Asianet Suvarna News Asianet Suvarna News

Akhil Jain Murder Case: ದೃಶ್ಯಂ ಸಿನೆಮಾ ಸ್ಟೈಲ್ ನಲ್ಲಿ ಅಖಿಲ್ ಜೈನ್ ಹತ್ಯೆ, ಉದ್ಯಮಿ ಅಪ್ಪ ಸೇರಿ 7 ಮಂದಿ ಬಂಧನ

ಮಗ ಸರಿ ಇಲ್ಲ ಎಂದು ಹುಬ್ಬಳ್ಳಿ ಖ್ಯಾತ ಉದ್ಯಮಿ ಭರತ್ ಜೈನ್  ಆತನನ್ನು ಕೊಲ್ಲಲು 10 ಲಕ್ಷ ರೂ ಸುಮಾರಿ ನೀಡಿದ್ದ. ಹಂತಕರು ಉಸಿರುಗಟ್ಟಿಸಿ ಅಖಿಲ್‌  ಜೈನ್ ಹತ್ಯೆ ಮಾಡಿದ ಬಳಿಕ  ಉಪ್ಪು, ಕರ್ಪೂರ ಹಾಕಿ ಹೆಣ ಹೂತರು. ಹುಬ್ಬಳ್ಳಿ ಪೊಲೀಸರು ಶವ ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ತಂದೆ ಸೇರಿ ಏಳು ಜನರ ಬಂಧಿಸಿದ್ದಾರೆ.

businessman Bharat Jain and 7 others arrested by hubballi police in  Akhil Jain Murder case gow
Author
First Published Dec 8, 2022, 5:29 PM IST

ಹುಬ್ಬಳ್ಳಿ (ಡಿ.8): ತಂದೆಯೇ ಸುಪಾರಿ ಕೊಟ್ಟು ಮಗನನ್ನೇ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿಸಿದ ಪ್ರಕರಣವನ್ನು, ಪೊಲೀಸರು ಸಹ ಅಷ್ಟೇ ಚಾಣಾಕ್ಷತನದಿಂದಲೇ ಬಯಲೆಗೆಳೆಯುವಲ್ಲಿ ಯಶಸ್ವಿಯಾಗಿದ್ದು, ತಂದೆ, ಕೊಲೆ ಮಾಡಿದ ಆರೋಪಿಗಳು ಸೇರಿದಂತೆ ಏಳು ಮಂದಿಯನ್ನು ಈಗ ಹೆಡೆಮುರಿ ಕಟ್ಟಿದ್ದಾರೆ. ಹೂತಿದ್ದ ಶವವನ್ನು ಹೊರತೆಗೆದು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಅಖಿಲನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ತಿಳಿಸಿದ್ದಾರೆ. ಈ ನಡುವೆ ಕೊಲೆ ಗೊತ್ತಾಗಬಾರದು. ಶವದ ವಾಸನೆ ಬೇಗನೆ ಬರಬಾರದು ಎಂದುಕೊಂಡು ಉಪ್ಪು, ಕರ್ಪೂರ ಹಾಕಿ ಮೃತದೇಹವನ್ನು ಹೂಳಲಾಗಿತ್ತು ಎಂದು ಗೊತ್ತಾಗಿದೆ.

ಮಾಧ್ಯಮಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಲಾಬೂರಾಮ್‌, ಡಿ. 4ರಂದು ಕೇಶ್ವಾಪುರ ಠಾಣೆಯಲ್ಲಿ ಅಖಿಲ ಭರತ್‌ ಮಹಾಜನಶೇಠ್‌ (30) ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ಅಖಿಲ್‌ನ ಚಿಕ್ಕಪ್ಪ ಮನೋಜ ಮಹಾಜನಶೇಠ್‌ ಪ್ರಕರಣ ದಾಖಲಿಸಿದ್ದರು. ಅತ್ಯಂತ ಸವಾಲಿನ ಕೇಸ್‌ ಇದಾಗಿತ್ತು. ಯುವಕನ ತಂದೆ ಭರತ್‌ ನೀಡಿದ ಹೇಳಿಕೆಗಳಿಂದ ಆತನ ಮೇಲೆಯೇ ಸಂಶಯ ಬಂದಿತ್ತು. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತನೇ ಸುಪಾರಿ ಕೊಟ್ಟು ಮಗನ ಕೊಲೆ ಮಾಡಿಸಿದ್ದು ಬಯಲಿಗೆ ಬಂತು ಎಂದು ವಿವರಿಸಿದರು.

