ಹೆಂಡತಿಯನ್ನು 72 ಪೀಸ್ ಮಾಡಿದ್ದ ಪತಿ, ಡೆಹ್ರಾಡೂನ್‌ನಲ್ಲಿ ಆಗಿತ್ತು ಶ್ರದ್ಧಾ ರೀತಿಯ ಘಟನೆ!
ದೆಹಲಿಯಲ್ಲಿ ಅಫ್ತಾಬ್ ಎನ್ನುವ ವ್ಯಕ್ತಿ ತನ್ನ ಗೆಳತಿಯನ್ನು 35 ತುಂಡು ಮಾಡಿದ ಪ್ರಕರಣ ಸುದ್ದಿಯಲ್ಲಿರುವಾಗಲೇ, ಹಿಂದೊಮ್ಮೆ ಡೆಹ್ರಾಡೂನ್‌ನಲ್ಲಿ ಆಗಿದ್ದ ಇದೇ ರೀತಿಯ ಘಟನೆಯ ಬಗ್ಗೆ ಚರ್ಚೆಯಾಗುತ್ತಿದೆ. ಅಂದಿನ ಪ್ರಕರಣದಲ್ಲಿ ರಾಜೇಶ್ ಎನ್ನುವ ವ್ಯಕ್ತಿ ತನ್ನ ಪತ್ನಿಯನ್ನು 72 ಪೀಸ್ ಮಾಡಿದ್ದ..!
ನವದೆಹಲಿ (ನ.16):ದೆಹಲಿಯಲ್ಲಿ ತನ್ನ ಗೆಳತಿಯನ್ನು ಕೊಂದು 35 ತುಂಡುಗಳಾಗಿ ಕತ್ತರಿಸಿದ ಭಯಾನಕ ಪ್ರಕರಣ ಸುದ್ದಿಯಲ್ಲಿರುವ ವೇಳೆ, 12 ವರ್ಷಗಳ ಹಿಂದೆ ನಡೆದ ಇಂಥದ್ದೇ ಹತ್ಯಾಕಾಂಡವನ್ನು ನೆನಪಿಸಿದೆ. ದೆಹಲಿಯಲ್ಲಿ ಆಗಿರುವ ಘಟನೆಯಲ್ಲಿ ಅಫ್ತಾಬ್ ಎನ್ನುವ ವ್ಯಕ್ತಿ ತನ್ನ ಗೆಳತಿಯನ್ನು 35 ತುಂಡುಗಳನ್ನಾಗಿ ಕತ್ತರಿಸಿದ್ದರೆ, 12 ವರ್ಷದ ಹಿಂದಿನ ಪ್ರಕರಣದಲ್ಲಿ ರಾಜೇಶ್ ಎನ್ನುವ ವ್ಯಕ್ತಿ ತನ್ನ ಪತ್ನಿಯನ್ನು ಸ್ಟೋನ್ ಕಟರ್ ಬಳಸಿ 72 ತುಂಡುಗಳನ್ನಾಗಿ ಮಾಡಿದ್ದ. ಆ ಘಟನೆ ಡೆಹ್ರಾಡೂನ್‌ನಲ್ಲಿ ನಡೆದಿತ್ತು. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರಾಜೇಶ್ 1999ರಲ್ಲಿ ದೆಹಲಿಯ ಅನುಪಮಾ ಗುಲಾಟಿ ಜತೆ ಪ್ರೇಮ ವಿವಾಹವಾಗಿದ್ದರು. ಅದರ ಮರುವರ್ಷವೇ ರಾಜೇಶ್ ಕೆಲಸದ ಕಾರಣಕ್ಕಾಗಿ ಅಮೆರಿಕ್ಕೆ ಹೋಗಿದ್ದರು. ಆರು ವರ್ಷಗಳ ಕಾಲ ಅಮೆರಿಕದಲ್ಲಿ ಅವರು ಪತ್ನಿಯೊಂದಿಗೆ ವಾಸವಿದ್ದರು. ಆ ಬಳಿಕ ಡೆಹ್ರಾಡೂನ್‌ಗೆ ಶಿಫ್ಟ್ ಆಗಿದ್ದರು. ಅನುಪಮಾ ತನ್ನ ಅತ್ತೆಯ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಪ್ರತಿ ದಿನವೂ, ತನ್ನ ತಾಯಿಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆದರೆ, ಡೆಹ್ರಾಡೂನ್‌ಗೆ ಶಿಫ್ಟ್ ಆದ ಬಳಿಕ 2010ರ ಅಕ್ಟೋಬರ್ 17 ರಿಂದ ಸ್ಥಗಿತಗೊಂಡಿದ್ದವು. ಇದೇ ಕಾರಣಕ್ಕಾಗಿ ಒಂದು ದಿನ ಅನುಪಮಾ ಅವರ ಸಹೋದರ, ಡೆಹ್ರಾಡೂನ್‌ನ ಅವರ ಮನೆಗೆ ಹೋಗಿದ್ದ.
