾ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಬೇಕು ಎಂದು ಕರ್ನಾಟಕ ಮುಂತಾದ ರಾಜ್ಯಗಳು ಮಾಡಿರುವ ಮನವಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಬೂಸ್ಟರ್‌ ಡೋಸ್‌ನ ಯೋಚನೆ ಇಲ್ಲ ಎಂದು ಹೇಳಿದೆ.

‘ಹಾಲಿ ಪರಿಸ್ಥಿತಿಯಲ್ಲಿ ದೇಶದ ಎಲ್ಲರಿಗೂ ಎರಡು ಡೋಸ್‌ ಲಸಿಕೆ ನೀಡುವುದು ಮುಖ್ಯ. ಹಾಗೆಯೇ, ಒಮಿಕ್ರೋನ್‌ ಭೀತಿಯಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಒಮಿಕ್ರೋನ್‌ ಸೋಂಕಿನ ಲಕ್ಷಣಗಳು ಸೌಮ್ಯವಾಗಿವೆ. ಇನ್ನು, ಕೆಲ ರಾಜ್ಯಗಳು ಕೇಳುತ್ತಿರುವಂತೆ ಕೋವಿಶೀಲ್ಡ್‌ ಲಸಿಕೆಗಳ ನಡುವಿನ ಅಂತರವನ್ನು ಇಳಿಕೆ ಮಾಡುವ ಅಗತ್ಯವೂ ಇಲ್ಲ. ಕರ್ನಾಟಕ ಮುಂತಾದ ರಾಜ್ಯಗಳು ಕೇಳಿರುವಂತೆ ಬೂಸ್ಟರ್‌ ಡೋಸ್‌ ನೀಡಬೇಕೋ ಬೇಡವೋ ಎಂಬ ಬಗ್ಗೆ ಮುಂದೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ

ಭಾರತದಲ್ಲಿ ಜನರಿಗೆ ಮೂರನೇ ಡೋಸ್‌ ನೀಡುವ ಅಗತ್ಯವಿದೆಯೇ ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತಿದೆ. ಕೋವಿಡ್‌ ಕುರಿತ ತಾಂತ್ರಿಕ ಸಲಹಾ ಸಮಿತಿಯು ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸಲಿದೆ. ಸದ್ಯಕ್ಕೆ ದೇಶದ ಆರೋಗ್ಯ ಕ್ಷೇತ್ರದ ಗುರಿಯು ಎಲ್ಲರಿಗೂ ಎರಡು ಡೋಸ್‌ ಕೋವಿಡ್‌ ಲಸಿಕೆ ನೀಡುವುದರತ್ತ ಇರಬೇಕು. ಭಾರತದ ಪರಿಸ್ಥಿತಿಯಲ್ಲಿ ಎರಡು ಡೋಸ್‌ ಲಸಿಕಾಕರಣವು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಡಾ. ಸಮೀರಣ್‌ ತಿಳಿಸಿದ್ದಾರೆ.

ಇದೇ ವೇಳೆ, ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವೆ ಇರುವ 84 ದಿನಗಳ ಅಂತರವನ್ನು ಇಳಿಕೆ ಮಾಡಬೇಕೆಂಬ ಕರ್ನಾಟಕ ಮುಂತಾದ ರಾಜ್ಯಗಳ ಮನವಿಗೆ ಪ್ರತಿಕ್ರಿಯಿಸಿದ ಅವರು, ವೈಜ್ಞಾನಿಕ ಆಧಾರಗಳ ಪ್ರಕಾರ ಈ ಅಂತರ ಸರಿಯಾಗಿದೆ ಎಂದು ಹೇಳಿದ್ದಾರೆ.

ಕೋವಿಡ್‌ನಿಂದ ರಕ್ಷಣೆ ಪಡೆಯಲು ಜನರಿಗೆ ಬೂಸ್ಟರ್‌ ಡೋಸ್‌ ನೀಡಬೇಕೇ ಬೇಡವೇ ಹಾಗೂ ಒಮಿಕ್ರೋನ್‌ ರೂಪಾಂತರಿ ತಳಿಯ ವಿರುದ್ಧ ಹಾಲಿ ಲಸಿಕೆಗಳು ರಕ್ಷಣೆ ನೀಡುತ್ತವೆಯೇ ಇಲ್ಲವೇ ಎಂಬ ಚರ್ಚೆ ನಡೆಯುತ್ತಿರುವಾಗಲೇ ಸಾಂಕ್ರಾಮಿಕ ರೋಗಗಳ ತಜ್ಞರು ಮತ್ತೊಮ್ಮೆ ಬೂಸ್ಟರ್‌ ಡೋಸ್‌ ಪರ ಬ್ಯಾಟಿಂಗ್‌ ನಡೆಸಿದ್ದಾರೆ. ‘ಬೂಸ್ಟರ್‌ ಡೋಸ್‌ ನೀಡುವುದರಿಂದ ಜನರಲ್ಲಿ ಕೊರೋನಾ ವಿರುದ್ಧದ ಪ್ರತಿಕಾಯಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ’ ಎಂದು ತಜ್ಞರು ಹೇಳಿದ್ದಾರೆ.