ಆಗಿದ್ದೇನು?: ಪುತ್ರ ಅಖಿಲನೊಂದಿಗೆ ಉದ್ಯಮಿ ಭರತ್‌ನಿಗೆ ವೈಯಕ್ತಿಕ ಕಾರಣಕ್ಕಾಗಿ ದ್ವೇಷವಿತ್ತು. ಹೀಗಾಗಿ ಪುತ್ರನನ್ನು ಮುಗಿಸಿಬಿಡಬೇಕು ಎಂದು ನಿರ್ಧರಿಸಿದ್ದ ಉದ್ಯಮಿ ಭರತ್‌, ತನ್ನ ಪರಿಚಯಸ್ಥ ಸಲೀಂ ಸಲಾವುದ್ದೀನ ಮೌಲ್ವಿ ಮೂಲಕ ಕೊಲೆಗೆ ಸುಪಾರಿ ಕೊಡುತ್ತಾನೆ. ಸುಪಾರಿ ಪಡೆದವರು ಅಖಿಲನನ್ನು ತಮಗೆ ಒಪ್ಪಿಸುವಂತೆ ತಿಳಿಸುತ್ತಾರೆ. ಅದರಂತೆ ಡಿ. 1ರಂದು ಭರತ್‌ ಕಾಮಗಾರಿ ವೀಕ್ಷಣೆ ಮಾಡಿಕೊಂಡು ಬರೋಣ ಎಂದು ಪುತ್ರ ಅಖಿಲ್‌ನನ್ನು ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿ ಕರೆದುಕೊಂಡು ಹೋಗಿ ಹಂತಕರಿಗೆ ಒಪ್ಪಿಸುತ್ತಾನೆ. ಹಂತಕರು ಯುವಕನನ್ನು ದೇವಿಕೊಪ್ಪದ ಹೊಲದಲ್ಲಿನ ಶೆಡ್‌ವೊಂದರಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡುತ್ತಾರೆ. ಅದೇ ಜಾಗದಲ್ಲಿ ಹೂಳುತ್ತಾರೆ. ಅಲ್ಲಿಂದ ಅವರು ಪರಾರಿಯಾಗುತ್ತಾರೆ.

ವಿಚಾರಣೆ ವೇಳೆ ಈ ವಿಷಯ ಗೊತ್ತಾದ ಬಳಿಕ ಭರತ್‌, ಸಲೀಂ ಹಾಗೂ ಇನ್ನೊಬ್ಬ ಆರೋಪಿಯನ್ನು ಮೊದಲಿಗೆ ಬಂಧಿಸುತ್ತಾರೆ. ಬಳಿಕ ಇವರು ನೀಡಿದ ಮಾಹಿತಿ ಮೇರೆಗೆ ಹೊಸಪೇಟೆಯಲ್ಲೊಬ್ಬ, ಹುಬ್ಬಳ್ಳಿ ಗಬ್ಬೂರಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಶವ ಹೊರಕ್ಕೆ: ಆರೋಪಿಗಳ ಮಾಹಿತಿ ಮೇರೆಗೆ ಬುಧವಾರ ಬೆಳಗ್ಗೆ ಹೂತಿರುವ ಶವವನ್ನು ಧಾರವಾಡ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಹೊರತೆಗೆದು, ಕಿಮ್ಸ್‌, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಯಿಸಿ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದರು.

ಬಂಧಿತರು: ಅಖಿಲ್‌ ತಂದೆ  ಭರತ್‌ ಜಯಂತಿಲಾಲ ಮಹಾಜನಶೇಠ್‌, ಪ್ರಭಯ್ಯ ಹಿರೇಮಠ, ಮಹಾದೇವ ನಾಲವಾಡ, ಸಲೀಂ ಸಲಾವುದ್ದೀನ ಮೌಲ್ವಿ, ರೆಹಮಾನ ವಿಜಯಪುರ, ಮಹ್ಮದ ಹನೀಫ್‌ ಸೇರಿದಂತೆ ಏಳು ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕರ್ಪೂರ, ಉಪ್ಪು: ಶವ ಬೇಗನೆ ವಾಸನೆ ಬರಬಾರದು. ಹೂತಿರುವ ಜಾಗವನ್ನು ನಾಯಿ ಸೇರಿದಂತೆ ಯಾವುದೇ ಕಾಡುಪ್ರಾಣಿಗಳು ಅಗೆದು ಹೊರತೆಗೆಯಬಾರದು ಶವವನ್ನು ಉಪ್ಪು ಹಾಗೂ ಕರ್ಪೂರ ಹಾಕಿ ಮುಚ್ಚಲಾಗಿತ್ತು. ಜತೆಗೆ ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡಿ ತಪ್ಪಿಸಿಕೊಳ್ಳಲು ಹೊಲದಲ್ಲಿನ ಶೆಡ್‌ನಲ್ಲಿ ಹುಗಿದಿರುವುದು ಬೆಳಕಿಗೆ ಬಂದಿದೆ. ಈ ಹೊಲ ಕೂಡ ಆರೋಪಿಗಳಲ್ಲೊಬ್ಬರಾದ ಸಲೀಂ ಸಲಾವುದ್ದೀನ ಪರಿಚಯಸ್ಥರಾಗಿತ್ತು ಎಂದು ಹೇಳಲಾಗಿದೆ. ಈ ಹೊಲದ ಕಡೆಗೆ ಯಾರು ಓಡಾಡುತ್ತಿರಲಿಲ್ಲವಂತೆ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲು ಆ ಹೊಲವನ್ನು ಆಯ್ಕೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಲಾಗಿದೆ.

