ಇಂಗ್ಲಿಷ್‌ನಲ್ಲಿ ಬರೆದಿರುವ ಒಂದು ಪುಟದ ಸೂಸೈಡ್ ನೋಟ್‌ನಲ್ಲಿ, ಬಾಲಕ ತನ್ನ ಅಧ್ಯಯನದ ಮೇಲೆ ಗಮನ ಹರಿಸುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರೆ ಮತ್ತು ಎಂಟು ಗಂಟೆಗಳ ಅಧ್ಯಯನವೂ ಅವರಿಗೆ ಸಾಕಾಗುವುದಿಲ್ಲ ಎಂದು ಆರೋಪಿಸಿದ್ದಾನೆ.
ಮುಂಬೈ (ಜೂ. 10):16 ವರ್ಷದ ಬಾಲಕನೊಬ್ಬ ಬುಧವಾರ ರಾತ್ರಿ ಮುಂಬೈನ ಕಂಡಿವಲಿ ಮತ್ತು ಮಲಾಡ್ ರೈಲು ನಿಲ್ದಾಣಗಳ ನಡುವೆ ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕನ ಪೋಷಕರು ಅಧ್ಯಯನದತ್ತ ಗಮನ ಹರಿಸುವಂತೆ ಒತ್ತಡ ಹೇರಿದ್ದರಿಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪೋಲೀಸರು ಬಾಲಕ ಬರೆದಿದ್ದ ಎನ್ನಲಾದ ಸೂಸೈಡ್ ನೋಟನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಅವನು ತನ್ನ ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸುವಂತೆ ತನ್ನ ಹೆತ್ತವರು ಒತ್ತಾಯಿಸುತ್ತಿದ್ದಾರೆ ಮತ್ತು ಕಳೆದ ಎರಡು ವರ್ಷಗಳಿಂದ ಆತ್ಮಹತ್ಯೆಯ ಆಲೋಚನೆಗಳು ಮೂಡುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕ ಬುಧವಾರ ಸಂಜೆ ನಾಪತ್ತೆಯಾದ ನಂತರ ಆತನ ತಂದೆ ರಾತ್ರಿ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ನಾಪತ್ತೆಯಾಗಿರುವ ಮಕ್ಕಳ ಕುರಿತು ಸುಪ್ರೀಂ ಕೋರ್ಟ್ (Supreme Court) ಮಾರ್ಗಸೂಚಿ ಪ್ರಕಾರ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಆರಂಭಿಸಿದ್ದಾರೆ.
ಸೂಸೈಡ್ ನೋಟಿನಲ್ಲೇನಿದೆ?: ಇಂಗ್ಲಿಷ್‌ನಲ್ಲಿ ಬರೆದಿರುವ ಒಂದು ಪುಟದ ಸೂಸೈಡ್ ನೋಟ್‌ನಲ್ಲಿ, ಬಾಲಕ ತನ್ನ ಅಧ್ಯಯನದ ಮೇಲೆ ಗಮನ ಹರಿಸುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರೆ ಮತ್ತು ಅವರಿಗೆ ಎಂಟು ಗಂಟೆಗಳ ಅಧ್ಯಯನವೂ ಸಾಕಾಗುವುದಿಲ್ಲ ಎಂದು ಹೇಳಿದ್ದಾನೆ. ಅವನು 8 ನೇ ತರಗತಿಯಲ್ಲಿದ್ದಾಗ ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದನು ಮತ್ತು ಚಾಕುವಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದ ಎಂದು ಅವನು ಬರೆದಿದ್ದಾನೆ. ವಿದ್ಯಾರ್ಥಿಯು ಇತ್ತೀಚೆಗೆ ಎಸ್‌ಎಸ್‌ಸಿ ಪರೀಕ್ಷೆಗಳಿಗೆ ಬರೆದಿದ್ದ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮತ್ತೊಂದೆಡೆ ಮೃತ ಬಾಲಕನ ಪೋಷಕರು ಪೊಲೀಸರಿಗೆ ಹೇಳಿಕೆ ನೀಡಿದ್ದು, ಆತ ಮೊಬೈಲ್ ಚಟ ಹೊಂದಿದ್ದು, ಸದಾ ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದ, ಓದಿನತ್ತ ಗಮನ ಹರಿಸುವಂತೆ ಕೇಳಿದಾಗಲೆಲ್ಲ ಕೋಪಗೊಳ್ಳುತ್ತಿದ್ದ ಎಂದಿದ್ದಾರೆ. ಯಾವುದೇ ಪೋಷಕರು ತಮ್ಮ ಮಗುವಿಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿರದ ಕಾರಣ ಬಾಲಕನ ಪೋಷಕರ ವಿರುದ್ಧ ಸದ್ಯ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆಗಾಗಿ ಹೆಂಡತಿ ಕೈಬೆರಳು ಕತ್ತರಿಸಿದ ಆರ್ಮಿ ಮೇಜರ್: ರಾಜಿ ಮಾಡಿಕೊಳ್ಳುವಂತೆ ಪೊಲೀಸ್ ಮನವೊಲಿಕೆ?
ಇದನ್ನೂ ಓದಿ: ವಿಧವಾ ವೇತನ ಕೊಡಿಸುವ ನೆಪದಲ್ಲಿ 75 ವರ್ಷದ ಮಹಿಳೆ ಮೇಲೆ ಅತ್ಯಾಚಾರ