ಬೂಸ್ಟರ್‌ ಡೋಸ್‌ ಕುರಿತ ಚರ್ಚೆಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ವೈರಾಣು ತಜ್ಞ ಡಾ. ಶಾಹಿದ್‌ ಜಮೀಲ್‌, ‘ಒಮಿಕ್ರೋನ್‌ ಸೋಂಕು ತಗಲಿದರೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವುದರ ವಿರುದ್ಧ ಬೂಸ್ಟರ್‌ ಡೋಸ್‌ ರಕ್ಷಣೆ ನೀಡಲಿದೆ. ಆದರೆ, ಸೋಂಕು ತೀವ್ರವಾಗದಂತೆ ಎಷ್ಟುಪ್ರಮಾಣದಲ್ಲಿ ಇದು ರಕ್ಷಣೆ ನೀಡುತ್ತದೆ ಎಂಬುದು ಗೊತ್ತಿಲ್ಲ. ಭಾರತದಲ್ಲಿ ಐದು ಲಸಿಕೆಗಳನ್ನು ಬೂಸ್ಟರ್‌ ಆಗಿ ಬಳಸಬಹುದು. ಕೋವ್ಯಾಕ್ಸಿನ್‌ ಲಸಿಕೆಯ ಎರಡು ಡೋಸ್‌ ಪಡೆದವರಿಗೆ ಬೂಸ್ಟರ್‌ ಆಗಿ ಕೋವಿಶೀಲ್ಡ್‌ ನೀಡಿದರೆ ಪರಿಣಾಮ ಜಾಸ್ತಿ. ಕೋವಿಶೀಲ್ಡ್‌ ಪಡೆದವರಿಗೆ ಕೋವ್ಯಾಕ್ಸಿನ್‌ ಲಸಿಕೆಯ ಬೂಸ್ಟರ್‌ ನೀಡಬೇಕು. ಇನ್ನು ಜೈಕೋವ್‌-ಡಿ ಡಿಎನ್‌ಎ ವ್ಯಾಕ್ಸಿನ್‌, ಕೋವೋವ್ಯಾಕ್ಸ್‌ ಪ್ರೊಟೀನ್‌ ವ್ಯಾಕ್ಸಿನ್‌ ಹಾಗೂ ಬಯಾಲಜಿಕಲ್‌ ಇ ಸಂಸ್ಥೆಯ ಕೋರ್ಬಿವ್ಯಾಕ್ಸ್‌ ಪ್ರೊಟೀನ್‌ ಲಸಿಕೆಯನ್ನು ಕೂಡ 3ನೇ ಡೋಸ್‌ ಆಗಿ ನೀಡಬಹುದು’ ಎಂದು ಹೇಳಿದ್ದಾರೆ.

ಬೂಸ್ಟರ್‌ ಡೋಸ್‌ ಒಳ್ಳೆಯದು: ಖ್ಯಾತ ವೈರಾಣು ತಜ್ಞ ಡಾ ಟಿ.ಜೇಕಬ್‌ ಜಾನ್‌, ‘ಇನ್ನೂ ಗೊತ್ತಿಲ್ಲದ ಒಮಿಕ್ರೋನ್‌ನ ಅಪಾಯಗಳ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು ಅಂದರೆ ಬೂಸ್ಟರ್‌ ಡೋಸ್‌ ನೀಡುವುದು ಬಹಳ ಒಳ್ಳೆಯ ಮಾರ್ಗ. ವಿಶೇಷವಾಗಿ ವೃದ್ಧರು ಮತ್ತು ಪೂರ್ವರೋಗಪೀಡಿತರಿಗೆ ಬೂಸ್ಟರ್‌ ಡೋಸ್‌ನ ಅಗತ್ಯವಿದೆ. ಯಾವುದೇ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಿದರೂ ಚೆನ್ನಾಗಿ ಕೆಲಸ ಮಾಡುತ್ತದೆ. ಫೈಝರ್‌ನ ಬೂಸ್ಟರ್‌ ಡೋಸ್‌ ಸುಮಾರು 40 ಪಟ್ಟು ಹೆಚ್ಚು ಕೆಲಸ ಮಾಡುತ್ತದೆ’ ಎಂದು ಹೇಳಿದ್ದಾರೆ.

ಕೊರೋನಾ ರೂಪಾಂತರಿ ತಳಿಯಾಗಿರುವ ಒಮಿಕ್ರೋನ್‌ನ ವಿರುದ್ಧ ಕೋವಿಶೀಲ್ಡ್‌ ಲಸಿಕೆಯ ಮೂರನೇ ಡೋಸ್‌ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಬ್ರಿಟನ್‌ ಸರ್ಕಾರದ ಆರೋಗ್ಯ ಸಂಸ್ಥೆಯಾಗಿರುವ ಯುಕೆ ಹೆಲ್ತ್‌ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಹೇಳಿದೆ. ತನ್ಮೂಲಕ ಭಾರತದಲ್ಲಿ ಬೂಸ್ಟರ್‌ ಡೋಸ್‌ ನೀಡಬೇಕು ಎಂಬ ವಾದಕ್ಕೆ ಬಲ ಬಂದಂತಾಗಿದೆ. ಅಲ್ಲದೆ, ಒಮಿಕ್ರೋನ್‌ ವಿರುದ್ಧ ಕೋವಿಶೀಲ್ಡ್‌ ಕೆಲಸ ಮಾಡುತ್ತದೆಯೇ ಇಲ್ಲವೇ ಎಂಬ ಗೊಂದಲಕ್ಕೆ ಹಾಗೂ ಒಮಿಕ್ರೋನ್‌ ಸೋಂಕು ಎಲ್ಲಾ ಲಸಿಕೆಗಳನ್ನೂ ಮೀರಿ ಹರಡುತ್ತದೆ ಎಂಬ ಆತಂಕಕ್ಕೂ ತಡೆ ಬಿದ್ದಂತಾಗಿದೆ.

Latest Videos
Follow Us:
Download App:
  • android
  • ios