ಬಹುಮಾನ ವಿತರಣೆ: ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಗೋಕುಲ ರಸ್ತೆ, ಹಳೇಹುಬ್ಬಳ್ಳಿ, ಹುಬ್ಬಳ್ಳಿ ಗ್ರಾಮೀಣ ಠಾಣೆ, ಕಲಘಟಗಿ ಠಾಣೆ ಹೀಗೆ ಐದಾರು ಠಾಣೆಗಳ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಡಿಸಿಪಿಗಳಾದ ಸಾಹೀಲ್‌ ಬಾಗ್ಲಾ, ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೆದಾರ, ಇನ್‌ಸ್ಪೆಪೆಕ್ಟರ್‌ಗಳಾದ ಉಳಿವೆಪ್ಪ ಸಾತೇನಹಳ್ಳಿ, ಜಗದೀಶ ಹಂಚಿನಾಳ, ಜಿ.ಎಂ. ಕಾಲೆಮಿರ್ಚಿ, ಆನಂದ ಒಣಕುದರಿ, ರಮೇಶ ಹೂಗಾರ, ಬಿ.ವಿ. ಮಂಟೂರ, ಜಯಪಾಲ ಪಾಟೀಲ, ಪಿಎಸ್‌ಐಗಳಾದ ಸದಾಶಿವ ಕಾನಟ್ಟಿಶರಣು ದೇಸಾಯಿ ಹಾಗೂ ಸಾತನ್ನವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಈ ತಂಡಕ್ಕೆ ಪೊಲೀಸ್‌ ಕಮಿಷನರೇಟ್‌ 50 ಸಾವಿರ ನಗದು ಬಹುಮಾನ ಘೋಷಿಸಿದೆ.

Hubballi Akhil Jain Murder: ಮಗನ ಕೊಲೆಗೆ ವರ್ಷದ ಹಿಂದೆಯೇ ಉದ್ಯಮಿ ಅಪ್ಪ ಪ್ಲಾನ್, ಸಿಕ್ಕಿಬಿದ್ದಿದ್ದು ಹೇಗೆ?

ವೈಯಕ್ತಿಕ ಕಾರಣ ಎಂದರೇನು?: ಕುಡಿತದ ಚಟಕ್ಕೆ ಅಂಟುಕೊಂಡಿದ್ದ ಅಖಿಲ್‌, ಪ್ರತಿನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕಾಗಿ ತಂದೆಯೇ ಮಗನ ಕೊಲೆಗೆ ಸುಪಾರಿ ಕೊಟ್ಟಿದ್ದ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆದರೆ ತಂದೆ ಹಾಗೂ ಮಗನ ನಡುವೆ ವೈಯಕ್ತಿಕ ಕಾರಣಕ್ಕಾಗಿ ದ್ವೇಷವಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ. ಮಗನ ಕೊಲೆ ಮಾಡಿಸುವಂತಹ ವೈಯಕ್ತಿಕ ಕಾರಣವೇನು? ಎಂಬುದು ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆ. ಆದರೆ ಇದಕ್ಕೆ ಪೊಲೀಸರು ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.

Murder case: ಮಗನ ಹತ್ಯೆಗೆ ತಂದೆಯೇ ಸುಪಾರಿ; ಶವ ಪತ್ತೆ?

ಸುಪಾರಿ ಹಂತಕರು ಯಾರು?: ಸುಪಾರಿ ಪಡೆದು ಹತ್ಯೆ ಮಾಡಿ ಸಿಲುಕಿರುವವರು ವೃತ್ತಿಪರ ಹಂತಕರೇ ಅಥವಾ ಇದು ಅವರ ಮೊದಲ ಕೊಲೆಯೇ? ಇದರ ಹಿಂದೆ ಮತ್ಯಾರಾದರೂ ಇದ್ದಾರೆಯೇ? ಇವರು ವೃತ್ತಿಪರ ಕೊಲೆಗಡುಕರೇ ಇದ್ದರೆ, ಈ ಹಿಂದೆ ಬೇರೆ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ಬಯಲಿಗೆಳೆಯಬೇಕಿದೆ.

Follow Us:
Download App:
  • android
  • ios