ಸಹೋದರಿಯನ್ನು ಸಂಪರ್ಕಿಸಲು ಪದೇ ಪದೇ ವಿಫಲ ಪ್ರಯತ್ನಗಳ ನಂತರ, ಆಕೆಯ ಸಹೋದರ 2010ರ ಡಿಸೆಂಬರ್ 12 ರಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ರಾಜೇಶ್ ಮೊದಲು ತನ್ನ ಮನೆಗೆ ಪ್ರವೇಶಿಸಲು ಯಾರಿಗೂ ಅವಕಾಶ ನೀಡಿರಲಿಲ್ಲ. ಆದರೆ, ಪೊಲೀಸರು ಕಠಿಣ ಎಚ್ಚರಿಕೆ ನೀಡಿದ ಬಳಿಕ ಭಯಾನಕ ಘಟನೆ ಬೆಳಕಿಗೆ ಬಂದಿತ್ತು. ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ರಾಜೇಶ್ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಆ ಬಳಿಕ ಪತ್ನಿಯ ಶವವನ್ನು ಸ್ಟೋನ್ ಕಟರ್ ಬಳಸಿ 72 ತುಂಡುಗಳನ್ನಾಗಿ ಮಾಡಿದ್ದ. ಕತ್ತರಿಸಿದ ತುಂಡುಗಳನ್ನು ಮನೆಯಲ್ಲಿಯೇ ಇದ್ದ ಡೀಪ್ ಫ್ರೀಜರ್‌ನಲ್ಲಿ ಇರಿಸಿದ್ದ. ದೆಹಲಿಯಲ್ಲಿ ಅಫ್ತಾಬ್ ಮಾಡಿದಂತೆಯೇ ಪ್ರತಿ ದಿನ ರಾತ್ರಿ ಇಂಥ ತುಂಡುಗಳನ್ನು ತೆಗೆದುಕೊಂಡು ಮಸೂರಿಯ ಕಾಡುಗಳು ಹಾಗೂ ಚರಂಡಿಗೆ ಎಸೆದು ಬರುತ್ತಿದ್ದ.
Shraddha Murder Case: ಪ್ರೀತಿ ಜೊತೆ ಪ್ರೇಮಿ ಸ್ವಭಾವದ ಬಗ್ಗೆಯೂ ಇರಲಿ ಕಣ್ಣು
2017 ರಲ್ಲಿ, ಡೆಹ್ರಾಡೂನ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅನುಪಮಾ ಗುಲಾಟಿಯ ಕ್ರೂರ ಹತ್ಯೆಯನ್ನು ಘೋರ ಅಪರಾಧ ಎಂದು ಪರಿಗಣನೆ ಮಾಡಿತ್ತು. ಈ ಕೊಲೆಯ ಆರೋಪಿ ಅನುಪಮಾ ಪತಿ ರಾಜೇಶ್‌ಗೆ ಸದ್ಯ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸದ್ಯ ರಾಜೇಶ್ ಗುಲಾಟಿ ಜೈಲಿನಲ್ಲಿದ್ದಾರೆ. ಆದರೆ, ಅನಾರೋಗ್ಯದ ಕಾರಣಕ್ಕಾಗಿ ಈ ವರ್ಷದ ಜುಲೈ ಹಾಗೂ ಸೆಪ್ಟೆಂಬರ್‌ನಲ್ಲಿ ಒಟ್ಟು 55 ದಿನಗಳ ಕಾಲ ಜಾಮೀನು ಪಡೆದು ಹೊರಬಂದಿದ್ದರು. ಇದರ ಬೆನ್ನಲ್ಲಿಯೇ ಅವರು ಮತ್ತೊಂದು ಪೆರೋಲ್ ಅರ್ಜಿ ಹಾಕಿದ್ದರೂ ಅದನ್ನು ಕೋರ್ಟ್ ವಿಸ್ತರಣೆ ಮಾಡಿಲ್ಲ.
ಶ್ರದ್ಧಾ ದುಡ್ಡಲ್ಲೇ ದೇಹದ ಭಾಗಗಳಿಡಲು ಫ್ರಿಡ್ಜ್ ಖರೀದಿ: ಬಂಬಲ್‌ನಿಂದ ಅಫ್ತಾಬ್ ಮಾಹಿತಿ ಕೇಳಿದ ಪೊಲೀಸರು
ರಾಜೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಅಂದಿನ ಎಸ್‌ಪಿ ಗಣೇಶ್ ಸಿಂಗ್ ಮಾರ್ಟೋಲಿಯಾ ಅವರು ತಮ್ಮ ವೃತ್ತಿಜೀವನದಲ್ಲಿ ಇಂತಹ ಭೀಕರ ಹತ್ಯಾಕಾಂಡವನ್ನು ನೋಡಿಲ್ಲ ಎಂದು ಆ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದರು. ಇಂತಹ ಕೊಲೆಗಳು ಏಕಾಏಕಿ ಸಂಭವಿಸುವುದಿಲ್ಲ, ಆದರೆ ನಿರಂತರ ಜಗಳಗಳಿಂದ ಜನರು ಕ್ರೂರ ಮನಸ್ಥಿತಿಗೆ ಒಳಗಾಗುತ್ತಾರೆ. ದಂಪತಿ ಜಗಳಗಳನ್ನು ಸಕಾಲದಲ್ಲಿ ಪರಿಹರಿಸಿಕೊಂಡರೆ ಇಂತಹ ಭೀಕರ ಕೊಲೆಗಳನ್ನು ತಡೆಯಬಹುದು ಎಂದಿದ್ದರು.